ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದ ಜೈಭೀಮ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವಾರದೊಳಗೆ ಹಕ್ಕು ಪತ್ರ ನೀಡಿ ಸಮಸ್ಯೆ ಬಗೆ ಹರಿಸಿ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ ಅವರು ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರಿಗೆ ಸೂಚಿಸಿದರು.ಬಳೂರ್ಗಿ ಜೈಭೀಮ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಿವೇಶನದ ಕುರಿತು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೋರೆ ಹೋಗಿದ್ದು ತನ್ನ ಖಾಸಗಿ ಜಾಗದಲ್ಲಿ ಶಾಲೆ ಇದೆ ಎಂದು ವಾದಿಸುತ್ತಿದ್ದಾರೆ. ಶಾಲಾ ಕಟ್ಟಡ ನಿರ್ಮಾಣಕ್ಕೂ ಮೊದಲು ಖಾಸಗಿ ವ್ಯಕ್ತಿ ನಿವೇಶನ ಖರೀದಿ ಮಾಡಿರಲಿಲ್ಲ, ಹೀಗಾಗಿ ಶಾಲಾ ಕಟ್ಟಡದ 2 ಎಕರೆ ಜಾಗ ಬಿಟ್ಟು ಉಳಿದ ಜಾಗ ಬೇಕಿದ್ದರೆ ಬಳಸಿಕೊಳ್ಳಲಿ, ಶಾಲೆ ಕೆಡವಿದರೆ ಮಕ್ಕಳ ಭವಿಷ್ಯ ಏನಾಗಬೇಡ ಎಂದು ಗ್ರಾಮಸ್ಥರು ಕೂಡ ನ್ಯಾಯಾಲಯದ ಮೋರೆ ಹೋಗಿದ್ದಾರೆ. ಹೀಗಾಗಿ ಎರಡು ಕಡೆಯ ವಾದ ಆಲಿಸಿ, ಖಾಸಗಿ ವ್ಯಕ್ತಿ ಮತ್ತು ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿಯವರನ್ನು ಒಂದು ಕಡೆ ಕೂಡಿಸಿ ಮಾತನಾಡಿ ಶಾಲೆಯ ಜಾಗದ ಸಮಸ್ಯೆ ಸರಿಪಡಿಸಿ ಎಂದ ಅವರು ಶಾಲಾ ಜಾಗದ ಹಕ್ಕು ಪತ್ರ ಸಿದ್ದಗೊಂಡ ಬಳಿಕ ಕಟ್ಟಡದ ನವೀಕರಣ, ಕಂಪೌಂಡ ಗೋಡೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ಖಾಸಗಿ ವ್ಯಕ್ತಿ ಶಾಲಾ ಕಟ್ಟಡ ನಿರ್ಮಾಣವಾದ ನಂತರ ಇಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಹೀಗಾಗಿ ಅವರು ಶಾಲೆಗಾಗಿ 2 ಎಕರೆ ಜಾಗ ಬಿಟ್ಟು ಉಳಿದ ಜಮೀನು ಬಳಸಿಕೊಳ್ಳಲಿ, ಜಿಲ್ಲಾಧಿಕಾರಿಗಳೇ ಮಧ್ಯ ಪ್ರವೇಶಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ಹೆದ್ದಾರಿ ತಿರುವಿನಲ್ಲಿ ಶಾಲಾ ಕಟ್ಟಡ ಇರುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತಿವೆ. ದೊಡ್ಡ ವಾಹನಗಳು ಪಲ್ಟಿಯಾಗಿ ಶಾಲಾ ಮೈದಾನದಲ್ಲಿ ಬಿಳುತ್ತಿವೆ. ಹೀಗಾಗಿ ಶಾಲೆಗೆ ಕಂಪೌಂಡ ಗೋಡೆ ಅವಶ್ಯಕವಾಗಿದೆ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ತುಕಾರಾಮ ಕರೇಲಿ, ಉಪಾಧ್ಯಕ್ಷೆ ಲಕ್ಷ್ಮೀ ಜಾಬಾದಿ, ಸದಸ್ಯರಾದ ಬಸವರಾಜ ಜಾಬಾದಿ, ಗೌತಮ ಸಕ್ಕರಗಿ, ಮುಖಂಡ ರಮೇಶ ನಾಟಿಕಾರ, ತಹಸೀಲ್ದಾರ ಸಂಜೀವಕುಮಾರ ದಾಸರ್, ಪ್ರೋ.ಐಎಎಸ್ ಅಧಿಕಾರಿ ಗಜಾನನ ಬಾಳೆ, ಪಿಎಸ್ಐ ಮಹಿಬೂಬ್ ಸೇರಿದಂತೆ ಗ್ರಾಮಸ್ಥರು ಇದ್ದರು.