ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಚಾರಣಿಗರ ಸುರಕ್ಷತೆ ದೃಷ್ಟಿಯಿಂದ ಪ್ರತ್ಯೇಕ ಟ್ರ್ಯಾಕಿಂಗ್ ಮೊಬೈಲ್ ಆ್ಯಪ್ ಮತ್ತು ಗುಂಪು ವಿಮೆ ಮಾಡುವುದು ಸೇರಿ ದೇಶಕ್ಕೆ ಮಾದರಿಯಾಗುವಂತಹ ಪ್ರಮಾಣಿತ ಮಾನದಂಡ (ಎಸ್‌ಒಪಿ) ರೂಪಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಿರುವ ಈಶ್ವರ್ ಖಂಡ್ರೆ, ಇತ್ತೀಚಿನ ದಿನಗಳಲ್ಲಿ ರಾಜ್ಯದ ಚಾರಣ ತಾಣಗಳಿಗೆ ಬರುವ ಚಾರಣಿಗರು ಕಾಣೆಯಾಗುತ್ತಿದ್ದಾರೆ. ತಡಿಯಾಂಡಮೋಳ್ ಚಾರಣದ ವೇಳೆ ಕೇರಳದ ಶರಣ್ಯ ಎಂಬ ಮಹಿಳೆ 3 ದಿನ ಕಾಡಿನಲ್ಲಿ ದಿನ ಕಳೆದುಹೋಗಿದ್ದ ಹಾಗೂ ಚಂದ್ರದ್ರೋಣ ಪರ್ವತದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿ ನಾಪತ್ತೆಯಾಗಿರುವ ಪ್ರಕರಣ ನಡೆದಿದೆ. ಹೀಗಾಗಿ ಅರಣ್ಯ ಈಗಾಗಲೇ ಅಭಿವೃದ್ಧಿಪಡಿಸಿರುವ ಇ-ಗಸ್ತು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆ ಮಾಡುವ ಎಂ.ಸ್ಟ್ರೈಪ್ಸ್ ಮಾದರಿಯಲ್ಲಿ ಹೊಸ ಆ್ಯಪ್ ಅಭಿವೃದ್ಧಿಪಡಿಸಬೇಕು. ಆ ಟ್ರ್ಯಾಕಿಂಗ್ ಆ್ಯಪ್ ಅನ್ನು ಚಾರಣ ಅವಧಿಯಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಮೊಬೈಲ್‌ನಲ್ಲಿ ಅಳವಡಿಸಬೇಕು. ಆಗ ಯಾರೇ ದಾರಿ ತಪ್ಪಿಸಿಕೊಂಡರೂ ಅವರ ಶೋಧ ಕಾರ್ಯ ಸುಲಭವಾಗುತ್ತದೆ. ಹೀಗಾಗಿ ಆ್ಯಪ್ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಅದರ ಜತೆಗೆ ಚಾರಣಕ್ಕೆ ಬರುವ ಚಾರಣಿಗರಿಗೆ ಗುಂಪು ವಿಮೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.ಅದರ ಜತೆಗೆ ಚಾರಣಿಗರಿಗೆ ಮಾರ್ಗದರ್ಶನ ನೀಡುವ ನೇಚರ್ ಗೈಡ್‌ಗಳಿಗೆ ಕಡ್ಡಾಯವಾಗಿ ವೈರ್‌ಲೆಸ್ ಸೆಟ್ ನೀಡಬೇಕು ಮತ್ತು ಚಾರಣಿಗರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಗೈಡ್‌ಗಳಿಗೆ ಹೊಣೆಗಾರಿಕೆ ನಿಗದಿ ಮಾಡಬೇಕು. ಅದರ ಜತೆಗೆ ಚಾರಣಿಗರ ಸುರಕ್ಷತೆಗಾಗಿ ಎಸ್‌ಒಪಿ ರೂಪಿಸಬೇಕು ಎಂದು ತಿಳಿಸಿದ್ದಾರೆ.