ತನು, ಮನಃ ಶುದ್ಧಿಗೆ ಇಷ್ಟಲಿಂಗ ಪೂಜೆ ಸಹಕಾರಿ

| Published : Dec 19 2023, 01:45 AM IST

ಸಾರಾಂಶ

ಗೋಕುಲ ರಸ್ತೆಯಲ್ಲಿರುವ ಬಸವ ಕೇಂದ್ರದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಸಂಯೋಜಿಸಿದ ವಚನಶಾಸ್ತ್ರಸಾರ ಶತಮಾನೋತ್ಸವ - ಷಟ್‌ಸ್ಥಲ ವಚನ ಪ್ರವಚನ ಸೋಮವಾರ ಮಂಗಲವಾಯಿತು. ಈ ವೇಳೆ ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿ, ನಮ್ಮ ತನು, ಮನಃ, ಭಾವ ಶುದ್ಧಿಗೆ ಇಷ್ಟಲಿಂಗ ಪೂಜೆ ಸಹಕಾರಿಯಾಗಿದೆ ಎಂದು ಹೇಳಿದರು.

- ವಚನಶಾಸ್ತ್ರಸಾರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ತೋಂಟದ ಶ್ರೀಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಮ್ಮ ತನು, ಮನಃ, ಭಾವ ಶುದ್ಧಿಗೆ ಇಷ್ಟಲಿಂಗ ಪೂಜೆ ಸಹಕಾರಿಯಾಗಿದೆ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು ಹೇಳಿದರು.

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಬಸವ ಕೇಂದ್ರದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಸಂಯೋಜಿಸಿದ ವಚನಶಾಸ್ತ್ರಸಾರ ಶತಮಾನೋತ್ಸವ - ಷಟ್‌ಸ್ಥಲ ವಚನ ಪ್ರವಚನ ಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಲಿಂಗಾಯತರು ವೈದಿಕ ಆಚರಣೆ ಬಿಟ್ಟು ಕೊರಳಲ್ಲಿ ಲಿಂಗ, ರುದ್ರಾಕ್ಷಿ, ಹಣೆಗೆ ವಿಭೂತಿ ಧರಿಸಬೇಕು. ಸ್ವಾಭಿಮಾನದಿಂದ ನಾವು ಲಿಂಗಾಯತರು ಎಂದು ಹೇಳಿಕೊಳ್ಳಬೇಕು. ನಿತ್ಯವೂ ಇಷ್ಟಲಿಂಗ ಪೂಜೆ ಮಾಡುವುದರಿಂದ ತನು, ಮನ, ಭಾವ ಶುದ್ಧವಾಗುತ್ತವೆ. ವೈದಿಕ ಆಚರಣೆಗಳ ವಿರುದ್ಧ ಹುಟ್ಟಿಕೊಂಡ ಧರ್ಮವೇ ಲಿಂಗಾಯತ. ಬಸವಣ್ಣನವರು ವೈದಿಕ ಆಚರಣೆ ಕಂಡು ರೋಸಿಹೋಗಿ, ಮಾನವನನ್ನು ಪರಮಾತ್ಮನಾಗಿ ಪರಿವರ್ತನೆ ಮಾಡುವ ಉದ್ದೇಶ ಇಟ್ಟುಕೊಂಡು ಲಿಂಗಾಯತ ಧರ್ಮ ಸ್ಥಾಪಿಸಿದರು.

ಮನೆಯಲ್ಲಿ ಹಿರಿಯರು ಧಾರ್ಮಿಕ ಆಚರಣೆ ಮಾಡಬೇಕು. ಮಕ್ಕಳು ನೋಡಿ ಅನುಕರಣೆ ಮಾಡಲು ಆರಂಭಿಸುತ್ತಾರೆ. ಮಕ್ಕಳಿಗೆ ಲಿಂಗಾಯತ ಧರ್ಮದ ಆಚರಣೆ ತಿಳಿಸಿಕೊಡಬೇಕು. ಮನೆಯಲ್ಲಿ ಪೂಜೆ ಮಾಡಿಕೊಳ್ಳಲು ಪ್ರಶಸ್ತವಾದ ಪೂಜಾ ಗೃಹ ನಿರ್ಮಿಸಬೇಕು. ಧಾರ್ಮಿಕ ಹಾಗೂ ತಾತ್ವಿಕ ವಿಚಾರಗಳನ್ನು ತಿಳಿದುಕೊಳ್ಳಲು ಪ್ರವಚನಗಳು ಸಹಕಾರಿಯಾಗುತ್ತವೆ. ವ್ಯಕ್ತಿತ್ವ ವಿಕಾಸ ಹೊಂದಲು ಪ್ರವಚನಗಳಲ್ಲಿ ಭಾಗವಹಿಸಿ ತತ್ವ ತಿಳಿದುಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಪ್ರವಚನಕಾರ ಶಶಿಧರ ಕರವೀರಶೆಟ್ಟರ, ಎಂ.ವಿ. ಗೊಂಗಡಶೆಟ್ಟಿ, ನೀಲಕಂಠ ಅಸೂಟಿ ಮಾತನಾಡಿದರು.

ಇದೇ ವೇಳೆ ಎಂ.ವಿ. ಗೊಂಗಡಶೆಟ್ಟಿ, ಶಾಂತಾ ಗೊಂಗಡಶೆಟ್ಟಿ, ಮೃತ್ಯುಂಜಯ ಮರೋಳ, ಮುರಗೇಶ ಅಳಗುಂಡಗಿ, ದತ್ತು ಅವರನ್ನು ಸನ್ಮಾನಿಸಲಾಯಿತು.

ಪ್ರಭು ಅಂಗಡಿ, ಶಿವಯೋಗಿ ಮುರ್ಖಂಡೆ, ಎಂ.ಬಿ. ಕಟ್ಟಿ, ಶಿವನಗೌಡ ಪಾಟೀಲ, ಕೆ.ಎಸ್. ಇನಾಮತಿ, ಪ್ರಭು ಶೆಟ್ಟರ, ನಿಂಗಪ್ಪ ಶಾಗೋಟಿ, ನೀಲಾಂಬಿಕಾ ಹಳ್ಳಾಳ, ಡಾ. ಸ್ನೇಹಾ ಭೂಸನೂರ, ಬಿ.ಎಸ್. ಮಾಳವಾಡ, ಪ್ರೊ. ವಿ.ಬಿ. ಮಾಗನೂರ, ಎನ್.ಬಿ. ಬೆಳ್ಳಿಗಟ್ಟಿ, ಎಸ್.ವಿ. ಪಾಟೀಲ, ನಾಗೇಶ ಅಂಗಡಿ ಸೇರಿ ಹಲವರಿದ್ದರು.

ಬಸವಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಳಾಳ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಸ್ವಾಗತಿಸಿದರು. ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಸುರೇಶ ಹೊರಕೇರಿ ನಿರೂಪಿಸಿದರು. ಡಾ. ಪ್ರಕಾಶ ಮುನ್ನೋಳಿ ವಂದಿಸಿದರು.