ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ/ಧಾರವಾಡ
ಒಬ್ಬ ಕೇಂದ್ರ ಸಚಿವರು ಕರ್ನಾಟಕ ರಾಜ್ಯದಲ್ಲಿರುವುದು ಐಸಿಸ್ ಸರ್ಕಾರ ಎಂದು ಹೇಳಿಕೆ ನೀಡುವ ಮೂಲಕ ಜನರನ್ನು ಭಯಪಡಿಸುತ್ತಿದ್ದಾರೆ. ಇಂತಹ ಕೀಳುಮಟ್ಟದ ಹೇಳಿಕೆ ನೀಡುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು. ಇಲ್ಲವಾದರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ಸೋಮವಾರ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಜೋಶಿ ಅವರು ಕರ್ನಾಟಕವನ್ನು ಐಸಿಸ್ ರಾಜ್ಯ ಎನ್ನುತ್ತಾರೆ. ಇದು ಒಪ್ಪುವ ಮಾತೆ? ಒಬ್ಬ ಕೇಂದ್ರ ಸಚಿವರ ಬಾಯಲ್ಲಿ ಈ ರೀತಿಯ ಮಾತುಗಳು ಬರುತ್ತವೆ ಎಂದರೆ ಹೇಗೆ? ಒಂದು ರಾಜ್ಯದಲ್ಲಿ ಈ ರೀತಿಯ ಚಟುವಟಿಕೆ ನಡೆಯುತ್ತಿವೆ ಎಂದರೆ ಮೊದಲು ಈ ದೇಶದ ಪ್ರಧಾನಿ ರಾಜೀನಾಮೆ ನೀಡಬೇಕಲ್ಲವೆ? ಕೇಂದ್ರ ಸಚಿವರ ಬಾಯಲ್ಲಿ ಈ ರೀತಿಯ ಮಾತುಗಳು ಬರುತ್ತವೆ ಎಂದರು ಅವರು ಮೊದಲು ರಾಜೀನಾಮೆ ನೀಡಬೇಕು. ಇಲ್ಲವಾದರೆ ಕ್ಷಮೆ ಕೇಳಬೇಕೆಂದರು.
ಸಿದ್ದರಾಮಯ್ಯನವರು ಎಲ್ಲಿಂದಲೋ ಹಾರಿಕೊಂಡು ಮುಖ್ಯಮಂತ್ರಿಯಾಗಿದ್ದಾರೆ ಎಂದಿರುವುದು ತಪ್ಪು. ಸಿದ್ದರಾಮಯ್ಯನವರು ಬುದ್ಧ, ಬಸವೇಶ್ವರ, ಅಂಬೇಡ್ಕರ್ ತತ್ವ-ಸಿದ್ಧಾಂತ ಪಾಲಿಸುತ್ತ 50 ವರ್ಷಗಳಿಂದ ರಾಜಕಾರಣದಲ್ಲಿದ್ದವರು. ಹೀಗಾಗಿ 2ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿಗಳ ಬಗ್ಗೆ ಅವರ ಆಡಳಿತದ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳು ಈ ಪ್ರಜಾಪ್ರಭುತ್ವ ವ್ಯವಸ್ಥೆಗೂ ಸರಿಯಲ್ಲ, ಜೋಶಿಯವರಿಗೂ ಗೌರವ ತರುವುದಿಲ್ಲ ಎಂದು ಕಿಡಿಕಾರಿದರು.
ಬಿಜೆಪಿದು ಜಗಳ ಹಚ್ಚುವ ಕೆಲಸ: ಹಿಂದು-ಮುಸ್ಲಿಮರ ಮಧ್ಯೆ ಜಗಳ ಹಚ್ಚುವುದೇ ಬಿಜೆಪಿಯವರ ಕೆಲಸವಾಗಿಬಿಟ್ಟಿದೆ. ಲೋಕಸಭೆ ಚುನಾವಣಾ ಬರುತ್ತಿದೆ, ಹಾಗಾಗಿ, ಹಿಂದು-ಮುಸ್ಲಿಂ ವಿಷಯವನ್ನು ಬಿಜೆಪಿಯವರು ಮುನ್ನೆಲೆಗೆ ತರುತ್ತಿದ್ದಾರೆ. ಪಾಕಿಸ್ತಾನಕ್ಕೆ ಅಲ್ಲಿನ ಪ್ರಧಾನಿ ನವಾಜ್ ಶರೀಫ್ ಅವರ ಮನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಿರಿಯಾನಿ ತಿನ್ನಲು ಹೋಗಿದ್ದರು. ಬಿಜೆಪಿಯವರು ಇದಕ್ಕೇನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.
ಕೋವಿಡ್ ಕಾಲಘಟ್ಟದಲ್ಲಿ ಹಿಂದುಗಳ ಶವಸಂಸ್ಕಾರ ಮಾಡಿದವರು ಮುಸ್ಲಿಮರು. ಆಗ ಹಿಂದುವಾದಿಗಳು ಎಲ್ಲಿದ್ದರು? ಮುಸ್ಲಿಮರೇ ಅರ್ಧಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ್ದಾರೆ. ಬೇಕಿದ್ದರೆ ಚರ್ಚೆಗೆ ಬರಲಿ ನಾನು ಉತ್ತರಿಸಲು ಸಿದ್ಧ. ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಶ್ರೇಷ್ಠ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಾಗಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಶ್ರೀಕಾಂತ ಪೂಜಾರಿ ವಿರುದ್ಧ 25ಕ್ಕೂ ಹೆಚ್ಚು ಪ್ರಕರಣಗಳಿವೆ. ಅವರಿಗೆ ನೋಬೆಲ್ ಅಥವಾ ಪರಮವೀರ ಚಕ್ರ ಪ್ರಶಸ್ತಿ ಬಂದಿದೆಯೇ? ಎಂದು ಪ್ರಶ್ನಿಸಿದ ಲಾಡ್, ಆತನ ಪರವಾಗಿ ಬಿಜೆಪಿ ಹೋರಾಡುತ್ತಿರುವುದರ ಅರ್ಥವೇನು? ಕಳೆದ ವರ್ಷಗಳಲ್ಲಿ ಹಿಂದುಗಳಿಗೆ ಆದ ಅನುಕೂಲವೇನು? ಬಿಜೆಪಿ, ಕೆಲ ಉದ್ಯಮಿಗಳನ್ನು ಹೊರತುಪಡಿಸಿದರೆ ಹಿಂದುಗಳಿಗೆ ಯಾವುದೇ ಅನುಕೂಲವಾಗಿಲ್ಲ. ಹಿಂದುತ್ವ, ರಾಮನ ಹೆಸರಲ್ಲಿ 30 ವರ್ಷಗಳ ಹಿಂದೆ ಪಡೆದ ಇಟ್ಟಿಗೆಗಳ ಲೆಕ್ಕ ನೀಡಲಿ ಎಂದು ಆಗ್ರಹಿಸಿದರು.
ನಾನು ಆಕಾಂಕ್ಷಿಯಲ್ಲ: ಮುಂಬರುವ ಲೋಕಸಭಾ ಚುನಾವಣೆಗೆ ನಾನು ಆಕಾಂಕ್ಷಿಯಲ್ಲ. ರಾಷ್ಟ್ರರಾಜಕರಣಕ್ಕೆ ಹೋಗುವ ಇಚ್ಛೆ ನನಗಿಲ್ಲ. ನನ್ನದು ರಾಜ್ಯ ರಾಜಕಾರಣದಲ್ಲಿಯೇ ಆಸಕ್ತಿ ಇದ್ದು ಇಲ್ಲಿಯೇ ಇರುವೆ. ಹಾಗೇನಾದರೂ ನನ್ನ ಹೆಸರು ಪ್ರಸ್ತಾಪಕ್ಕೆ ಬಂದಲ್ಲಿ ಸ್ವತಃ ನಾನೇ ಬೇಡ ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡುತ್ತೇನೆ. ಹೈಕಮಾಂಡ್ ಯಾವ ಅಭ್ಯರ್ಥಿಯನ್ನು ಸೂಚಿಸುತ್ತದೆಯೋ ಅವರ ಗೆಲುವಿಗೆ ಶ್ರಮಿಸುವುದಾಗಿ ಸಚಿವ ಲಾಡ್ ತಿಳಿಸಿದರು.