ಧಾರವಾಡದ ಕರ್ನಾಟಕ ವಿವಿ ಅರ್ಥಶಾಸ್ತ್ರ ವಿಭಾಗ ಮತ್ತು ಸಿಎಂಡಿಆರ್ ಸಹಯೋಗದಲ್ಲಿ ''ವ್ಯಾಪಾರ ಯುದ್ಧಗಳು, ಟ್ರಂಪ್ ಸುಂಕಗಳು ಮತ್ತು ಭಾರತ'' ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಧಾರವಾಡ: ಪ್ರಸ್ತುತ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಹೆಚ್ಚಿಸುತ್ತಿದೆ ಎಂದು ಪುಣೆಯ ಇಂದಿರಾ ವಿವಿ ಸ್ಕೂಲ್ ಆಫ್ ಬಿಸಿನೆಸ್ ಡೀನ್ ಪ್ರೊ. ಕವಿತಾ ಮಠದ ಹೇಳಿದರು.

ಕರ್ನಾಟಕ ವಿವಿ ಅರ್ಥಶಾಸ್ತ್ರ ವಿಭಾಗ ಮತ್ತು ಸಿಎಂಡಿಆರ್ ಸಹಯೋಗದಲ್ಲಿ ಆಯೋಜಿಸಿದ್ದ ''ವ್ಯಾಪಾರ ಯುದ್ಧಗಳು, ಟ್ರಂಪ್ ಸುಂಕಗಳು ಮತ್ತು ಭಾರತ'' ಎಂಬ ವಿಷಯ ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿ, ದೇಶ, ದೇಶಗಳ ನಡುವೆ ಪರಸ್ಪರ ಆಮದು ರಫ್ತುಗಳ ಮೇಲೆ ತೆರಿಗೆ ಹೆಚ್ಚಿಸುವುದು ಮತ್ತು ನಿರ್ಬಂಧಗಳನ್ನು ವಿಧಿಸುವ ಮೂಲಕ ಮಾಡುವ ಆರ್ಥಿಕ ವ್ಯವಸ್ಥೆಯನ್ನು ವಾಣಿಜ್ಯ ಯುದ್ಧವಾಗಿ ರೂಪುಗೊಂಡು ಹಲವಾರು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸುಂಕಗಳ ಪರಿಣಾಮದಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಭೌಗೋಳಿಕ ರಾಜಕೀಯದಲ್ಲಿ ಅನಿಶ್ಚಿತತೆ ಹೆಚ್ಚುತ್ತಿದೆ ಎಂದರು.

ಮಧ್ಯಪ್ರಾಚ್ಯ ಯುದ್ಧದಿಂದ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ, ಅನಿಶ್ಚಿತತೆ ಮತ್ತು ಅಸ್ಪಷ್ಟತೆಯು ಗೋಚರಿಸುತ್ತಿದೆ. ಯುದ್ಧದಿಂದ ಉದ್ಭವಿಸಿದ ಸಮಸ್ಯೆಗಳನ್ನು ಸರಿಪಡಿಸುವ ಪ್ರಕ್ರಿಯೆಗೆ ಹೆಚ್ಚು ಸಮಯ ಬೇಕಾಗಬಹುದು ಎಂದ ಅವರು, ಈ ಯುದ್ಧದ ಭೀತಿಯಿಂದಾಗಿ ಭಾರತದಲ್ಲಿ ಅಮೆಜಾನ್ ಆ್ಯಪ್‌ನಿಂದ 1,20,000 ಇಲೆಕ್ಟ್ರಾನಿಕ್ ಒಲೆಗಳು ಮಾರಾಟವಾಗಿವೆ ಎಂದು ವಿವರಿಸಿದರು.

ಸ್ಪೂಟ್ -ಹಾವ್ಲೀ ಸುಂಕ ಕಾಯ್ದೆ 1930ರಲ್ಲಿ ಅಮೆರಿಕಾದಲ್ಲಿ ಜಾರಿಗೆ ಬಂದಿತು. ಈ ಕಾಯ್ದೆಯು ಸಾವಿರಾರು ಆಮದು ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿತು. ಇದರ ಮುಖ್ಯ ಉದ್ದೇಶ ದೇಶೀಯ ಉದ್ಯಮ ರಕ್ಷಿಸುವುದಾಗಿತ್ತು. ಆದರೆ ಇದರಿಂದ ಇತರ ದೇಶಗಳು ಕೂಡ ಪ್ರತಿಯಾಗಿ ತಮ್ಮ ಸುಂಕಗಳನ್ನು ಹೆಚ್ಚಿಸಿ ಜಾಗತಿಕ ವಾಣಿಜ್ಯ ಕುಗ್ಗುವಂತೆ ಮಾಡಿತು ಎಂದು ವಿಶ್ಲೇಷಿಸಿದ ಅವರು, ಸುಂಕ ಮತ್ತು ಯುದ್ಧಗಳು ಕೇವಲ ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಜಾಗತಿಕ ಪ್ರಮುಖ ವಿಷಯಗಳ ಪ್ರಭಾವ ಬೀರುತ್ತದೆ. ಪ್ರಾಬಲ್ಯ ಹೊಂದಿದ ದೇಶಗಳು ತಮ್ಮ ಪ್ರಭಾವ ವಿಸ್ತರಿಸಲು ಹಾಗೂ ಜಾಗತಿಕ ಮಟ್ಟದಲ್ಲಿ ತಮ್ಮ ಸ್ಥಾನ ಬಲಪಡಿಸಲು ಸುಂಕಗಳನ್ನು ಅಸ್ತ್ರವನ್ನಾಗಿ ಉಪಯೋಗಿಸುತ್ತಿವೆ ಎಂದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎಚ್.‌‌ ನಾಗೂರ ಅಧ್ಯಕ್ಷತೆ ವಹಿಸಿದ್ದರು. ಡಾ.ಎನ್.ಎಸ್. ಮುಗದೂ, ಡಾ.ಎ.ಆರ್. ಕುಲಕರ್ಣಿ ಇದ್ದರು.