ಕಿಚ್ಚುಗುತ್ತಿ ಮಾರಮ್ಮನ ದೇಗುಲದ ವಿಷ ಪ್ರಸಾದ ದುರಂತಕ್ಕೆ ಆರು ವರ್ಷಗಳು

| Published : Dec 15 2024, 02:03 AM IST

ಸಾರಾಂಶ

ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಪೈಶಾಚಿಕ ಕೃತ್ಯ ಸದ್ದು ಮಾಡಿತ್ತು. ಬರೋಬ್ಬರಿ 150 ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ 17 ಮಂದಿ ಅಸುನೀಗಿದ್ದರು. ಜೀವ ಉಳಿಸಿಕೊಂಡು ಬಂದವರು ಕಳೆದ ಆರು ವರ್ಷಗಳಿಂದಲೂ ಸಹ ಅಂಗಾಂಗಗಳ ವೈಫಲ್ಯದಿಂದ ಇನ್ನೂ ಚೇತರಿಸಿಕೊಳ್ಳದೆ ಆಸ್ಪತ್ರೆಗಳಿಗೆ ಅಲೆಯುವಂಥ ಪರಿಸ್ಥಿತಿ ಇದೆ. ವಿಷ ಪ್ರಸಾದ ತಿಂದು ಬದುಕುಳಿದರೂ ನರಳಾಟದ ಜೀವನವಾಗಿದ್ದು ಸಂತ್ರಸ್ಥರ ಯಾತನೆ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಹನೂರು

ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಹೊರ ವಲಯದಲ್ಲಿರುವ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನಡೆದಿದ್ದ ವಿಷ ಪ್ರಸಾದ ದುರಂತಕ್ಕೆ ಡಿ. 14ಕ್ಕೆ 6 ವರ್ಷಗಳಾಗಿದ್ದು ಮೃತರ ಸಂಬಂಧಿಕರು ಸಮಾಧಿ ಮುಂದೆ ಗೋಳಾಡಿದರು.

ಬಿದರಹಳ್ಳಿ, ಎಂ.ಜಿ.ದೊಡ್ಡಿ,‌ ಮಾರ್ಟಳ್ಳಿ ಗ್ರಾಮದಲ್ಲಿ ಒಟ್ಟು 17 ಮಂದಿ ಕ್ರಿಮಿನಾಶಕ ಬೆರೆಸಿದ್ದ ಪ್ರಸಾದ ಸೇವಿಸಿ ಅಸುನೀಗಿದ್ದರು. ಮೃತರ ಸಂಬಂಧಿಕರು ಸಮಾಧಿಗಳಿಗೆ ತೆರಳಿ ಪೂಜೆ ಸಲ್ಲಿಸುವ ವೇಳೆ ಅಗಲಿದವರನ್ನು ನೆನೆದು ಕಣ್ಣೀರಿಟ್ಟರು.‌

ಇನ್ನು, ದುರಂತಕ್ಕೆ ಕಾರಣವಾದ ನಾಲ್ವರು ಆರೋಪಿಗಳು‌ ಮೈಸೂರಿನ ಜೈಲಿನಲ್ಲಿದ್ದಾರೆ.

ದೇವರ ನಂಬಿಕೆಗೆ ದ್ರೋಹ ಬಗೆದ ಕೇಸ್:

ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಪೈಶಾಚಿಕ ಕೃತ್ಯ ಸದ್ದು ಮಾಡಿತ್ತು. ಬರೋಬ್ಬರಿ 150 ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ 17 ಮಂದಿ ಅಸುನೀಗಿದ್ದರು. ಜೀವ ಉಳಿಸಿಕೊಂಡು ಬಂದವರು ಕಳೆದ ಆರು ವರ್ಷಗಳಿಂದಲೂ ಸಹ ಅಂಗಾಂಗಗಳ ವೈಫಲ್ಯದಿಂದ ಇನ್ನೂ ಚೇತರಿಸಿಕೊಳ್ಳದೆ ಆಸ್ಪತ್ರೆಗಳಿಗೆ ಅಲೆಯುವಂಥ ಪರಿಸ್ಥಿತಿ ಇದೆ. ವಿಷ ಪ್ರಸಾದ ತಿಂದು ಬದುಕುಳಿದರೂ ನರಳಾಟದ ಜೀವನವಾಗಿದ್ದು ಸಂತ್ರಸ್ಥರ ಯಾತನೆ ಮುಂದುವರೆದಿದೆ.

2018ರ ಡಿ‌.14 ರಂದು ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ನಡೆದ ಘಟನೆಯಿಂದ ಬಿದರಹಳ್ಳಿ , ಎಂ.ಜಿ.ದೊಡ್ಡಿ, ಮಾರ್ಟಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ದೇವರ ಪ್ರಸಾದಕ್ಕೆ ವಿಷ ಬೆರೆಸಿದ್ದ ಟೊಮೊಟೋ ಬಾತ್ ತಿಂದು 17 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟು 150ಕ್ಕೂ ಹೆಚ್ಚು ಜನ ಈ ವಿಷ ಪ್ರಸಾದ ಘಟನೆಯಲ್ಲಿ ಮಾರಮ್ಮನ ಭಕ್ತರು ವಿವಿಧ ನೂನ್ಯತೆಗಳಿಂದ ಹಾಗೂ ಅಂಗಾಂಗಗಳ ವೈಫಲ್ಯಗಳಿಂದ ಕೊನೆಗೂ ಬದುಕುಳಿದು ಬಂದರು.

ದೇಗುಲದಲ್ಲಿ ತಮ್ಮ‌ ಅಧಿಪತ್ಯವನ್ನು ಸಾಧಿಸಬೇಕೆಂಬ ಉದ್ದೇಶದಿಂದ ಅಂದಿನ ಸಾಲೂರು ಮಠದ ಕಿರಿಯ ಸ್ವಾಮೀಜಿಯಾಗಿದ್ದ ಮಹಾದೇವಸ್ವಾಮಿ ಸೇರಿ ಮೂವರು ದೇವರ ಪ್ರಸಾದಕ್ಕೆ ಸಿದ್ಧಪಡಿಸಿದ್ದ ಟೊಮೆಟೋ ಬಾತ್ ಗೆ ಕ್ರಿಮಿನಾಶಕ ಬೆರೆಸಿ ಪೈಶಾಚಿಕ ಕೃತ್ಯ ಎಸಗಿದ್ದರು.

ವಿಷ ಪ್ರಸಾದ ಪ್ರಕರಣದಲ್ಲಿ ಇನ್ನೂ ಈಡೇರದ ಭರವಸೆ:

ಕನ್ನಡಪ್ರಭ ವಾರ್ತೆ ಹನೂರು

ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣದಲ್ಲಿ ನೊಂದವರಿಗೆ ಸರ್ಕಾರ ನೀಡಿದ್ದ ಭರವಸೆ ಈಡೇರಿಸಬೇಕು ಹಾಗೂ ಪ್ರಕರಣದ ಆರೋಪಿಗಳಿಗೆ ವಿಶೇಷ ನ್ಯಾಯಾಲಯ ತೆರೆದು ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಪೆದ್ದನ ಪಾಳ್ಯ ಪಿ.ಜಿ. ಮಣಿ ಒತ್ತಾಯಿಸಿದರು.

ಹನೂರು ತಾಲೂಕಿನ ಮಾಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಳ್ಳಿ ಗ್ರಾಮದಲ್ಲಿ ಸುಳ್ವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಮೃತಪಟ್ಟಿದ್ದ 17 ಜನರಿಗೆ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣ ನಡೆದು ಆರು ವರ್ಷಗಳು ಪೂರ್ಣಗೊಂಡಿವೆ. ಆದರೆ ಸರ್ಕಾರ ನೀಡಿದ್ದ ಭರವಸೆಗಳು ಈಡೇರದೆ ಇರುವುದರಿಂದ ಬಾಧಿತರು ಇನ್ನೂ ಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಸುಮಾರು 600 ಕ್ಕೂ ಹೆಚ್ಚು ಸಾಕ್ಷಿದಾರರು ಇದ್ದಾರೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಈ ಪ್ರಕರಣ ಬರುತ್ತಿ,ದೆ ಕೇವಲ ಒಂದು ಬಾರಿಗೆ ಎರಡು ಅಥವಾ ಮೂರು ಸಾಕ್ಷಿದಾರರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಪ್ರಕರಣ ಇತ್ಯರ್ಥವಾಗಲು ಸುಮಾರು 20 ವರ್ಷಗಳೇ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ನ್ಯಾಯಾಲಯ ತೆರೆದು ನೊಂದ ಜನರಿಗೆ ನ್ಯಾಯ ಒದಗಿಸಿ ಕೊಡಬೇಕು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಮನವಿ ಮಾಡಿದರು.

ಡಿಎಸ್ಎಸ್ ಸಂಚಾಲಕ ಸಿದ್ದರಾಜು ಮಾತನಾಡಿ, ಸುಳ್ವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಮೃತಪಟ್ಟಿರುವ ಬಹುತೇಕರು ಪರಿಶಿಷ್ಟ ಜಾತಿ ಸಮಾಜಕ್ಕೆ ಸೇರಿದವರೇ ಆಗಿದ್ದಾರೆ. ಸರ್ಕಾರ ಇವರಿಗೆ ನೀಡಿದ್ದ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ, ಇನ್ನು ಮುಂದಾದರೂ ಸರ್ಕಾರ ಬಾಧಿತ ಕುಟುಂಬಗಳಿಗೆ ನೆರವು ಕಲ್ಪಿಸುವ ಮೂಲಕ ಅವರ ಜೀವನಕ್ಕೆ ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ರಾಮಲಿಂಗಂ ಮಾತನಾಡಿ, ವಿಷ ಪ್ರಸಾದ ಪ್ರಕರಣದ ಸಂದರ್ಭದಲ್ಲಿ ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರ 5 ಲಕ್ಷ ರು. ಪರಿಹಾರ ನೀಡಿ ಕೆಲವರಿಗೆ ಕೆಲವು ನಿಗಮಗಳಿಂದ ಸಹಾಯ ಮಾಡಿದೆ. ಅಸ್ವಸ್ಥರಾಗಿ ಚಿಕಿತ್ಸೆ ಪಡೆದುಕೊಂಡ ಬಹುತೇಕರಿಗೆ ಇನ್ನೂ ಅನಾರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ಕೂಲಿ ಕೆಲಸವನ್ನು ಮಾಡಲು ಸಹ ಆಗುತ್ತಿಲ್ಲ, ಈ ಹಿನ್ನೆಲೆ ಸರ್ಕಾರ ಇವರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.