4 ದಿನಗಳಲ್ಲಿ ಮ್ಯಾಜಿಕ್‌ ನಡೆದು ಎಲ್ಲಾ ಬಂಡಾಯ ಶಮನ: ಬಿ.ವೈ. ವಿಜಯೇಂದ್ರ

| Published : Mar 28 2024, 12:49 AM IST / Updated: Mar 28 2024, 01:30 PM IST

ಸಾರಾಂಶ

ವಮೊಗ್ಗ ಸೇರಿದಂತೆ ಎಲ್ಲಾ ಬಂಡಾಯವೂ ಇನ್ನೂ ನಾಲ್ಕು ದಿನದಲ್ಲಿ ಬಗೆಹರಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಶಿವಮೊಗ್ಗ ಸೇರಿದಂತೆ ಎಲ್ಲಾ ಬಂಡಾಯವೂ ಇನ್ನೂ ನಾಲ್ಕು ದಿನದಲ್ಲಿ ಬಗೆಹರಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬುಧವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಅವರು ಸುದ್ದಿಗಾರರೊಡನೆ ಮಾತನಾಡಿ, ಇನ್ನೂ ನಾಲ್ಕು ದಿನಗಳಲ್ಲಿ ಮ್ಯಾಜಿಕ್ ನಡೆಯಲಿದೆ. 

ಯಡಿಯೂರಪ್ಪ ಅವರು ಎಲ್ಲಾ ಕಡೆ ಹೋಗಿ ಭಿನ್ನಮತ ಶಮನ ಮಾಡುತ್ತಾರೆ. ನಾಲ್ಕೇ ದಿನದಲ್ಲಿ ಆ ಮ್ಯಾಜಿಕ್ ಆಗುತ್ತೆ ನೋಡುತ್ತಿರಿ. ಪಕ್ಷದ ಎಲ್ಲಾ ನಿರ್ಧಾರಗಳನ್ನು ವಿಜಯೇಂದ್ರ ಯಡಿಯೂರಪ್ಪ ಮಾತ್ರವೇ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಭಯಗೊಂಡಿದೆ. ಸೋಲುವ ಭೀತಿಯಿಂದ ಸಚಿವರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮೋದಿ ಅಲೆಗೆ ಹೆದರಿ ಯಾವ ಸಚಿವರೂ ಸ್ಪರ್ಧೆ ಮಾಡಲಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪ ಎನ್ನುವ ರೀತಿಯಾಗಿದೆ. ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡ ಏಕೈಕ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಎಂದರು.

ಮತ್ತೊಮ್ಮೆ ಮೋದಿಗೆ ಪ್ರಾರ್ಥನೆ: ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಲಾಗಿದೆ. ದೇಶದ ಜನಪ್ರಿಯತೆ ಪಡೆದಿರುವ ಪ್ರಧಾನಿ ಮೋದಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳ ಸಂಕಲ್ಪ ಮಾಡಿದ್ದಾರೆ. 

ಅದು ಯಶಸ್ವಿಯಾಗಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಾಡಿನಲ್ಲಿ ಬರಗಾಲ ಇದೆ. ನಾಡಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.