ಅಂಬಿಗರ ಚೌಡಯ್ಯನವರ ಏಕೈಕ ಪೀಠವಾದ ನರಸೀಪುರದಲ್ಲಿ ಡಿ.7ರಂದು ಸಮಾವೇಶ ನಡೆಸುವುದಾಗಿ ಕೆಲವರು ಹೇಳಿಕೆ ನೀಡಿದ್ದು, ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಈ ಸಮಾವೇಶ ಮಾಡುತ್ತಿರುವವರಿಗೂ ಅಂಬಿಗರ ಚೌಡಯ್ಯನವರ ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಈ ಕುರಿತು ಸಮಾಜ ಬಾಂಧವರು ಗೊಂದಲಕ್ಕೆ ಈಡಾಗದೇ ಈ ಸಮಾವೇಶದಿಂದ ದೂರವಿರುವಂತೆ ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ಮನವಿ ಮಾಡಿದ್ದಾರೆ.

ಹಾವೇರಿ:ಅಂಬಿಗರ ಚೌಡಯ್ಯನವರ ಏಕೈಕ ಪೀಠವಾದ ನರಸೀಪುರದಲ್ಲಿ ಡಿ.7ರಂದು ಸಮಾವೇಶ ನಡೆಸುವುದಾಗಿ ಕೆಲವರು ಹೇಳಿಕೆ ನೀಡಿದ್ದು, ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಈ ಸಮಾವೇಶ ಮಾಡುತ್ತಿರುವವರಿಗೂ ಅಂಬಿಗರ ಚೌಡಯ್ಯನವರ ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಈ ಕುರಿತು ಸಮಾಜ ಬಾಂಧವರು ಗೊಂದಲಕ್ಕೆ ಈಡಾಗದೇ ಈ ಸಮಾವೇಶದಿಂದ ದೂರವಿರುವಂತೆ ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ಮನವಿ ಮಾಡಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲಾ ಯಲಬುರ್ಗಾ ತಾಲೂಕು ಕುಕನೂರು ಗ್ರಾಮದಲ್ಲಿ ನಮ್ಮದೇ ಸಮುದಾಯದ ಕೆಲವರು ಈ ಹೇಳಿಕೆ ನೀಡಿದ್ದು ಇದು ಸಮಾಜದಲ್ಲಿನ ಒಗ್ಗಟ್ಟಿಗೆ ಸವಾಲೆಸೆಯುವಂತಿದೆ. ಈ ಕುರಿತು ಈಗಾಗಲೇ ಅಲ್ಲಿನ ಸಮಾಜ ಬಾಂಧವರ ಜತೆಗೆ ಮಾತುಕತೆ ನಡೆದಿದ್ದು ಸೌಹಾರ್ದಯುತ ಮಾತುಕತೆಗೆ ಒಪ್ಪಿಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ತಪ್ಪು ಸಂದೇಶ ಹೋಗುತ್ತಿರುವ ಹಿನ್ನೆಲೆಯಲ್ಲಿ ಗೊಂದಲ ನಿವಾರಣೆಗೆ ಮುಂದಾಗಿದ್ದೇವೆ. ಈ ಸಮಾವೇಶಕ್ಕೂ ಅಂಬಿಗರ ಚೌಡಯ್ಯ ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲದೇ ಈ ಕುರಿತು ಸಮಾವೇಶಕ್ಕೆ ಅವಕಾಶ ಮತ್ತು ಅನುಮತಿ ನೀಡದಿರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಇನ್ನು ಇತ್ತೀಚೆಗೆ ಬಿಡುಗಡೆಯಾದ 32 ಕೋಟಿ ರು. ವೆಚ್ಚದ ಬಗ್ಗೆ ಸಮಾಜದಲ್ಲಿ ತಪ್ಪು ಅಭಿಪ್ರಾಯ ಸೃಷ್ಟಿಸಲಾಗುತ್ತಿದೆ. ಆದರೆ ನೈಜವಾಗಿ ಈ ಮೊತ್ತ ಪೀಠಕ್ಕೆ ಬಂದಿದ್ದಲ್ಲ, ಅಂಬಿಗರ ಚೌಡಯ್ಯನವರ ಮಠದ ಪಕ್ಕದಲ್ಲಿ ಒಂದು ಎಕರೆ ಜಮೀನು ಪಡೆದು ಅಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಈ ಹಣಕ್ಕೆ ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಕಾರಣ ವಾಸ್ತವತೆ ತಿಳಿಯದೇ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವುದನ್ನು ಪೀಠ ಹಾಗೂ ಜಿಲ್ಲಾ ಸಂಘ ತೀವ್ರವಾಗಿ ಖಂಡಿಸುತ್ತವೆ. ಪೀಠದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಮಾಜ ಬಾಂಧವರಿಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ. ಆದರೆ ಅದು ಪೀಠದ ಹಾಗೂ ಶ್ರೀಗಳ ಅನುಮತಿಯೊಂದಿಗೆ ನಡೆಯಬೇಕು. ಎಲ್ಲೋ ಕುಳಿತು ಸಮಾಜದ ಸಂಘಟನೆ ಒಡೆಯುವ, ಪೀಠದ ಬಗ್ಗೆ ತಪ್ಪು ಸಂದೇಶ ನೀಡುವ ಕೆಲಸವನ್ನು ಕೈಬಿಡಬೇಕು. ಈ ಕುರಿತು ಉಂಟಾದ ತಪ್ಪು ತಿಳುವಳಿಕೆಗಳನ್ನು ಪೀಠಕ್ಕೆ ಬಂದು ಪರಿಹರಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಮಂಜುನಾಥ ಭೋವಿ, ಶಂಕರ ಸುತಾರ, ಬಸವರಾಜ ಕಳಸೂರ, ರಾಜು ಜಾಡಮಲ್ಲಿ, ಕರಬಸಪ್ಪ ಹಳದೂರ, ಶಂಬು ಸಕ್ರಣ್ಣನವರ, ಪ್ರಕಾಶ ಅಂಬಿಗೇರ, ಅಣ್ಣಪ್ಪ ಚಾಕಾಪುರ, ಶಂಕ್ರಪ್ಪ ಸಣ್ಣಬಾರ್ಕಿ, ನಿಂಗಪ್ಪ ಹೆಗ್ಗಣ್ಣನವರ, ದೇವರಾಜ ಸುಣಗಾರ ಸೇರಿದಂತೆ ಇತರರು ಇದ್ದರು.