ಚಂದ್ರನ ಮೇಲೆ 2035ಕ್ಕೆ ಮಾನವ ಹೆಜ್ಜೆ ಇಸ್ರೋ ಗುರಿ

| Published : Aug 26 2024, 01:31 AM IST

ಸಾರಾಂಶ

ಚಂದ್ರನ ಮೇಲೆ ಮನುಷ್ಯನನ್ನು ಕರೆದೊಯ್ದು, ಸುರಕ್ಷಿತವಾಗಿ ವಾಪಸ್‌ ತರುವ ಮಹತ್ತರ ಯೋಜನೆಯನ್ನು 2035ರ ಒಳಗಾಗಿ ಕೈಗೊಳ್ಳುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯೋಜನೆಯಾಗಿದೆ ಎಂದು ಇಸ್ರೋ ನಿವೃತ್ತ ಹಿರಿಯ ನಿರ್ದೇಶಕ ಎಚ್.ಡಿ.ಆನಂದ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆಚಂದ್ರನ ಮೇಲೆ ಮನುಷ್ಯನನ್ನು ಕರೆದೊಯ್ದು, ಸುರಕ್ಷಿತವಾಗಿ ವಾಪಸ್‌ ತರುವ ಮಹತ್ತರ ಯೋಜನೆಯನ್ನು 2035ರ ಒಳಗಾಗಿ ಕೈಗೊಳ್ಳುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯೋಜನೆಯಾಗಿದೆ ಎಂದು ಇಸ್ರೋ ನಿವೃತ್ತ ಹಿರಿಯ ನಿರ್ದೇಶಕ ಎಚ್.ಡಿ.ಆನಂದ ಹೇಳಿದರು.ನಗರದ ಅನುಭವ ಮಂಟಪದ ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಾ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೇಂದ್ರದಿಂದ ಸಕಲ ನೆರವು:ಭಾರತದ ಬಾಹ್ಯಾಕಾಶ ಕಾರ್ಯಕ್ರಮ 60ರ ದಶಕದಲ್ಲಿ ಶುರುವಾಯಿತು. ಇಸ್ರೋ ಸ್ಥಾಪನೆ ನಂತರ ಆರ್ಯಭಟದಿಂದ ಆದಿತ್ಯ ಎಲ್‌-1ವರೆಗೆ ಅನೇಕ ಉಪಗ್ರಹಗಳ ಉಡಾವಣೆ ಮಾಡಲಾಗಿದೆ. ಚಂದ್ರನ ಮೇಲೆ ಮಾನವನನ್ನು ಕರೆದೊಯ್ಯುವ ನಿಟ್ಟಿನಲ್ಲಿ ಇಸ್ರೋದಿಂದ ಆವಿಷ್ಕಾರಗಳು ನಡೆಯಬೇಕಾಗಿದೆ. ಅಷ್ಟೇ ಅಲ್ಲ, ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಯೋಜನೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇಸ್ರೋ ಕೆಲಸ ಮಾಡುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೂ ಸಾವಿರಾರು ಕೋಟಿ ರು. ಅನುದಾನ ವೆಚ್ಚ ಮಾಡುತ್ತಿದೆ. ಯಾವುದೇ ಯೋಜನೆ ಯಶಸ್ವಿಯಾಗಲು ಬದ್ಧತೆ ಅತಿ ಮುಖ್ಯ. ಒಂದುವೇಳೆ ಅದು ವಿಫಲವಾದರೆ ಜನರ ತೆರಿಗೆ ಹಣ ನಷ್ಟವಾಗುತ್ತದೆ. ಹಾಗಾಗಿ, ಇಸ್ರೋ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.ಅನ್ಯ ದೇಶಗಳಿಗೂ ಇಸ್ರೋ ಸಹಕಾರ:ಕೇಂದ್ರ ಸರ್ಕಾರವು ಬಾಹ್ಯಾಕಾಶ ವಲಯ ಖಾಸಗೀಕರಣ ಮಾಡಿರುವುದರಿಂದ ಇಸ್ರೋ ಸಂಶೋಧನೆಗೂ ಹೆಚ್ಚು ಒತ್ತು ನೀಡುತ್ತಿದೆ. ಬೇರೆ ದೇಶಗಳ ಉಪಗ್ರಹಗಳ ಉಡಾವಣೆಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಹಕರಿಸುತ್ತಿದೆ. ಏಷ್ಯಾದಲ್ಲಿ ಒಂದು ದೊಡ್ಡ ಉಪಗ್ರಹ ಜಾಲವನ್ನೇ ನಿರ್ಮಿಸಲಾಗಿದೆ. ಚಂದ್ರಯಾನ-2, ಮಂಗಳಯಾನ, ಆದಿತ್ಯ ಎಲ್-1 ಹಾಗೂ ಇತರೆ ಜೊತೆಗೆ ಬೇರೆ ದೇಶಗಳ ಸಾಕಷ್ಟು ವೈಜ್ಞಾನಿಕ ಉಪಗ್ರಹಗಳನ್ನು ಉಡಾವಣೆ ಮಾಡಿ, ಅಲ್ಲಿಂದಸೂ ದೇಶಕ್ಕೆ ಆರ್ಥಿಕ ಸಂಪನ್ಮೂಲ ಬರುವಂತೆ ಮಾಡುತ್ತಿದೆ ಎಂದು ವಿವರಿಸಿದರು.ದೇಶ ಬಲಪಡಿಸುವ ಕಾರ್ಯ:ಇಸ್ರೋ ಕೇಂದ್ರಗಳು ಒಂದು ಕಡೆ ಮಾಡುವ ಕೆಲಸವನ್ನು ಮತ್ತೊಂದು ಕಡೆ ಮಾಡುವುದಿಲ್ಲ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ ಜಗತ್ತಿಗೆ ಮಾದರಿಯಾಗಿದೆ. ಕಳೆದ ಕೆಲವು ದಶಕಗಳಿಂದ ಕೇವಲ ಬಾಹ್ಯಾಕಾಶ ಸಂಶೋಧನೆಗಷ್ಟೇ ಸೀಮಿತವಾಗಿದ್ದ ಇಸ್ರೋ ಇದೀಗ ಆರ್ಥಿಕವಾಗಿ ದೇಶವನ್ನು ಬಲಪಡಿಸುವ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಭಾರತ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳನ್ನು ಸಾಧಿಸುವ ಗುರಿ ಉದ್ದೇಶ ಹೊಂದಿದೆ. ಈ‌ ನಿಟ್ಟಿನಲ್ಲಿ ಕಾರ್ಯಕ್ರಮ ಸಾಗಿವೆ ಎಂದು ಹೇಳಿದರು.ಎಸ್‌ಟಿಜೆ ಪೌಢಶಾಲೆ ಮುಖ್ಯಶಿಕ್ಷಕ ಎಚ್.ಎಸ್.ರವಿಕುಮಾರ ಮಾತನಾಡಿ, ಇಸ್ರೋ ಮೂಲಕ ಭಾರತಿಯ ವಿಜ್ಞಾನಿಗಳು ಬಾಹ್ಯಾಕಾಶ ವಿಜ್ಞಾನದಲ್ಲಿ ಅನೇಕ ಯಶಸ್ವಿ ಪ್ರಯೋಗ ಮಾಡುತ್ತಿದ್ದಾರೆ. ಬೇರೆ ದೇಶಗಳಿಗೂ ಮೀರಿ ಉನ್ನತ ಸಾಧನೆ ಕೈಗೊಂಡಿದೆ ಎಂದರು.ಬಿಐಇಟಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಎಂ.ಆರ್. ಜಗದೀಶ, ಜಿಪಂ ಯೋಜನಾ ಸಹಾಯಕ ಎ.ಜೆ.ಆನಂದ ಇದ್ದರು. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಪಂ ಹಾಗೂ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅನಂತರ ಇಸ್ರೋ ನಿವೃತ್ತ ಹಿರಿಯ ನಿರ್ದೇಶಕ ಎಚ್.ಡಿ. ಆನಂದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.