ಸಾರಾಂಶ
ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವಿನ ಸಂಘರ್ಷ ಅತಿರೇಕಕ್ಕೆ ಹೋದ ಪರಿಣಾಮ ಸಭೆಯನ್ನು ಮುಂದೂಡಲಾಯಿತು.ಸೆಪ್ಟೆಂಬರ್ ತಿಂಗಳ ನಂತರ ಸಾಮಾನ್ಯ ಸಭೆ ಕರೆದಿಲ್ಲ. ಅಲ್ಲದೇ, ವಿಶೇಷ ಸಾಮಾನ್ಯ ಸಭೆ ನಡೆದಿದ್ದರೂ ಅದರಲ್ಲಿ ಆಯಾ ವಿಷಯ ಹೊರತುಪಡಿಸಿ, ಬೇರೆ ಸಮಸ್ಯೆಗಳ ಚರ್ಚೆಗೆ ಅವಕಾಶವಿರಲಿಲ್ಲ. ಸದಸ್ಯರೇ ಮಾಡಿಕೊಟ್ಟ ಕ್ರಿಯಾಯೋಜನೆ ಬದಲಿಸಲಾಗುತ್ತದೆ. ಅಧಿಕಾರಿಗಳೇ ತಮಗೆ ಬೇಕಾದ ಹಾಗೆ ಆಡಳಿತ ನಡೆಸುವುದಾದರೆ ಜನಪ್ರತಿನಿಧಿಗಳ ಅಸ್ತಿತ್ವಕ್ಕೆ ಬೆಲೆಯೇನು? ಎಂದು ಸದಸ್ಯರಾದ ಸತೀಶ ನಾಯ್ಕ, ರಾಧಾಕೃಷ್ಣ ನಾಯ್ಕ, ಮುಖ್ಯಾಧಿಕಾರಿ ಸುನೀಲ ಗಾವಡೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಹಿಂದಿನ ಸಭೆಯಲ್ಲಿ ನಾವು ಪ್ರಸ್ತಾಪಿಸಿದ ವಿಚಾರಗಳ ಬಗ್ಗೆ ಏನು ಕ್ರಮ ಕೈಗೊಂಡರು ಎಂಬುದನ್ನು ತಿಳಿಸುವುದಿಲ್ಲ. ನಮಗೆ ಎಲ್ಲವೂ ಮರೆತ ನಂತರ ಸಭೆ ಕರೆದು, ತಮಗೆ ಬೇಕಾದ ಹಾಗೆ ಅನುಮೋದನೆ ಪಡೆಯಲಾಗುತ್ತದೆ ಎಂದು ದೂರಿದರು.ಅಧ್ಯಕ್ಷೆ ನರ್ಮದಾ ನಾಯ್ಕ ಅವರಲ್ಲಿ ಕೇಳಿದಾಗ, ಸಭೆ ಕರೆಯುವಂತೆ ಮುಖ್ಯಾಧಿಕಾರಿಗಳಿಗೆ ನಾನು ತಿಳಿಸಿದ್ದೆ ಎಂದರು. ಆಗ ಅಧ್ಯಕ್ಷರ ಮಾತಿಗೆ ಮುಖ್ಯಾಧಿಕಾರಿಗಳು ಗೌರವ ನೀಡುತ್ತಾರೋ, ಇಲ್ಲವೊ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಸದಸ್ಯ ಕೈಸರ್ ಸೈಯ್ಯದ್ ಅಲಿ ಅವರು ಅಧ್ಯಕ್ಷೆ ನರ್ಮದಾ ನಾಯ್ಕ ಅವರಲ್ಲಿ ಆಗ್ರಹಿಸಿದರು. ಅದಕ್ಕೆ ಮೌನವೇ ಅಧ್ಯಕ್ಷರ ಉತ್ತರವಾಗಿತ್ತು. ಜನರಿಂದ ಆಯ್ಕೆಯಾದ ನಮ್ಮ ಮಾತಿಗೆ ಬೆಲೆ ಇಲ್ಲದ ಮೇಲೆ ಸಭೆಯಲ್ಲಿ ಕುಳಿತು ಪ್ರಯೋಜನ ಇಲ್ಲ ಎಂದು ಸದಸ್ಯರಾದ ಸತೀಶ ನಾಯ್ಕ, ಶ್ಯಾಮಿಲಿ ಪಾಟಣಕರ್, ಕೈಸರ್ ಅಲಿ ಹಾಗೂ ಶ್ರೀನಿವಾಸ ಗಾಂವ್ಕರ ಸಭಾತ್ಯಾಗ ಮಾಡಿದರು. ನಂತರ ಸಭೆಯನ್ನು ಮುಂದೂಡಲಾಯಿತು. ಇದಕ್ಕೂ ಮುನ್ನ ಹಿತ್ಲಕಾರಗದ್ದೆಯ ಧಾತ್ರಿ ನಗರ ಲೇಔಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ನಡೆದ ಚರ್ಚೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಮೂಲ ಸೌಕರ್ಯ ಕಲ್ಪಿಸುವ ಮುನ್ನವೇ ಲೇಔಟನ್ನು ಪಪಂ ಹಸ್ತಾಂತರಿಸಿದೆ. ರಸ್ತೆ, ಕುಡಿಯುವ ನೀರು, ಉದ್ಯಾನವನ ಇತರ ಎಲ್ಲ ವ್ಯವಸ್ಥೆಗಳಾದ ನಂತರವೇ ಹಸ್ತಾಂತರಿಸಿಕೊಳ್ಳಬೇಕಿತ್ತು. ಆ ವಿಷಯದಲ್ಲಿ ಅಧಿಕಾರಿಗಳು ಎಡವಿದ್ದಾರೆ. ಈಗ ಕುಡಿಯುವ ನೀರಿಗಾಗಿ ಅಲ್ಲಿನ ಮಂಜುನಾಥ ಹೆಗಡೆ ಅವರು ಪ್ರತಿಭಟನೆ ನಡೆಸಿದ್ದು, ಒಂದು ವಾರದೊಳಗೆ ವ್ಯವಸ್ಥೆ ಕಲ್ಪಿಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿ ಬಂದಿದ್ದಾರೆ.
ಮೂಲ ಸೌಕರ್ಯ ಒದಗಿಸುವುದು ಲೇಔಟ್ ಡೆವಲಪರ್ ಕರ್ತವ್ಯವಾಗಿತ್ತು. ಅವರಿಗೆ ನೋಟಿಸ್ ನೀಡಿ, ಅವರಿಂದಲೇ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಪಪಂನಿಂದ ನೀಡುವುದಾಗಿ ಮಾತು ಕೊಟ್ಟಿರುವುದು ಸರಿಯಲ್ಲ. ಜನರ ತೆರಿಗೆ ಹಣ ವ್ಯರ್ಥವಾಗಬಾರದು. ಪಪಂನಿಂದ ಲೇಔಟ್‌ಗೆ ನೀರು ನೀಡಲು ಹಣ ನೀಡಬಾರದು. ಒಂದು ವೇಳೆ ನೀಡಿದಲ್ಲಿ, ಪಪಂ ಎದುರು ಪ್ರತಿಭಟನೆ ನಡೆಸುವುದಾಗಿ ಸತೀಶ ನಾಯ್ಕ ಎಚ್ಚರಿಸಿದರು. ಪಟ್ಟಣದ ವಿವಿಧೆಡೆ ಲಕ್ಷಾಂತರ ರು. ವೆಚ್ಚದಲ್ಲಿ ಸಿಸಿ ಕ್ಯಾಮೆರಾ ಹಾಕಿದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸದಸ್ಯ ಸೋಮು ನಾಯ್ಕ ದೂರಿದರು. ಫುಟ್‌ಪಾತ್ ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ನೀಡಿ, ತೆರವು ಮಾಡದಿದ್ದಲ್ಲಿ ಕಾರ್ಯಾಚರಣೆ ನಡೆಸಿ ತೆರವು ಮಾಡಲಾಗುವುದೆಂದು ಮುಖ್ಯಾಧಿಕಾರಿ ಹೇಳಿದರು. ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ ಇತರರು ಉಪಸ್ಥಿತರಿದ್ದರು.