ಶಿಗ್ಗಾಂವಿ ಕ್ಷೇತ್ರದಲ್ಲಿ ಆದಷ್ಟು ಅಭಿವೃದ್ಧಿ ನಿಮ್ಮ ಕ್ಷೇತ್ರದಲ್ಲಿ ಆಗಿದೆಯಾ: ಬೊಮ್ಮಾಯಿ

| Published : Nov 07 2024, 12:38 AM IST

ಶಿಗ್ಗಾಂವಿ ಕ್ಷೇತ್ರದಲ್ಲಿ ಆದಷ್ಟು ಅಭಿವೃದ್ಧಿ ನಿಮ್ಮ ಕ್ಷೇತ್ರದಲ್ಲಿ ಆಗಿದೆಯಾ: ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ನಿಮ್ಮ ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಅಂತ ನೀವು ಸಿಎಂ ಆಗಿದ್ದಾಗಲೇ ಜನರು ನಿಮ್ಮನ್ನು ಸೋಲಿಸಿ ಕಳುಹಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು

ಕನ್ನಡಪ್ರಭ ವಾರ್ತೆ ಹಾವೇರಿ (ಶಿಗ್ಗಾಂವಿ)

ಶಿಗ್ಗಾಂವಿ-ಸವಣೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಪ್ರಶ್ನಿಸುವ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ಒಂದು ಸಾರಿ ನನ್ನ ಕ್ಷೇತ್ರದಲ್ಲಿ ತಿರುಗಾಡಿ ಬನ್ನಿ, ನನ್ನ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ನಿಮ್ಮ ಕ್ಷೇತ್ರದಲ್ಲಿ ಆಗಿದೆಯಾ? ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.

ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ನಾರಾಯಣಪುರ, ಇಬ್ರಾಹಿಂಪುರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು. ನನ್ನ ಕ್ಷೇತ್ರಕ್ಕೆ ಬಂದು ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡುವ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ನಿಮ್ಮ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂದು ನನಗೂ ಗೊತ್ತಿದೆ. ನಾನೂ ಅಲ್ಲಿ ತಿರುಗಾಡಿ ಬಂದಿದ್ದೇನೆ. ನಿಮ್ಮ ಕ್ಷೇತ್ರದ ಜನರು ಏನು ಅನ್ನುತ್ತಾರೆ ಎನ್ನುವುದು ನನಗೂ ಗೊತ್ತಿದೆ. ನಿಮ್ಮ ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಅಂತ ನೀವು ಸಿಎಂ ಆಗಿದ್ದಾಗಲೇ ಜನರು ನಿಮ್ಮನ್ನು ಸೋಲಿಸಿ ಕಳುಹಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಈಗ ತಮ್ಮ ಕ್ಷೇತ್ರಕ್ಕೆ ₹೫೦೦ ಕೋಟಿ ಮಂಜೂರು ಮಾಡಿಕೊಂಡು ಅಡಿಗಲ್ಲು ಸಮಾರಂಭ ಮಾಡಿದ್ದಾರೆ. ಇವರು ಒಂದು ಕ್ಷೇತ್ರಕ್ಕೆ ಮುಖ್ಯಮಂತ್ರಿನಾ, ಇಡೀ ರಾಜ್ಯಕ್ಕೆ ಮುಖ್ಯಮಂತ್ರಿನಾ ಎಂದು ಪ್ರಶ್ನಿಸಿದರು.

ನಾನು ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮಂಜೂರಾತಿ ಮಾಡಿದ ₹೩೦೦ ಕೋಟಿ ವಾಪಸ್ ತೆಗೆದುಕೊಂಡರು. ಈ ಕ್ಷೇತ್ರದ ರಸ್ತೆ, ಬ್ರಿಡ್ಜ್, ಹೊಲದ ರಸ್ತೆ, ಸಭಾಭವನ ಎಲ್ಲವೂ ಅಭಿವೃದ್ಧಿ ಮಾಡುವುದಿತ್ತು. ಅಷ್ಟೇ ಅಲ್ಲ ಮಸೀದಿ, ದರ್ಗಾ ಅಭಿವೃದ್ಧಿಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ₹೧೦ ಕೋಟಿ, ಬಿಡುಗಡೆ ಮಾಡಿ ಡಿಸಿ ಅಕೌಂಟ್‌ಗೆ ಬಂದಿರುವುದನ್ನು ವಾಪಸ್ ತೆಗೆದುಕೊಂಡಿದ್ದಾರೆ. ಇವರು ಈ ಕ್ಷೇತ್ರದ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರೈತರ ಅಭಿವೃದ್ಧಿ ಇಲ್ಲ, ಗ್ರಾಮೀಣ ಅಭಿವೃದ್ಧಿ ಇಲ್ಲ, ವಿದ್ಯಾರ್ಥಿಗಳಿಗೆ ಬಸ್ ಇಲ್ಲದ ಹಾಗೆ ಮಾಡಿದ್ದಾರೆ. ಹಿಂದುಳಿದ ವರ್ಗ, ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ನಾವು ನೀಡುತ್ತಿದ್ದ ಶಿಷ್ಯವೇತನ ಸ್ಥಗಿತಗೊಳಿಸಿದ್ದಾರೆ. ಇವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದರು.

ಈ ಕ್ಷೇತ್ರದಲ್ಲಿ ಯಾವುದೇ ಭೇದ ಭಾವ ಮಾಡದೇ ಅಭಿವೃದ್ಧಿ ಮಾಡಿದ್ದೇನೆ. ಯಾವುದೇ ಕೋಮುಗಲಭೆ ಇಲ್ಲದಂತೆ ನೋಡಿಕೊಂಡಿದ್ದೇನೆ. ನಾನು ಈ ಕ್ಷೇತ್ರಕ್ಕೆ ಬಂದ ಮೇಲೆ ಎಲ್ಲರನ್ನು ಒಟ್ಟುಗೂಡಿಸಿ ಸೌಹಾರ್ದ ಮೂಡಿಸಿದ್ದೇವೆ. ಸೌಹಾರ್ದವಿದ್ದರೆ, ಶಾಂತಿ ಇರುತ್ತದೆ. ಶಾಂತಿ ಇದ್ದರೆ ಪ್ರಗತಿಯಾಗುತ್ತದೆ. ಇಲ್ಲಿ ಹಾನಗಲ್ ರಾಜಕಾರಣ ನಡೆಯುತ್ತಿದೆ. ಪೊಲೀಸ್ ಸ್ಟೇಷನ್ ರಾಜಕಾರಣ ಬೇಕಾ, ಸೌಹಾರ್ದ ರಾಜಕಾರಣ ಬೇಕಾ? ನೀವೆಲ್ಲ ಪ್ರಜ್ಞಾವಂತರಿದ್ದೀರಿ, ಪ್ರತಿಬಾರಿಯೂ ನನಗೆ ಬೆಂಬಲ ನೀಡುತ್ತ ಬಂದಿದ್ದೀರಿ, ಅವರೆಲ್ಲ ಬಂದು ಎರಡು ದಿನ ಜಾತ್ರೆ ಮಾಡಿ ಹೋಗುತ್ತಾರೆ. ನಾವು ನೀವು ಜತೆಯಲ್ಲಿ ಇರುವವರು ಎಂದರು.