ಯುವಕರು ರಾಜಕಾರಣದಿಂದ ದೂರವಿದ್ದಷ್ಟು ದೇಶಕ್ಕೆ ನಷ್ಟ

| Published : Oct 22 2024, 12:01 AM IST / Updated: Oct 22 2024, 12:02 AM IST

ಸಾರಾಂಶ

ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಮಾಹಿತಿಗಳಿಗೆ ಕಿವಿಗೊಡದೆ, ನೈಜ ಸಂಗತಿ ತಿಳಿದುಕೊಂಡು ದೇಶದ ಅವೃದ್ಧಿಗೆ ಕೈಜೋಡಿಸಬೇಕು.

ಹುಬ್ಬಳ್ಳಿ:

ಯುವಜನತೆ ಸರ್ಕಾರ ಮತ್ತು ರಾಜಕೀಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಿ. ಯುವಕರು ರಾಜಕಾರಣದಿಂದ ದೂರವಿದ್ದಷ್ಟು ದೇಶಕ್ಕೆ ನಷ್ಟ ಎಂಬುದನ್ನು ಅರಿತುಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದ ಸಭಾಭವನದಲ್ಲಿ ಸೋಮವಾರ ಎಂಜಿಎಂ ಸಮೂಹ ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳಲ್ಲಿ ವಿವಿಧ ಕೋರ್ಸ್‌ಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಇಂದು ರಾಜಕಾರಣ ಅನಿವಾರ್ಯವಾಗಿದೆ. ಬದಲಾವಣೆ ಬಯಸುವವರು ಮೊದಲು ಬದಲಾಗಬೇಕು ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದ ಅವರು, ಕೆಲ ರಾಜಕೀಯ ಪಕ್ಷಗಳು ಹಿಂದೂ-ಮುಸ್ಲಿಂ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ವರೂರಿನಲ್ಲಿರುವ ಎಂಜಿಎಂ ಶಿಕ್ಷಣ ಸಂಸ್ಥೆಯು ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದ-ಭಾವ ತೋರದೇ ಸರ್ವ ಧರ್ಮದವರಿಗೆ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘೀಸಿದರು.

ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಮಾಹಿತಿಗಳಿಗೆ ಕಿವಿಗೊಡದೆ, ನೈಜ ಸಂಗತಿ ತಿಳಿದುಕೊಂಡು ದೇಶದ ಅವೃದ್ಧಿಗೆ ಕೈಜೋಡಿಸುವಂತೆ ಲಾಡ್‌ ಕರೆ ನೀಡಿದರು.

ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳದೆ ಅದರಿಂದ ದೂರವಿದ್ದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು. ತಮ್ಮ ಭವಿಷ್ಯಕ್ಕಾಗಿ ಹೆತ್ತವರು ತಮ್ಮ ಜೀವನವನ್ನೇ ತ್ಯಾಗ ಮಾಡಿರುತ್ತಾರೆ. ಅದನ್ನು ಅರ್ಥೈಸಿಕೊಂಡು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕು ಎಂದರು.

ಸರ್ಕಾರ ಸಹಕಾರ:

ಜನವರಿಯಲ್ಲಿ ವರೂರಿನಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಮುಂದೆ ನಿಂತು ಶ್ರಮಿಸಲಿದೆ ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಆಚಾರ್ಯ ಗುಣಧರನಂದಿ ಮಹಾರಾಜರು, ಪಾಲಕರು ನಿಮ್ಮ ಮೇಲೆ ಅಪಾರವಾದ ಆಸೆ, ನಂಬಿಕೆ ಇಟ್ಟುಕೊಂಡಿರುತ್ತಾರೆ. ಅವರಿಗೆ ನೋವು ತರದೇ ಶಿಕ್ಷಣದಲ್ಲಿ ಸಾಧನೆ ತೋರುವ ಮೂಲಕ ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಿ ಎಂದು ಹಾರೈಸಿದರು.

ಜನವರಿಯಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಅಮೆರಿಕ ಸೇರಿದಂತೆ ಅನ್ಯ ರಾಷ್ಟ್ರಗಳಿಂದ ಸಾವಿರಾರು ಪ್ರಮುಖರು, ಸರ್ವಧರ್ಮದ ಸಾವಿರಾರು ಸ್ವಾಮೀಜಿಗಳು, ರಾಜಕೀಯ ಧುರೀಣರು ಪಾಲ್ಗೊಳ್ಳುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.

ಇದೇ ವೇಳೆ ಸಚಿವ ಸಂತೋಷ ಲಾಡ್‌ಗೆ "ಶ್ರಮಯೋಗಿ " ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ವಿವಿಧ ಕೋರ್ಸ್‌ಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಎಜಿಎಂ ಸಂಸ್ಥೆಯ ಅಧ್ಯಕ್ಷ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಸದಾನಂದ ಡಂಗನವರ, ಹಿರಿಯ ಪತ್ರಕರ್ತರಾದ ಬಂಡು ಕುಲಕರ್ಣಿ, ರಾಹುಲ್‌ ಬೆಳಗಲಿ, ಪ್ರಕಾಶ ಶೇಟ್, ಗಣ್ಯರಾದ ಉದಯ ಹಜಾರೆ, ತ್ರಿಶಾಲಾ ಮಾಲಗಿತ್ತಿ, ವಿಮಲ ತಾಳಿಕೋಟಿ, ಅನಿಲ ಗುಗ್ಗರಿ, ನಿರ್ದೇಶಕ ಪ್ರೊ. ಸಂದೀಪ ಕ್ಯಾತನವರ, ಪ್ರಾಚಾರ್ಯರಾದ ಡಾ. ಆನಂದ ಕುಲಕರ್ಣಿ, ಎಸ್‌.ಎ. ಶ್ರೀನಿವಾಸ, ಪುಷ್ಪಾ ಡಂಗನವರ, ಡಾ. ಆಕಾಶ ಕೆಂಭಾವಿ ಸೇರಿದಂತೆ ಹಲವರಿದ್ದರು.