ಫಕೃದ್ದೀನ್ ಎಂ.ಎನ್.

ನವಲಗುಂದ:

ಹೊಸ ವರ್ಷದ ಯುಗಾದಿಯ ಪ್ರತಿಪದದಂದು ಪಟ್ಟಣದ ಶ್ರೀರಾಮಲಿಂಗ ಕಾಮದೇವರು ಮಾ. 19ರಂದು ಮರುಹುಟ್ಟು ಪಡೆಯಲಿದೆ. ಯುಗಾದಿಯ ಪಾಡ್ಯದ ದಿನದಂದು ಬಾಲ್ಯಾವಸ್ಥೆಯಲ್ಲಿ ಕುಳಿತ ಭಂಗಿಯಲ್ಲಿ ರಾಮಲಿಂಗ ಕಾಮಣ್ಣನನ್ನು ಒಂದು ದಿನದ ಮಟ್ಟಿಗೆ ಮರು ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಹೋಳಿ ಹಬ್ಬದ ನಂತರ ಶಿವನ ಕೆಂಗ್ಗಣಿಗೆ ಗುರಿಯಾಗಿ ಸುಟ್ಟು ಭಸ್ಮವಾದ ಕಾಮದೇವರು. ಮರುಹುಟ್ಟು ನೆನಪಿಗಾಗಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅಂದು ಕೂಡ ಸಹಸ್ರಾರು ಭಕ್ತರು ಈ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಬಂದು ಹರಕೆ ಇಡುವುದು ಮತ್ತು ಹರಿಕೆ ತೀರಿಸುತ್ತಾರೆ. ಕಾಮಣ್ಣನ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲೆಂದು ಟ್ರಸ್ಟ್ ಕಮಿಟಿಯವರು ಉಸ್ತುವಾರಿ ವಹಿಸಿದ್ದಾರೆ.ಕಾಮದೇವರಿಗೆ ಯುಗಾದಿ ಪಾಡ್ಯದಂದು ಭಕ್ತರು ಮದುವೆ, ಮಕ್ಕಳು, ಸಂತಾನ ಭಾಗ್ಯ, ಮನೆ, ಆಸ್ತಿ, ಸಂಪತ್ತು, ಆರೋಗ್ಯ ಸೇರಿದಂತೆ ಇನ್ನಿತರೆ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಹುಣ್ಣಿಮೆಗೆ ಆಗಮಿಸದ ಭಕ್ತರು ಹರಕೆ ಫಲಿಸಿದ ತರುವಾಯ ಬೆಳ್ಳಿಯ ತೊಟ್ಟಿಲು, ಬಾಸಿಂಗ, ಛತ್ರಿ, ಚಾಮರ ನೀಡಲು ಸರತಿ ಸಾಲಿನಲ್ಲಿ ನಿಂತು ತಮ್ಮ ಇಷ್ಟಾರ್ಥ ಸಿದ್ದಿ ಹರಿಕೆ ತೀರಿಸುತ್ತಾರೆ. ಇದು ಕೂಡ ಕ್ವಿಂಟಲ್‌ಗಿಂತಲೂ ಅಧಿಕವಾಗುತ್ತದೆ. ಹೋಳಿ ಹುಣ್ಣಿಮೆಯಂದು ಪ್ರತಿ ವರ್ಷಕ್ಕಿಂತ ಈ ಬಾರಿ ಭಕ್ತರು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಬಂದಿದ್ದರು.

ರಾಜ್ಯ, ಹೊರರಾಜ್ಯದಲ್ಲಿ ಪ್ರಖ್ಯಾತಿ ಪಡೆದ ರಾಮಲಿಂಗ ಕಾಮಣ್ಣನನ್ನು ಮಾ. 19ರ ಬೆಳಗ್ಗೆ 6ರಿಂದ ರಾತ್ರಿ 10.30ರ ವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂದು ಕೂಡ ಭಕ್ತರು ತಮ್ಮ ಹರಿಕೆ ತೀರಿಸಬಹುದು.


ಯಲ್ಲಪ್ಪ ಭೋವಿ, ಕಾರ್ಯದರ್ಶಿ, ರಾಮಲಿಂಗೇಶ್ವರ ಟ್ರಸ್ಟ್ ಕಮಿಟಿ, ನವಲಗುಂದ