ನಮ್ಮ ಮನೆಗೆ ಬಂದಿಲ್ಲ, ಜಾತಿ ಗಣತಿ ವರದಿ ಒಪ್ಪಲ್ಲ: ಬಸವರಾಜ ಶಿವಗಂಗಾ ಹೇಳಿಕೆ

| Published : Feb 24 2025, 12:32 AM IST

ಸಾರಾಂಶ

ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿ ಬಿಡುಗಡೆಗೆ ಬಿಡುವುದಿಲ್ಲ. ಈ ಬಗ್ಗೆ ನಾನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಮ್ಮ ಮನೆಗೆ ಬಂದು ಜಾತಿ ಗಣತಿಯನ್ನೇ ಮಾಡಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ ಹೇಳಿದ್ದಾರೆ.

- ಕೆ.ಎನ್.ರಾಜಣ್ಣ ಹೇಳಿಕೆಗೆ ಆಕ್ಷೇಪ, ಹಿರಿಯರೆ ತಪ್ಪು ದಾರಿಯಲ್ಲಿ ಹೋಗಬಾರದು - ಎಲ್ಲಿಯೋ ಕುಳಿತುಕೊಂಡು, ಜಾತಿ ಗಣತಿ ಮಾಡಿದರೆ ಒಪ್ಪುವುದಾದರೂ ಹೇಗೆ?

- ಪವರ್ ಶೇರಿಂಗ್ ವಿಚಾರ ಕಾಂಗ್ರೆಸ್‌ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದ ಚನ್ನಗಿರಿ ಶಾಸಕ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿ ಬಿಡುಗಡೆಗೆ ಬಿಡುವುದಿಲ್ಲ. ಈ ಬಗ್ಗೆ ನಾನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಮ್ಮ ಮನೆಗೆ ಬಂದು ಜಾತಿ ಗಣತಿಯನ್ನೇ ಮಾಡಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ ಹೇಳಿದರು.

ಚನ್ನಗಿರಿ ತಾಲೂಕಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿಯೋ ಕುಳಿತುಕೊಂಡು, ಜಾತಿ ಗಣತಿ ಮಾಡಿದರೆ ಒಪ್ಪುವುದಾದರೂ ಹೇಗೆ? ನಮ್ಮ ಮನೆಗೆ ಗಣತಿಗೆ ಬಂದಿಲ್ಲವೆಂದ ಮೇಲೆ, ಅಂತಹ ವರದಿ ಹೇಗೆ ಒಪ್ಪಬೇಕು? ಸಿಎಂ ಜಾತಿಗಣತಿ ವರದಿ ಬಿಡುಗಡೆ ಮಾಡುತ್ತಾರೆಂಬುದಾಗಿ ಹೇಳುತ್ತಿದ್ದೀರಿ. ಆದರೆ, ಶಾಸಕರಾದ ನಮ್ಮ ಗಮನಕ್ಕೆ ತಂದರ ನಂತರವೇ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದರು.

ಹಿರಿಯರಾದ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದ್ದು ತಪ್ಪು. ನಾವೆಲ್ಲಾ ಮೊದಲ ಸಲ ಗೆದ್ದು, ಶಾಸಕರಾಗಿದ್ದೇವೆ. ಹಿರಿಯರ ಹಾದಿಯಲ್ಲೇ ನಾವೂ ನಡೆಯುತ್ತೇವೆ. ಹಿರಿಯರು ತಪ್ಪು ಹಾದಿಯಲ್ಲಿ ಹೋದರೆ, ನಾವೂ ತಪ್ಪು ದಾರಿಯಲ್ಲೇ ಹೋದಂತಾಗುತ್ತದೆ ಎಂದು ಕೆ.ಎನ್.ರಾಜಣ್ಣ ಹೇಳಿಕೆಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಸ್ವತಃ ಹೈಕಮಾಂಡ್ ಎಚ್ಚರಿಕೆ ನೀಡಿದರೂ ಸಚಿವ ಕೆ.ಎನ್.ರಾಜಣ್ಣನವರು ಮಾತನಾಡುವುದು ತಪ್ಪು. ಒಬ್ಬರ ಕೈಯಿಂದ ಬದಲಾವಣೆ ಆಗುವುದಾಗಿದ್ದರೆ ಮಾಡಬಹುದಿತ್ತು. ಆದರೆ, ಹೈಕಮಾಂಡ್‌ ನಿರ್ಧಾರವಾಗಿದ್ದರಿಂದ ಯಾರೂ ಮಾತನಾಡಬಾರದು. ಹೀಗೆಯೇ ಮಾತನಾಡುತ್ತಾ ಹೋದರೆ, ಕಾರ್ಯಕರ್ತರಲ್ಲಿ ಗೊಂದಲವಾಗುತ್ತದೆ ಎಂದು ಶಾಸಕ ಬಸವರಾಜ, ಪವರ್ ಶೇರಿಂಗ್ ವಿಚಾರ ತಮ್ಮ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಷ್ಟೇ ಪ್ರತಿಕ್ರಿಯಿಸಿದರು.

- - - (ಬಸವರಾಜ ಶಿವಗಂಗಾ, ಶಾಸಕ ಚನ್ನಗಿರಿ)