ಕಟ್ಟೆಚ್ಚರದ ನಡುವೆ ಇಸ್ರೇಲ್ ಒಳಭಾಗ ಸಂಪೂರ್ಣ ಸುರಕ್ಷಿತ

| Published : Oct 11 2023, 12:45 AM IST

ಸಾರಾಂಶ

ಇಸ್ರೇಲ್ ತನ್ನ ಮೇಲಿನ ಹಠಾತ್ ಆಕ್ರಮಣದಿಂದ ಆಕ್ರೋಶಗೊಂಡು ಯುದ್ದ ಘೋಷಿಸಿರುವುದರಿಂದ ನಾವೆಲ್ಲಾ ಕಟ್ಟೆಚ್ಚರದಿಂದ ಇದ್ದೇವೆಯಾದರೂ ಸದ್ಯ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದೇವೆ. ಮಿಸೈಲ್ ಅಪ್ಪಳಿಸುವ ಶಬ್ದ ದಿನ ನಿತ್ಯ ಕೇಳಿಸುತ್ತಿದೆಯಾದರೂ ಇಸ್ರೇಲ್‌ ಒಳಭಾಗ ಸಂಪೂರ್ಣ ಸುರಕ್ಷಿತವಾಗಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಇಸ್ರೇಲ್ ತನ್ನ ಮೇಲಿನ ಹಠಾತ್ ಆಕ್ರಮಣದಿಂದ ಆಕ್ರೋಶಗೊಂಡು ಯುದ್ದ ಘೋಷಿಸಿರುವುದರಿಂದ ನಾವೆಲ್ಲಾ ಕಟ್ಟೆಚ್ಚರದಿಂದ ಇದ್ದೇವೆಯಾದರೂ ಸದ್ಯ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದೇವೆ. ಮಿಸೈಲ್ ಅಪ್ಪಳಿಸುವ ಶಬ್ದ ದಿನ ನಿತ್ಯ ಕೇಳಿಸುತ್ತಿದೆಯಾದರೂ ಇಸ್ರೇಲ್‌ ಒಳಭಾಗ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕಳೆದ 8 ವರ್ಷಗಳಿಂದ ಇಸ್ರೇಲ್ ನಲ್ಲಿ ಉದ್ಯೋಗದಲ್ಲಿರುವ ಬೆಳ್ತಂಗಡಿ ತಾಲೂಕು ಮಡಂತ್ಯಾರು ಬಳಿಯ ಪಾರೆಂಕಿ ನಿವಾಸಿ ಅಕ್ಷಯ್ ತಿಳಿಸಿದ್ದಾರೆ. ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಸರ್ಕಾರ ಯುದ್ದ ಘೋಷಿಸಿರುವುದರಿಂದ ರಸ್ತೆಗಳಲ್ಲಿ ಜನ ಸಂಚಾರ ಕಡಿಮೆಯಾಗಿದೆ. ಸಂಭಾವ್ಯ ಅಪಾಯ ಎದುರಿಸುವ ಸಲುವಾಗಿ ಕನಿಷ್ಠ 2-3 ದಿನಗಳಿಗೆ ಆಗುವಷ್ಟು ಆಹಾರ ಧಾನ್ಯಗಳನ್ನು ಮನೆಯಲ್ಲಿ ದಾಸ್ತಾನು ಇರಿಸಲು ಇಲ್ಲಿನ ಆಡಳಿತದಿಂದ ನಿರ್ದೇಶನ ನೀಡಲಾಗಿದೆ. ಯುದ್ಧದ ಸ್ವರೂಪ ಯಾವ ಮಟ್ಟಕ್ಕೆ ಹೋಗುತ್ತದೆ ಎನ್ನುವುದು ಊಹಿಸಲು ಯಾರಿಗೂ ಸಾಧ್ಯವಿಲ್ಲದ ಕಾರಣ ಏನಾಗುವುದೋ ಎನ್ನುವ ಭೀತಿ ಸಹಜವಾಗಿ ಕಾಡುತ್ತಿದೆ ಎಂದಿದ್ದಾರೆ. ಶನಿವಾರದ ಹಠಾತ್ ದಾಳಿಯ ಬಳಿಕ ಸುರಕ್ಷಾ ವ್ಯವಸ್ಥೆ ಕಟ್ಟೆಚ್ಚರ ಸ್ಥಿತಿಯಲ್ಲಿದೆ. ಹಮಾಸ್ ದಾಳಿ ಮಾಡಿದ ಪ್ರದೇಶದಿಂದ ತುಂಬಾ ಸಾವು ನೋವುಗಳ ಮಾಹಿತಿ ಲಭಿಸಿದೆ. ಅದರಲ್ಲಿ ಅಮೇರಿಕಾ, ಜರ್ಮನ್, ನೇಪಾಳ ದೇಶವೂ ಸೇರಿದಂತೆ ಹಲವು ವಿದೇಶಿಯರು ಹತ್ಯೆಗೀಡಾಗಿದ್ದು, ಅಪಹರಣದಂತಹ ಸಾವು ನೋವಿಗೆ ತುತ್ತಾಗಿದ್ದಾರೆ. ಅದೃಷ್ಟವಶಾತ್ ಭಾರತೀಯರು ಶನಿವಾರದ ಆಕ್ರಮಣಕ್ಕೆ ಸಿಲುಕಿಲ್ಲ ಎಂದು ನಂಬಿದ್ದೇವೆ ಎಂದು ಅವರು ಹೇಳುತ್ತಾರೆ. ಗಾಝಾ ಪ್ರದೇಶ ಮಾತ್ರ ಭೀಕರ ಕದನಕ್ಕೆ ಒಳಗಾಗಿದ್ದು, ಹಮಾಸ್ ದಾಳಿ ಮತ್ತು ಅದಕ್ಕೆ ಇಸ್ರೇಲ್ ಸೇನೆಯ ಪ್ರತ್ಯುತ್ತರದಿಂದ ಅಲ್ಲಿ ಉಂಟಾಗುತ್ತಿರುವ ಶಬ್ದ ಅಲ್ಲಿಂದ 80 ಕಿ ಮೀ. ದೂರದ ಹರ್‌ಝಿಲಿಯಾ ನಗರದಲ್ಲಿರುವ ನಮಗೆ ಕೇಳಿಸುತ್ತಿದೆ. ಹಮಾಸ್ ಉಗ್ರರ ದಾಳಿ ಇಸ್ರೇಲ್ ನಿಯಂತ್ರಣದಲ್ಲಿರುವ ಗಾಝಾ ಪ್ರದೇಶದಲ್ಲಿ ಸಂಭವಿಸಿದ್ದರಿಂದ ಇಸ್ರೇಲಿನ ಉಳಿದ ಭೂ ಭಾಗಗಳು ಸದ್ಯ ಸುರಕ್ಷಾ ವ್ಯವಸ್ಥೆಯಡಿ ಸುರಕ್ಷಿತವಾಗಿದೆ. ಮಾತ್ರವಲ್ಲದೆ ಭಾರತೀಯರೆಲ್ಲರೂ ಸದ್ಯಕ್ಕೆ ಸುರಕ್ಷಿತರಾಗಿದ್ದೇವೆ ಎಂದು ವಿವರಿಸಿದ್ದಾರೆ.