ಬಾಂಗ್ಲಾ ಹಿಂದು ದೌರ್ಜನ್ಯ ಹಿಂದೆ ಇಸ್ಲಾಮೀಕರಣದ ಷಡ್ಯಂತ್ರ: ಶರಣ್ ಪಂಪ್‌ವೆಲ್‌

| Published : Dec 05 2024, 12:32 AM IST

ಬಾಂಗ್ಲಾ ಹಿಂದು ದೌರ್ಜನ್ಯ ಹಿಂದೆ ಇಸ್ಲಾಮೀಕರಣದ ಷಡ್ಯಂತ್ರ: ಶರಣ್ ಪಂಪ್‌ವೆಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದು ಹಿತರಕ್ಷಣಾ ಸಮಿತಿ ದ.ಕ.ಜಿಲ್ಲೆ ಇದರ ವತಿಯಿಂದ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ರಕ್ಷಣೆಗೆ ಆಗ್ರಹಿಸಿ ಮಂಗಳೂರಿನಲ್ಲಿ ಬುಧವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಬಾಂಗ್ಲಾ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದುಗಳನ್ನು ಗುರಿಯಾಗಿಸಿ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆ 2047ರಲ್ಲಿ ಜಗತ್ತನ್ನೇ ಇಸ್ಲಾಮೀಕರಣ ಮಾಡುವ ಮತೀಯವಾದದ ಷಡ್ಯಂತರ ಅಡಗಿದೆ ಎಂದು ವಿಶ್ವಹಿಂದು ಪರಿಷತ್‌ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್‌ ಹೇಳಿದ್ದಾರೆ. ಹಿಂದು ಹಿತರಕ್ಷಣಾ ಸಮಿತಿ ದ.ಕ.ಜಿಲ್ಲೆ ಇದರ ವತಿಯಿಂದ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ರಕ್ಷಣೆಗೆ ಆಗ್ರಹಿಸಿ ಮಂಗಳೂರಿನಲ್ಲಿ ಬುಧವಾರ ನಡೆದ ಬೃಹತ್‌ ಪ್ರತಿಭಟನಾ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲೇ ಹಿಂದುತ್ವ ನಾಶ ಮಾಡಬೇಕು ಎನ್ನುವುದು ಬಾಂಗ್ಲಾ ಸಂಚಿನ ಭಾಗವಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬರ್ಮಾ, ಮ್ಯಾನ್ಮಾರ್‌, ಮಾಲ್ಡೀವ್ಸ್‌ ಹಿಂದು ವಿರೋಧಿ ಹಾದಿ ತುಳಿದಿದೆ. ಚೀನಾ ಹಾಗೂ ಶ್ರೀಲಂಕಾಗಳು ಎಡಪಕ್ಷಗಳ ಹಿಡಿತದಲ್ಲಿವೆ. ಹಿಂದು ಅಲ್ಪಸಂಖ್ಯಾತರಾಗಿ ಇರುವಲ್ಲೆಲ್ಲ ದೌರ್ಜನ್ಯಗಳು ನಡೆಯುತ್ತಿವೆ ಎಂದರು.

ದ.ಕ.ಗೂ ಎಚ್ಚರಿಕೆ: ಕಾಶ್ಮೀರ, ಕೇರಳ, ಈಶಾನ್ಯ ಭಾರತ ಬಳಿಕ ಈಗ ದ.ಕ.ಜಿಲ್ಲೆಯಲ್ಲೂ ಮುಸ್ಲಿಮರ ಸಂಖ್ಯೆ ಶೇ.35ರಷ್ಟು ಜಾಸ್ತಿಯಾಗಿದೆ. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಬಾಂಗ್ಲಾ ಪರಿಸ್ಥಿತಿ ದ.ಕ.ಜಿಲ್ಲೆಗೂ ಬರಬಹುದು ಎಂದು ಶರಣ್‌ ಪಂಪ್‌ವೆಲ್‌ ಕಳವಳ ವ್ಯಕ್ತಪಡಿಸಿದರು.

ವಿಭಾಗ ಸಾಮರಸ್ಯ ಗತಿವಿಧಿ ಪ್ರಮುಖ್‌ ರವೀಂದ್ರ ಪೇರಾಲು ಮಾತನಾಡಿ, ಬಂಧನಕ್ಕೆ ಒಳಗಾಗಿರುವ ಇಸ್ಕಾನ್‌ನ ಚಿನ್ಮಯ ಕೃಷ್ಣದಾಸ್‌ ಸಹಿತ ಎಲ್ಲರನ್ನು ಬಿಡುಗಡೆ ಮಾಡಬೇಕು. ಜಗತ್ತಿನಾದ್ಯಂತ ಬಾಂಗ್ಲಾ ಆಡಳಿತದ ಹಿಂದು ವಿರೋಧಿ ನೀತಿ ವಿರುದ್ಧ ಪ್ರತಿಭಟನೆ ಆರಂಭವಾಗಿದೆ ಎಂದರು.

ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್‌ ಶೆಟ್ಟಿ ಕಾರ್ಕಳ ಮಾತನಾಡಿದರು.

ಪ್ರತಿಭಟನೆಯಲ್ಲಿ ಹಿಂದು ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ, ಹಿಂದೂ ಜಾಗರಣ ವೇದಿಕೆ ಪ್ರಾಂತ ನಿಧಿ ಪ್ರಮುಖ್ ರವಿರಾಜ್ ಕಡಬ ಇದ್ದರು. ಅಲ್ಲದೆ ಜಿಲ್ಲೆಯ ಸಂತರಾದ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ, ಶ್ರೀ ವಿಧ್ಯೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿ ಚಿತ್ರಾಪುರ, ಶ್ರೀ ಸನಂದ ಸ್ವಾಮೀಜಿ ಇಸ್ಕಾನ್ ಕಲಾಕುಂಜ, ಶ್ರೀ ಪ್ರೇಮ್ ಭಕ್ತಿ ಪ್ರಭು ಇಸ್ಕಾನ್‌ ಕುಡುಪು, ಶ್ರೀ ಸಚ್ಚಿದಾನಂದ ಅದ್ವೈತ ಸ್ವಾಮೀಜಿ ಕುಳಾಯಿ, ಶ್ರೀ ನಾಮನಿಷ್ಠ ಸ್ವಾಮೀಜಿ ಇಸ್ಕಾನ್‌, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್‌, ಶಾಸಕರಾದ ವೇದವ್ಯಾಸ್‌ ಕಾಮತ್‌, ಉಮಾನಾಥ್‌ ಕೋಟ್ಯಾನ್‌, ರಾಜೇಶ್‌ ನಾಯ್ಕ್‌, ಹರೀಶ್‌ ಪೂಂಜಾ, ಡಾ.ಭರತ್‌ ಶೆಟ್ಟಿ, ಕಿಶೋರ್‌ ಕುಮಾರ್‌, ಪ್ರತಾಪ್‌ಸಿಂಹ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಮತ್ತಿತರರಿದ್ದರು.

ವಿಹಿಂಪ ಮುಖಂಡ ಶಿವಾನಂದ ಮೆಂಡನ್‌ ನಿರೂಪಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಕಳುಹಿಸಲಾಯಿತು. ಇದಕ್ಕೂ ಮೊದಲು ನಗರದ ಅಂಬೇಡ್ಕರ್‌ ವೃತ್ತದಿಂದ ಮಿನಿ ವಿಧಾನಸೌಧ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ

ಪ್ರತಿಭಟನೆ ವೇಳೆ ಅದರ ಚಿತ್ರೀಕರಣಕ್ಕೆ ತೆರಳಿದ ಮಾಧ್ಯಮ ಮಂದಿಯನ್ನು ತಳ್ಳಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ನಗರದ ಕ್ಲಾಕ್‌ ಟವರ್‌ ಬಳಿ ಬ್ಯಾರಿಕೇಡ್‌ಗಳನ್ನು ಬದಿಗೊತ್ತಿದ ಪ್ರತಿಭಟನಾಕಾರರು ರಸ್ತೆ ತಡೆಗೆ ಮುಂದಾಗಿದ್ದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ರಸ್ತೆ ತಡೆಗೆ ಯತ್ನಿಸಿದವರನ್ನು ತಡೆದಿದ್ದರು. ಇದು ಪೊಲೀಸ್‌ ಮತ್ತು ಹಿಂದು ಕಾರ್ಯಕರ್ತರ ನಡುವೆ ಚಕಮಕಿಗೆ ಕಾರಣವಾಯಿತು. ಈ ವಿದ್ಯಮಾನದ ಚಿತ್ರೀಕರಣ ನಡೆಸುತ್ತಿದ್ದ ಇಬ್ಬರು ಖಾಸಗಿ ಚಾನೆಲ್‌ನ ಕ್ಯಾಮರಾಮನ್‌ಗಳನ್ನು ತಳ್ಳಿದ ಪ್ರತಿಭಟನಾಕಾರರು ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆಯಿತು. ಹಲ್ಲೆಗೆ ಯತ್ನ ನಡೆದ ಹಿನ್ನೆಲೆಯಲ್ಲಿ ಮಾಧ್ಯಮ ಮಂದಿ ವರದಿಗಾರಿಕೆಯನ್ನು ಬಹಿಷ್ಕರಿಸಿ ಹೊರನಡೆದರು.

-----------

ಷರತ್ತು ಉಲ್ಲಂಘಿಸಿ ರಸ್ತೆ ತಡೆ ಪ್ರತಿಭಟನೆ: ಆಯೋಜಕರ ವಿರುದ್ಧ ಕೇಸು ದಾಖಲು

ಮಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಬುಧವಾರ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಷರತ್ತು ಉಲ್ಲಂಘಿಸಿ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಆಯೋಜಕರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.ಬುಧವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್‌ ವೃತ್ತದಿಂದ ಆರಂಭವಾಗಿ ಮಂಗಳೂರು ನಗರ ಕ್ಲಾಕ್‌ ಟವರ್‌ ಬಳಿ ಮಿನಿ ವಿಧಾನಸೌಧದ ಎದುರು 10.45ಕ್ಕೆ ಜಮಾವಣೆಗೊಂಡಿದೆ. 11 ಗಂಟೆ ವೇಳೆಗೆ ಪ್ರತಿಭಟನಾಕಾರರು ರಸ್ತೆಗಿಳಿದು, ರಸ್ತೆ ತಡೆ ಉಂಟು ಮಾಡಿ ವಾಹನ ಹಾಗೂ ಜನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದರು. ಈ ಸಂದರ್ಭ ಹಂಪನಕಟ್ಟೆಕಡೆಯಿಂದ ಬಂದ ಆ್ಯಂಬುಲೆನ್ಸ್‌ ಸಂಚಾರಕ್ಕೆ ತಡೆ ಉಂಟಾಗಿರುತ್ತದೆ. ಪೊಲೀಸರ ಮನವಿಗೂ ಸ್ಪಂದಿಸದೆ ಷರತ್ತುಗಳನ್ನು ಉಲ್ಲಂಘಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ ಕಾರಣಕ್ಕಾಗಿ ಆಯೋಜಕರು ಮತ್ತು ಇತರರ ವಿರುದ್ಧ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.