ಸಾರಾಂಶ
ಕನ್ನಡಪ್ರಭ ವಾರ್ತೆ ಹಿರೇಕೆರೂರು
ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ಇಂದು ಉದ್ಘಾಟನೆಗೊಂಡು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಹೆಮ್ಮೆಯ ದಿನವಾಗಿದೆ. ಭಾರತೀಯರೆಲ್ಲರೂ ನಾವು ಜಾತಿ, ಬೇಧ, ಮತ, ಪಂಥಗಳನ್ನು ತೊರೆದು ಒಗ್ಗೂಡಿದ ದಿನವಿದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ಪಟ್ಟಣದ ಸರ್ವಜ್ಞ ಸ್ಮಾರಕ ಸಮಿತಿಯ ಹಾಗೂ ಸಿಇಎಸ್ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ಇಡೀ ವಿಶ್ವವೇ ಭಾರತದತ್ತ ಚಿತ್ತದಿಂದ ನೋಡುತ್ತಿದೆ. ಭಾರತೀಯರ ಸಾಂಸ್ಕೃತಿಕ ಸಂಕೇತವಾದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಭವ್ಯವಾಗಿ ನಿರ್ಮಾಣಗೊಂಡು ಭಾರತದ ಪ್ರಧಾನಿ ಮೋದಿಜಿಯವರು ಬಾಲರಾಮನಿಗೆ ಜೀವ ತುಂಬುವ ಮೂಲಕ ಮತ್ತೊಮ್ಮ ರಾಮನನ್ನು ಈ ಭೂಮಿಗೆ ಕರೆತಂದಿದ್ದಾರೆ. ದುಷ್ಟ ಶಕ್ತಿಗಳು ದಮನವಾಗಿ ಭಾರತ ಇನ್ನು ರಾಮರಾಜ್ಯವಾಗುವಲ್ಲಿ ಯಾವುದೇ ಸಂದೇಹವಿಲ್ಲವೆಂದರು.
ಸಮಾರಂಭದಲ್ಲಿ ಸರ್ವಜ್ಞ ಸ್ಮಾರಕ ಸಮಿತಿಯ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ೫೦೦ ವರ್ಷಗಳ ಭಾರತೀಯರ ಕನಸು ನನಸಾಗಿದೆ. ಈ ಸಂಭ್ರಮದ ಹಿಂದೆ ಸಾವಿರ ನೋವುಗಳಿದ್ದರೂ ಅವೆಲ್ಲವುಗಳನ್ನು ಮರೆತು ಜನರು ರಾಮ ಮಂದಿರದ ಉದ್ಘಾಟನೆಯನ್ನು ಕಣ್ತುಂಬಿಕೊಂಡಿದ್ದಾರೆ. ಗತಕಾಲದ ವೈಭವವನ್ನು ಮತ್ತೆ ಮರು ಸ್ಥಾಪಿಸುವಲ್ಲಿ ಪ್ರತಿಯೊಬ್ಬ ಭಾರತೀಯರ ಕೊಡುಗೆ ಇದೆ ಎಂದರು.ಸಮಾರಂಭದ ವೇದಿಕೆಯ ಭವ್ಯ ಮಂಟಪದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಧಾನ ಅರ್ಚಕರಿಂದ ಪೂಜೆ ಸಲ್ಲಿಸಲಾಯಿತು. ವಿವೇಕ ಬಳಗದ ಮಹಿಳೆಯರಿಂದ ಹಾಗೂ ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಯಿಂದ ವಿದ್ಯಾರ್ಥಿಗಳಿಂದ ಭಜನೆ, ಸ್ತೋತ್ರ, ಜಪ, ನಡೆಯುವುದರೊಂದಿಗೆ ಕಾರ್ಯಕ್ರಮ ವೈವಿಧ್ಯಮಯವಾಗಿ ಜರುಗಿತು. ಎಸ್.ಬಿ. ತಿಪ್ಪಣ್ಣನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಅಶೋಕ ಪಾಟೀಲ, ಲಿಂಗರಾಜ ಚಪ್ಪರದಳ್ಳಿ, ಶಕುಂತಲಮ್ಮ ಪಾಟೀಲ ಪಾಲ್ಗೊಂಡಿದ್ದರು. ಆನಂದಪ್ಪ ಹಾದಿಮನಿ, ಶಂಕರಗೌಡ, ಸಿದ್ಧನಗೌಡ ಚನ್ನಗೌಡ್ರ, ಏಕೇಶಣ್ಣ ಬಣಕಾರ ಹಾಗೂ ವಿದ್ಯಾಸಂಸ್ಥೆಯ ಸಮಸ್ತ ಮುಖ್ಯಸ್ಥರು ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು. ಎಸ್. ವೀರಭದ್ರಯ್ಯ ಸ್ವಾಗತಿಸಿದರು. ಡಾ. ಎಸ್.ಬಿ. ಚನ್ನಗೌಡ್ರ ನಿರೂಪಿಸಿದರು. ಆರ್.ಎಂ. ಕರೇಗೌಡ್ರ ವಂದಿಸಿದರು.