ಹೇಳಿಕೆ ತಿರುಚಿ ವಿವಾದ ಸೃಷ್ಟಿಸುವುದು ಬೇಡ: ಶಾಸಕ ಗೋಪಾಲಕೃಷ್ಣ ಸ್ಪಷ್ಟನೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ಸಿಗುತ್ತಿಲ್ಲ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ತಾಲೂಕನ್ನು ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ಅಥವಾ ಚಳ್ಳಕೆರೆಗೆ ಸೇರಿಸಿ ಎಂದು ಹೇಳುವ ಭರದಲ್ಲಿ ಬಾಯಿತಪ್ಪಿ ಆಂಧ್ರಪ್ರದೇಶಕ್ಕೆ ಸೇರಿಸಿ ಎಂದು ಹೇಳಿದ್ದೇನೆ ಇದು ಆಕಸ್ಮಿಕ ಹೊರತು ಉದ್ದೇಶ ಪೂರಕವಲ್ಲ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

ತಾಲೂಕಿನ ಹಾನಗಲ್ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಮಣ್ಣಲ್ಲಿ ಹುಟ್ಟಿ ಬೆಳೆದವನು. ನನಗೂ ಇಲ್ಲಿನ ಸಮಸ್ಯೆಗಳ ಅರಿವಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕ್ಷೇತ್ರ ಅಭಿವೃದ್ಧಿ ಕಾಣುತ್ತಿಲ್ಲ.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಸಮರ್ಪಕ ಗೌರವ ಹಾಗೂ ಸ್ಥಾನಮಾನ ಸಿಗುತ್ತಿಲ್ಲ.ನೀರಾವರಿ ಇಲ್ಲದೆ ಮಳೆಯೂ ಬಾರದೆ ಜನತೆ ವಲಸೆ ಹೋಗುವಂತ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ 371(ಜೆ) ಅಡಿಯಲ್ಲಿ ಸ್ಥಾನಮಾನ ಹಾಗೂ ಹೆಚ್ಚಿನ ಅನುದಾನ ದೊರೆಯಲಿದೆ. ಚಳ್ಳಕೆರೆಗೆ ಸೇರಿದರೆ ನೀರಾವರಿ ಸೌಲಭ್ಯಗಳು ದೊರೆಯಲಿವೆ ಎಂಬ ಉದ್ದೇಶದಿಂದ ಹೇಳುವ ಬರದಲ್ಲಿ ಹೈದರಾಬಾದ್ ಕರ್ನಾಟಕ ಎನ್ನುವ ಬದಲು ಆಂಧ್ರ ಪ್ರದೇಶ ಎಂದು ಮಾತನಾಡಿದ್ದೇನೆ. ಇದೊಂದು ಆಕಸ್ಮಿಕವಷ್ಟೇ ಈ ಕುರಿತು ವಿವಾದ ಸೃಷ್ಟಿಸಿ ರಾಜಕೀಯ ಬಣ್ಣ ನೀಡುವುದು ಸರಿಯಲ್ಲ. ಕ್ಷೇತ್ರದ ಬಗ್ಗೆ ನನಗೆ ಅಪಾರ ಅಭಿಮಾನವಿದ್ದು ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ. ಮನುಷ್ಯ ಸಹಜವಾಗಿ ಮಾತನಾಡುವಾಗ ಮಾತಿನಲ್ಲಿ ವ್ಯತ್ಯಾಸವಾಗಬಹುದು. ಈ ಆಕಸ್ಮಿಕವಾದ

ಹೇಳಿಕೆಯ ಕುರಿತು ವಿಷಾದ ವ್ಯಕ್ತ ಪಡಿಸುತ್ತೇನೆಂದು ಸ್ಪಷ್ಟ ಪಡಿಸಿದರು.