ಇಂದಿನ ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸಿಕೊಂಡು ಹೋಗುತ್ತ ನಮ್ಮ ದೇಶದ ಸಂಸ್ಕೃತಿ ಮರೆಯುತ್ತ ಸಾಗಿರುವುದು ದೊಡ್ಡ ಅಘಾತಕಾರಿ ಸಂಗತಿಯಾಗಿದೆ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಇಂದಿನ ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸಿಕೊಂಡು ಹೋಗುತ್ತ ನಮ್ಮ ದೇಶದ ಸಂಸ್ಕೃತಿ ಮರೆಯುತ್ತ ಸಾಗಿರುವುದು ದೊಡ್ಡ ಅಘಾತಕಾರಿ ಸಂಗತಿಯಾಗಿದೆ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ಧಿಪುರುಷ ರಾಮಲಿಂಗೇಶ್ವರ ಮಠದ ಹಾಗೂ ನೂತನ ಸಭಾ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನೂತನ ಮಠದ ಆವರಣದಲ್ಲಿ ನಡೆದ ಬೃಹತ್ ರೈತ ಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ದಿನದಲ್ಲಿ ಭಾರತೀಯ ಸಂಸ್ಕೃತಿಯು ನಶಿಸಲಿಕ್ಕೆ ಹತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಜನರು ವಾಲುತ್ತಿರುವುದು ಆತಂಕದಾಯವಾಗಿದೆ. ಇಂತಹ ಪಾಶ್ಚಿಮಾತ್ಯ ಸಂಸ್ಕೃತಿ ತೆಗೆದುಹಾಕಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅವಶ್ಯವಾಗಿದೆ ಎಂದರು.ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ರೈತರಿಗಾಗಿ ಸಾಕಷ್ಟು ಅನುಕೂಲತೆಗಳು ಬಂದಿದ್ದರೂ ಕೂಡಾ ನೀರಿನ ಕೊರತೆಯಿಂದ ಈ ಭಾಗದಲ್ಲಿ ರೈತ ಸಂಕಷ್ಟಕ್ಕೆ ಸಿಲುಕುತ್ತ ಸಾಗಿದ್ದಾನೆ. ಎಲ್ಲ ರಂಗಗಳಲ್ಲಿ ಆಧುನಿಕತೆ ಮೂಲಕ ಸಾಕಷ್ಟು ಮುಂದುವರೆಯುತ್ತ ಸಾಗಿದ್ದೇವೆ. ಅದೇ ರೀತಿ ರೈತ ಬಾಂಧವರು ಇಂದಿನ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಮುಂದೆ ಸಾಗಬೇಕಾಗಿದೆ ಎಂದರು.ಜಾಲಹಳ್ಳಿಯ ಜಗದರಾಧ್ಯ ಜಯಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಯಾವಾಗ ಧರ್ಮದ ಅವನತಿಯಾಗುತ್ತಿರುತ್ತದೆ ಅವಾಗ ಮಹಾತ್ಮರ ರೂಪದಲ್ಲಿ ಹುಟ್ಟಿ ಬಂದು ಕಾಪಾಡುತ್ತಾರೆ ಎಂಬಂತೆ ಈಗೀನ ರಾಮಲಿಂಗೇಶ್ವರ ಸ್ವಾಮಿಗಳು ಭಕ್ತರ ಬಾಳಿನಲ್ಲಿ ಬೆಳಕನ್ನು ಚೆಲ್ಲುವಂತಹ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಮಾತನಾಡಿ, ಸಮಾಜದಲ್ಲಿ ಮಠ, ಮಾನ್ಯಗಳ ಪಾತ್ರ ಅತ್ಯಂತ ಹಿರಿಯದ್ದಾಗಿದೆ. ಶಾಲೆಯಲ್ಲಿ ಅಕ್ಷರ ಜ್ಞಾನ ಮೂಡಿಸಿದರೇ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ದಾರಿಯನ್ನು ಮಠ, ಮಾನ್ಯಗಳು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಕಲಿಸುತ್ತ ಸಾಗಿವೆ. ಮನುಷ್ಯನ ದೇಹಕ್ಕೆ, ಮನಸ್ಸಿಗೆ ಸಂಸ್ಕಾರ ಸಿಕ್ಕಾಗ ಜೀವನ ಪಾವನವಾಗಲಿದೆ ಎಂದರು.ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೋಮನಗೌಡ ಪಾಟೀಲ (ಮನಗೂಳಿ), ಪ್ರವಚನಕಾರರಾಗಿ ಆಗಮಿಸಿದ ಗದಗ ಕದಮನಹಳ್ಳಿ ವಿರೇಶ್ವರ ಪುಣ್ಯಾಶ್ರಮದ ಪಂಡಿತ ವೇ.ಪಂಚಾಕ್ಷರಿ ಶಾಸ್ತ್ರಿಗಳು ಹಿರೇಮಠ ಮಾತನಾಡಿದರು.ವೇದಿಕೆಯ ಮೇಲೆ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞವೈದ್ಯ ಡಾ.ಪ್ರಭುಗೌಡ ಲಿಂಗದಳ್ಳಿ, ಅಥಣಿ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು, ನೂತನಮಠದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ಮಹಾಸ್ವಾಮಿಗಳು, ನಾವದಗಿ ಹಿರೇಮಠದ ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು, ದೇವರಹಿಪ್ಪರಗಿ ಪರದೇಶಿಮಠದ ಶಿವಯೋಗಿ ಮಹಾಸ್ವಾಮಿಗಳು, ಜಡಿಮಠದ ಜಡಿಸಿದ್ದೇಶ್ವರ ಮಹಾಸ್ವಾಮಿಗಳು, ಸಿದ್ದಿ ಪುರುಷ ರಾಮಲಿಂಗೇಶ್ವರ ಮಠದ ರಾಮಲಿಂಗಯ್ಯ ಮಹಾಸ್ವಾಮಿಗಳು, ಬಸನಗೌಡ ಪಾಟೀಲ(ಚಬನೂರ), ಸೋಮನಗೌಡ ಪಾಟೀಲ, ವಿಜುಗೌಡ ಪಾಟೀಲ(ಬಬಲೇಶ್ವರ), ಗುರಲಿಂಗಪ್ಪ ಅಂಗಡಿ, ಬಸನಗೌಡ ವಣಕ್ಯಾಳ, ಸಾಹೇಬಗೌಡ ವಣಕ್ಯಾಳ, ಸಿದ್ರಾಮಪ್ಪಮುತ್ಯಾ ಒಡೆಯರ, ಶಿವು ಮುತ್ಯಾ ಒಡೆಯರ, ಮೊದಲಾದವರು ಉಪಸ್ಥಿತರಿದ್ದರು.ನಾಗರಾಜ ಹೂಗಾರ, ಪ್ರವೀಣ ಪತ್ತಾರ ಸಂಗೀತ ಸೇವೆ ಸಲ್ಲಿಸಿದರು. ಕೊಡೇಕಲ್ಲ ಶಿವಕುಮಾರ ಮಹಾಸ್ವಾಮಿಗಳು ನಿರೂಪಿಸಿ, ವಂದಿಸಿದರು.ರೈತರಿಗೆ ಹುಮ್ಮಸ್ಸು ತುಂಬಿದ ಬಂಡಿಯಾತ್ರೆ

ರಾಮಲಿಂಗೇಶ್ವರ ನೂತನ ಮಠದ ಉದ್ಘಾಟನೆ ಅಂಗವಾಗಿ ನಡೆದ ರೈತ ಜನೋತ್ಸವ ಕಾರ್ಯಕ್ರಮಕ್ಕೂ ಮೊದಲು ಚಬನೂರ ಗ್ರಾಮದ ಶಾಲಾ ಆವರಣದಿಂದ ಪ್ರಾರಂಭಗೊಂಡ ಬೃಹತ್ ರೈತರ ಬಂಡಿಯಾತ್ರೆಗೆ ಮಾಜಿ ಶಾಸಕ ಸೋಮನಗೌಡ ಪಾಟೀಲ, ರಮೇಶ ಭೂಸನೂರ, ಡಾ.ಪ್ರಭುಗೌಡ ಲಿಂಗದಳ್ಳಿ ಚಾಲನೆ ನೀಡಿದರು. ರೈತನ ಬಂಡಿಯಲ್ಲಿ ಸಿದ್ದಿ ಪುರುಷ ರಾಮಲಿಂಗೇಶ್ವರರ ಭಾವಚಿತ್ರದ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ನೂರಾರು ರೈತಾಪಿ ಜನರು ಪಾಲ್ಗೊಂಡು ಹುಮ್ಮಸ್ಸಿನೊಂದಿಗೆ ಹರ್ಷೋದ್ಗಾರ ವ್ಯಕ್ತಪಡಿಸಿದರು. ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೂತನ ಮಠದ ಆವರಣಕ್ಕೆ ಆಗಮಿಸಿತು.

ರೈತ ಮತ್ತು ಸೈನಿಕ ನಮ್ಮ ದೇಶಕ್ಕೆ ಅತ್ಯಮೂಲ್ಯವಾದ ಆಸ್ತಿಗಳಾಗಿವೆ ರೈತ ಇಲ್ಲವೆಂದರೇ ಮಣ್ಣು ತಿನ್ನಬೇಕಾಗುತ್ತದೆ. ಸೈನಿಕ ಇಲ್ಲ ಅಂದರೆ ಮಣ್ಣು ಸೇರಬೇಕಾಗುತ್ತದೆ. ಅಂತಹ ಇಬ್ಬರಿಗೂ ಗೌರವಿಸುವಂತಹ ಕಾರ್ಯ ಚಬನೂರ ಗ್ರಾಮದ ರಾಮಲಿಂಗೇಶ್ವರ ನೂತನ ಮಠದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.

-ಸೋಮನಗೌಡ ಪಾಟೀಲ(ಸಾಸನೂರ), ಮಾಜಿ ಶಾಸಕರು.

ಪಂಚ ನದಿಗಳ ಬೀಡು ಎಂದು ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಎರಡು ಡ್ಯಾಂಗಳಿದ್ದರೂ ಕೂಡಾ ಜಮೀನುಗಳಿಗೆ ನೀರು ಬರುತ್ತಿಲ್ಲ. ಇದು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಜೊತೆಗೆ ರೈತರಲ್ಲಿ ಹೋರಾಟ ಮನೋಭಾವನೆ ಎಂಬುವುದು ಕುಗ್ಗಿದ್ದೆ ಕಾರಣವಾಗಿದೆ. ನಮ್ಮಲ್ಲಿ ಹೋರಾಟದ ಮನೋಭಾವನೆ ಎಂಬುವುದು ಬರಬೇಕು. ಪ್ರತಿ ಹಕ್ಕನ್ನು ಪಡೆದುಕೊಳ್ಳುವ ರೀತಿ ತಿಳಿದುಕೊಳ್ಳುವಂತಹ ಕಾರ್ಯವಾಗಬೇಕು. ಅಂದಾಗ ಮಾತ್ರ ಜಗತ್ತಿಗೆ ಅನ್ನ ನೀಡುವ ರೈತ ಮುಂದೆ ಬರಲು ಸಾಧ್ಯವಾಗಲಿದೆ.

-ಎ.ಎಸ್.ಪಾಟೀಲ(ನಡಹಳ್ಳಿ),

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರು.