ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾ ಭವನದಲ್ಲಿ ಫೆ.20ರಂದು ಬೆಳಗ್ಗೆ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಶ್ರೀಗಳ 11ನೇ ವಾರ್ಷಿಕ ಪಟ್ಟಾಭಿಷೇಕ ಹಾಗೂ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ನಡೆಯಲಿದೆ.ಹರಿಯಾಣದ ರೋಹ್ಟಕ್‌ನ ಬಾಬಾ ಮಸ್ತ್‌ನಾಥ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಾಜಸ್ಥಾನದ ತಿಜಾರ ಶಾಸಕ ಮಹಂತ್ ಬಾಲಕ್‌ನಾಥ್ ಯೋಗಿ ಮತ್ತು ಗುಜರಾತ್ ವಡೋದರದ ರಾಜ್‌ಕೋಟ್‌ನ ಆರ್ಶ್ ವಿದ್ಯಾಮಂದಿರದ ಅಧ್ಯಕ್ಷ ಸ್ವಾಮಿ ಪರಮಾತ್ಮಾನಂದ ಸರಸ್ವತಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥನಾರಾಯಣ, ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಡಾ.ಗುರುರಾಜ್ ಕರ್ಜಗಿ ಸೇರಿದಂತೆ ವಿವಿಧ ಶಾಖಾಮಠಗಳ ಶ್ರೀಗಳು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಎಸ್.ಸೋಮನಾಥ್‌ಗೆ ವಿಜ್ಞಾತಂ ಪ್ರಶಸ್ತಿ ಪ್ರದಾನ:ಇಡೀ ಜಗತ್ತು ಭಾರತದತ್ತ ಚಿತ್ತ ಹರಿಸುವಂತೆ ಚಂದ್ರನ ಅಂಗಳದಲ್ಲಿ ಚಂದ್ರಯಾನ-೩ರ ಯಶಸ್ಸಿನೊಂದಿಗೆ ಚರಿತ್ರೆ ಸೃಷ್ಟಿಸಿದ ಇಸ್ರೋ ಸಂಸ್ಥೆ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೆ 5 ಲಕ್ಷ ರು.ನಗದು ಹಾಗೂ ಪ್ರಶಸ್ತಿ ಪದಕವನ್ನೊಳಗೊಂಡ ಜೆವಿಟಿ ರಾಷ್ಟ್ರೀಯ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಎಸ್.ಸೋಮನಾಥ್ ಪರಿಚಯ:ಕೇರಳ ರಾಜ್ಯದ ಅಲೆಪ್ಪಿ ಜಿಲ್ಲೆಯ ತುರುವೂರಿನ ಶ್ರೀಧರ್‌ಪಣಿಕ್ಕರ್ ಮತ್ತು ಶಂಕಮ್ಮ ದಂಪತಿಯ ಪುತ್ರರಾದ ಎಸ್.ಸೋಮನಾಥ್ ಅವರ ಜೀವನ ಕಥೆ ಯುವಕರಿಗೆ ಸ್ಪೂರ್ತಿದಾಯಕ. ಅಂತರಿಕ್ಷ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆಸೆಗಳನ್ನು ಹೊಂದಿ ಹೆಮ್ಮೆಯ ಯಾತ್ರೆಯನ್ನು ಆರಂಭಿಸಿದ ಸೋಮನಾಥ್ ಅವರ ನಿರ್ಧಿಷ್ಟ ಉದ್ದೇಶ ಸಾಹಸಗಳು ಮತ್ತು ಅಂತರಿಕ್ಷ ಸಂಶೋಧನೆಯನ್ನು ಮುಂದುವರಿಸುವ ಅದ್ಭುತ ಕ್ರಿಯಾಶೀಲತೆ ಅವರನ್ನು ಆದರ್ಶ ವಿಜ್ಞಾನಿಯನ್ನಾಗಿ ರೂಪಿಸಿದೆ. ಶ್ರೇಷ್ಠ ಏರೋಸ್ಪೇಸ್ ಇಂಜಿನೀಯರ್ ಆಗಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಪ್ರಸ್ತುತ ಇಸ್ರೋ ಸಂಸ್ಥೆಯ ಅಧ್ಯಕ್ಷರಾಗಿ ಸಾರ್ಥಕಮಯವಾದ ಸೇವೆಗೈದಿದ್ದಾರೆ.