ಸಾರಾಂಶ
ದಾಬಸ್‍ಪೇಟೆ: ಕಳೆದ 15 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಪಟ್ಟಣದ ಶಿವಗಂಗೆ ರಸ್ತೆಯ ರಾಜ್ಯ ಹೆದ್ದಾರಿಯ ಶಿವಗಂಗೆ ಸರ್ಕಲ್‌ನ ವೀರಸಾಗರ ರಸ್ತೆಯಲ್ಲಿ ಮಳೆ ನೀರು ನಿಂತು ಜನ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ರಸ್ತೆ ಮೇಲೆ ಒಂದೂವರೆ ಅಡಿ ನೀರು:ವ್ಯಾಪಕ ಮಳೆ ಬಂದಾಗ ರಸ್ತೆಯ ಮೇಲೆ ಒಂದೂವರೆ ಅಡಿಯಷ್ಟು ನೀರು ನಿಲ್ಲುವುದರಿಂದ ರಸ್ತೆ ಯಾವುದು ಎನ್ನುವುದು ಕೂಡ ತಿಳಿಯುವುದಿಲ್ಲ. ಇಲ್ಲಿ ದೊಡ್ಡಮಳೆ ಬಂದರೆ ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಾಗುತ್ತದೆ.
ರಾಜಕಾಲುವೆಗಳು ಅತಿಕ್ರಮಣ:ಪಟ್ಟಣದಲ್ಲಿ ಮನೆ ಕಟ್ಟಡಗಳ ಸಂಖ್ಯೆ ಹೆಚ್ಚಾಗಿತ್ತಿದ್ದು ಕೆಲವೆಡೆ ರಾಜಕಾಲುವೆಗಳು ಒತ್ತುವಾರಿ ಆಗಿರುವುದರಿಂದ ಅದಿಕವಾಗಿ ನೀರು ಹೋಗಲು ಸಾಧ್ಯವಾಗದೆ ಇರುವುದರಿಂದ ನೀರು ರಸ್ತೆಯಲ್ಲಿ ನಿಂತು ಕೆರೆಯಂತಾಗಿದೆ.
ಚರಂಡಿ ನಿರ್ಮಿಸಲು ಸಮಸ್ಯೆ:ರಸ್ತೆ ಪಕ್ಕದಲ್ಲೇ ಕೆಇಬಿ ವಿದ್ಯುತ್ ಉಪಕೇಂದ್ರವಿದ್ದು, ರಸ್ತೆ ಪಕ್ಕಕ್ಕೆ ಚರಂಡಿ ನಿರ್ಮಾಣ ಮಾಡಲು ಹೋದರೆ ಭೂಮಿ ಕೆಳಗಡೆ ವಿದ್ಯುತ್ ತಂತಿಗಳಿದ್ದು ಕೆಇಬಿ ಇಲಾಖೆಯೂ ಅನುಮತಿ ನೀಡುತ್ತಿಲ್ಲವೆನ್ನಲಾಗಿದೆ.
ಎಂಜಿನಿಯರ್, ಗುತ್ತಿಗೆದಾರನ ಎಡವಟ್ಟು:ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ಈ ರಸ್ತೆಯನ್ನು ನಿರ್ಮಿಸಿದ್ದು ಅಗಲೀಕರಣ ಮಾಡಲಾಗಿದೆ. ಕಾಮಗಾರಿ ಸಂದರ್ಭದಲ್ಲಿ ಎಂಜಿನಿಯರ್ ಹಾಗೂ ಗುತ್ತಿಗೆದಾರರು ರಸ್ತೆಯ ಒಂದು ಭಾಗಕ್ಕೆ ಚರಂಡಿ ಮಾಡಿದ್ದು ಆ ಚರಂಡಿಗೆ ಮಳೆ ನೀರು ಹೋಗುವಂತೆ ರಸ್ತೆ ನಿರ್ಮಿಸಿದ್ದರೆ ಮಳೆ ನೀರು ಚರಂಡಿ ಮುಖಾಂತರ ಹೊರ ಹೋಗುತ್ತಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ತಿಳಿಸಿದರೂ ಗಮನ ಕೊಡದೆ ರಸ್ತೆ ನಿರ್ಮಿಸಿದ್ದು ಮಳೆ ನೀರು ನಿಲ್ಲುವುದಕ್ಕೆ ಪ್ರಮುಖ ಕಾರಣವಾಗಿದೆ.
ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಈ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.ಪೋಟೋ 7 :
ದಾಬಸ್‌ಪೇಟೆ ಪಟ್ಟಣದ ಶಿವಗಂಗೆ ಸರ್ಕಲ್ ವೀರಸಾಗರ ರಸ್ತೆಯಲ್ಲಿ ಮಳೆ ನೀರು ನಿಂತಿರುವುದು.