ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಗ್ರಾಮೀಣ ಜನರಲ್ಲಿ ಹುರುಪು ತುಂಬುವ ಉದ್ದೇಶದಿಂದ ಈಶ ಫೌಂಡೇಶನ್ ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾದ ಈಶ ಗ್ರಾಮೋತ್ಸವವನ್ನು ಕರ್ನಾಟಕ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿತ್ತು.ತಾಲೂಕಿನ ಆವಲಗುರ್ಕಿ ಬಳಿ ಈಶ ಯೋಗ ಕೇಂದ್ರದಲ್ಲಿರುವ 112 ಅಡಿ ಎತ್ತರದ ಆದಿ ಯೋಗಿ ಎದುರು ಭಾನುವಾರ ನಡೆದ ವಿಭಾಗೀಯ ಪಂದ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ ಸೇರಿ ರಾಜ್ಯದ 18 ಜಿಲ್ಲೆಗಳ 19 ಕ್ಲಸ್ಟರ್ ಗಳಲ್ಲಿ ಈಗಾಗಲೇ ಗ್ರಾಮಮಟ್ಟದ ಕ್ರೀಡಾ ಪಂದ್ಯಾವಳಿಗಳು ನಡೆದು, ಸದ್ಗುರು ಸನ್ನಿಧಿಯಲ್ಲಿ ಗೆದ್ದ ತಂಡಗಳ ವಿಭಾಗ ಮಟ್ಟದ ಪಂದ್ಯಾವಳಿ ನಡೆಯುತ್ತಿವೆ. ಗ್ರಾಮಮಟ್ಟದ ಪಂದ್ಯಾವಳಿಗಳು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ , ಪಾಂಡಿಚೇರಿ, ಪ್ರಥಮ ಬಾರಿಗೆ ಒಡಿಸ್ಸಾ ಸೇರಿ 35,000ಕ್ಕೂ ಹೆಚ್ಚು ಗ್ರಾಮಗಳನ್ನು ವ್ಯಾಪಿಸಿದೆ. ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ 112 ಅಡಿ ಎತ್ತರದ ಆದಿ ಯೋಗಿ ಎದುರು ಸೆಪ್ಟಂಬರ್ 21 ಅಂತಿಮ ಪಂದಾವಳಿಗಳು ನಡೆಯಲಿವೆ ಎಂದು ತಿಳಿಸಿದರು.
ಗ್ರಾಮೀಣ ಜನರ ಚೈತ್ನ್ಯಕ್ಕಾಗಿ ಕ್ರೀಡೋತ್ಸವ:ಗ್ರಾಮೀಣ ಭಾರತದ ಚೈತನ್ಯ ಪುನರುಜ್ಜೀವನಗೊಳಿಸಿ ಸಮುದಾಯ, ಸಂಪ್ರದಾಯ ಮತ್ತು ಆರೋಗ್ಯಕರ ಸ್ಪರ್ಧೆಯ ಪ್ರಜ್ಞೆ ಬೆಳೆಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಭಾಗದ ಸಾಮಾನ್ಯ ಮಹಿಳೆಯರು ಮತ್ತು ಪುರುಷರು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. 2025ರ ಈಶ ಗ್ರಾಮೋತ್ಸವದಲ್ಲಿ 700 ತಂಡಗಳೊಂದಿಗೆ 50 ಸಾವಿರಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದಾರೆ ಎಂದರು.
2004ರಲ್ಲಿ ಪ್ರಾರಂಭವಾದ ಗ್ರಾಮೋತ್ಸವದಡಿ ಈ ವರ್ಷ ಪುರುಷರಿಗಾಗಿ ವಾಲಿಬಾಲ್, ಮಹಿಳೆಯರಿಗಾಗಿ ಥ್ರೋಬಾಲ್ ಮತ್ತು ತಮಿಳುನಾಡಿನ ಗ್ರಾಮೀಣ ಆಟಗಳು ಹಾಗೂ ವಿವಿಧ ಸ್ಪರ್ಧೆ ಕೈಗೊಂಡಿದ್ದೆವು. ವಾಲಿಬಾಲ್ ಪಂದ್ಯಾವಳಿ ವಿಜೇತರಿಗೆ 5 ಲಕ್ಷ ರು. ಕಬ್ಬಡಿ ಮತ್ತು ಥ್ರೋಬಾಲ್‌ನಲ್ಲಿ ಗೆದ್ದ ತಂಡಗಳಿಗೆ ತಲಾ 5 ಲಕ್ಷ ರು. ನೀಡಲಾಗುತ್ತದೆಂದು ತಿಳಿಸಿದರು.ಉಚಿತ ನೋಂದಣಿ:
ಈಶ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮೋತ್ಸವದಲ್ಲಿ ಭಾಗವಹಿಸಲು ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ನೋಂದಣಿ ಉಚಿತವಾಗಿತ್ತು. ಪುರುಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆ ಆಯೋಜಿಸಲಾಗಿತ್ತು. ಇಂದು ಇಲ್ಲಿ ನಡೆದ ವಿಭಾಗೀಯ ಪಂದ್ಯಾವಳಿಗಳನ್ನು ಮಳೆ ಲೆಕ್ಕಿಸದೇ ಹುರುಪಿನಿಂದ ಆಡಿದ್ದು, ನೋಡಿದಾಗ ಗ್ರಾಮೀಣ ಜನರಲ್ಲಿ ಹುರುಪು ತುಂಬುವ ಉದ್ದೇಶ ಈಡೇರಿದೆ ಎನಿಸಿದೆ ಎಂದರು.ಸಂಜೆ ನಡೆದ ವಿಭಾಗೀಯ ಪಂದ್ಯಗಳಲ್ಲಿ ಪುರುಷರ ವಾಲಿಬಾಲ್ ಪಂದ್ಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಂಡ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ತಂಡಗಳ ನಡುವೆ ನಡೆದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ತಂಡ ಜಯಗಳಿಸಿದರೆ, ಮಹಿಳೆಯರ ಥ್ರೋಬಾಲ್ ಪಂದ್ಯವು ಕೊಡಗು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ನಡೆದು ಕೊಡಗು ಜಿಲ್ಲೆ ಜಯಗಳಿಸಿತು. ನೆರೆದ ಪ್ರೇಕ್ಷಕರು ಡ್ಯಾನ್ಸ್ ಮಾಡುತ್ತಾ ಆಟಗಾರರನ್ನು ಹುರಿದುಂಬಿಸುತ್ತಿದ್ದರು.
ಮಾಜಿ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ ಮತ್ತು ಚಲನಚಿತ್ರ ನಟಿ ಶ್ರೀನಿಧಿ ಶೆಟ್ಟಿ ಗೆದ್ದ ತಂಡಗಳಿಗೆ ಟ್ರೋಫಿ ನೀಡಿದರು.-------
ಈ ಉತ್ಸವವು ಗ್ರಾಮೀಣ ಜನರು ವ್ಯಸನಗಳಿಂದ ಮುಕ್ತರಾಗಲು, ಜಾತಿ, ಮತ ಮತ್ತು ಧಾರ್ಮಿಕ ವಿಭಜನೆಗಳನ್ನು ಮೀರಿ ನಿಲ್ಲಲು ಸಹಾಯ ಮಾಡುತ್ತದೆ ಮತ್ತು ಸಮುದಾಯ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಸಕ್ರಿಯವಾಗಿ ಹೆಚ್ಚಿಸುತ್ತದೆ. ವೃತ್ತಿಪರ ಪಂದ್ಯಾವಳಿಗಳಿಗಿಂತ ಭಿನ್ನವಾಗಿ, ಗ್ರಾಮೋತ್ಸವವು ಗ್ರಾಮೀಣ ಜನಸಾಮಾನ್ಯರಿಗೆ ಆಟವಾಡಲು, ಸ್ಪರ್ಧಿಸಲು ಕ್ರೀಡೆ ಮತ್ತು ಸಂಸ್ಕೃತಿಯ ಐಕ್ಯತೆಯನ್ನು ಆಚರಿಸಲು ವೇದಿಕೆಯನ್ನು ಒದಗಿಸಿದೆ.- ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್