ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ಕಾರ ಹಾಗೂ ಸಚಿವರು ಹೇಳಿದಂತೆ ರಾಜ್ಯದಲ್ಲಿ ಯಾವುದೇ ವಿದ್ಯುತ್ ಕಂಪನಿಗಳು ನಷ್ಟದಲ್ಲಿ ಇಲ್ಲ. ಈಗಾಗಲೇ ಗ್ರಾಹಕರ ಮೇಲೆ ವಿದ್ಯುತ್ ಹೆಚ್ಚಿನ ದರ ಹಾಕಿದೆ. ಮತ್ತೊಂದೆಡೆ ಸರ್ಕಾರದಿಂದಲೂ ನೇರವಾಗಿ ಸಬ್ಸಿಡಿ ಹಣ ಪಡೆಯುತ್ತಿದ್ದು, ಎಸ್ಕಾಂ ಕಂಪನಿಗಳು ನಷ್ಟದಲ್ಲಿವೆ ಎಂಬುವುದು ಸುಳ್ಳು ಎಂದು ರಾಜ್ಯ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇನ್ನೂ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದ್ದರೂ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಮಾರ್ಗ ನಿರ್ವಹಣೆಯಲ್ಲಿ ತೊರುತ್ತಿರುವ ನಿಷ್ಕಾಳಜಿ ತೋರುತ್ತಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳನ್ನು ಸುಧಾರಿಸಿದರೇ ಎಸ್ಕಾಂಗಳು ನಿರೀಕ್ಷೆ ಮೀರಿದ ಲಾಭ ಪಡೆಯಲು ಸಾಧ್ಯವಿದೆ. ಯಾವುದೇ ಗ್ರಾಹಕರು ಗೃಹಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಉಚಿತ ಸೌಲಭ್ಯ ಯೋಜನೆ ಲಾಭ ಪಡೆಯಲು ಅರ್ಜಿ ಸಲ್ಲಿಸಿದಾಗ 2022-2023ನೇ ಸಾಲಿನ ಸರಾಸರಿ ಪರಿಗಣಿಸಲಾಗುತ್ತದೆ. ಆದರೆ, 2023-2024 ವಿದ್ಯುತ್ ಬಳಕೆ ಹೆಚ್ಚಾಗಲಿದ್ದು, ಇದನ್ನು ಗಮನಕ್ಕೆ ತೆಗೆದುಕೊಂದು ಗ್ರಾಹಕರಿಗೆ ಇದರ ಅನ್ವಯ ಸೌಲಭ್ಯ ಕೊಡಬೇಕು ಎಂದು ಆಗ್ರಹಿಸಿದರು.ಹೊಸ ಮೀಟರ್ ಆರಂಭಕ್ಕೆ ವಿಳಂಬ ಮಾಡುವ ಜತೆಗೆ ಆರಂಭದಲ್ಲಿ 58 ಯುನಿಟ್ ವಿದ್ಯುತ್ ನೀಡಲಿದ್ದು, ಬಿಲ್ ಬಂದ ನಂತರ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಹಾಕಬೇಕು. ಆದರೆ, ವಾಸ್ತವಾಗಿ ಹೆಸ್ಕಾಂ ಅಧಿಕಾರಿಗಳು ಹೊಸ ಮೀಟರ್ ಖಾತೆ ಆರಂಭಿಸುವಲ್ಲಿ ಹಾಗೂ ನಂತರ ಅರ್ಜಿ ಸಲ್ಲಿಕೆಗೆ ವಿಳಂಬ ಮಾಡುವುದರಿಂದ ಉಚಿತ ಯೋಜನೆ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.ಗೃಹಜ್ಯೋತಿ ಯೋಜನೆಯಲ್ಲಿ ಬಹುತೇಕ ಗ್ರಾಹಕರಿಗೆ 200 ಯುನಿಟ್ ಉಚಿತ ವಿದ್ಯುತ್ ದೊರೆಯುತ್ತಿಲ್ಲ. ಎಸ್ಕಾಂ ಕೆಳಹಂತದಿಂದ ಮೇಲ್ಮಟ್ಟದವರೆಗೆ ಬಹುತೇಕ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ಕಾಳಜಿ ವಹಿಸಬೇಕಿರುವ ಜನಪ್ರತಿನಿಧಿಗಳು ನಿರ್ಲಕ್ಷ್ಯ ತಾಳಿದ್ದು, ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.ಹೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಗ್ರಾಹಕರು ಲಿಖಿತ ಮನವಿ ಸಲ್ಲಿಸಿದರೂ ಬಹುತೇಕ ಅಧಿಕಾರಿಗಳು ಕನಿಷ್ಠ ಸೌಜನ್ಯದ ಸ್ಪಂದನೆ ತೋರುತ್ತಿಲ್ಲ. ಹೀಗಾಗಿ ಸಮಪರ್ಕ ಉತ್ತರಿಸುವ ಮಾತು ದೂರದ್ದೇ ಆಗಿದೆ. ಇನ್ನು ಆಡಳಿತ ಇಡೀ ವ್ಯವಸ್ಥೆಯನ್ನು ಆನ್‌ಲೈನ್ ಮಾಡಲಾಗಿದೆ ಎಂದು ಹೇಳಿಕೊಳ್ಳುವ ಎಸ್ಕಾಂ ಕಂಪನಿಗಳು ಈಗಲೂ ಬಹುತೇಕ ಕಚೇರಿ ವ್ಯವಹಾರವನ್ನು ಮಾನವ ಆಧಾರಿತವಾಗಿಯೇ ಮಾಡುತ್ತಿದ್ದಾರೆ. ಆನ್‍ಲೈನ್ ಏಕಿಲ್ಲ ಎಂದು ಕೇಳಿದರೆ ತಾಂತ್ರಿಕ ನೆಪಗಳನ್ನು ಹೇಳುವ ಮೂಲಕ ಸಮಸ್ಯೆಯನ್ನು ಹಗುರವಾಗಿ ಪರಿಗಣಿಸುವ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.ಗಮನೀಯ ಅಂಶವೆಂದರೇ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಸುವ ಕುರಿತು ಎಸ್ಕಾಂ ಕಚೇರಿಗಳಲ್ಲಿ ತೆರೆಯಲಾಗಿದ್ದ ಗ್ರಾಹಕರ ಕೌಂಟರ್‌ಗಳನ್ನೆಲ್ಲ ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಸಾರ್ವಜನಿಕರು ಪರದಾಡುವ ಸ್ಥಿತಿ ಇದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ವಿದ್ಯುತ್ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಬೇಕು.
-ಮಲ್ಲಿಕಾರ್ಜುನ ಕೆಂಗನಾಳ, ರಾಜ್ಯ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರು.