ಸಾರಾಂಶ
ನಾಗರಿಕರಿಂದ ಬೀಳ್ಕೊಡುಗೆ ಸಮಾರಂಭ । ಅಧಿಕಾರಿ ಸೇವೆಯ ಸ್ಮರಣೆ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿಈಚಿನ ದಿನಗಳಲ್ಲಿ ಯುವಜನತೆ ಗಾಂಜಾ ಡ್ರಗ್ಸ್ ಮುಂತಾದ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಇದನ್ನು ನಿಯಂತ್ರಿಸಲು ಪೋಷಕರಿಗೂ ಕಷ್ಟಸಾಧ್ಯವಾಗಿದ್ದು ಈ ಜಾಲವನ್ನು ಮಟ್ಟ ಹಾಕುವಲ್ಲಿ ನಮ್ಮ ಇಲಾಖೆಯ ಹೊಣೆಗಾರಿಕೆ ನಿರ್ಣಾಯಕವಾಗಿದೆ ಎಂದು ಇಲ್ಲಿಂದ ಬಾಗಲಕೋಟೆಗೆ ವರ್ಗಾವಣೆಗೊಂಡಿರುವ ಡಿವೈಎಸ್‍ಪಿ ಗಜಾನನ ವಾಮನ ಸುತಾರ್ ಹೇಳಿದರು.
ನಗರದ ಪಪಂಯ ರವೀಂದ್ರ ಶೆಟ್ಟಿ ಸಭಾಂಗಣದಲ್ಲಿ ಭಾನುವಾರ ಪಪಂ ವತಿಯಿಂದ ಆಯೋಜಿಸಲಾಗಿದ್ದ ನಾಗರಿಕ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಒಬ್ಬ ವ್ಯಕ್ತಿ ವ್ಯಸನಗಳಿಗೆ ಬಲಿಯಾದರೆ ಇಡೀ ಕುಟುಂಬ ನರಕ ಸದೃಶವಾಗುತ್ತದೆ. ಈ ತಾಲೂಕಿನಲ್ಲಿ ಗಾಂಜಾ ದಂಧೆ, ಹನಿಟ್ರ್ಯಾಪ್ ಮುಂತಾದ ಅಕ್ರಮಗಳಿಗೆ ಕಡಿವಾಣ ಹಾಕುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇಲ್ಲಿನ ಜನರ ಪ್ರೀತಿಯ ಸವಿನೆನಪಿನೊಂದಿಗೆ ಹೋಗುತ್ತಿದ್ದೇನೆ ಎಂದರು.ಪೋಲಿಸ್ ಇಲಾಖೆಯಲ್ಲಿರುವವರನ್ನು ಸಮಾಜ ಸೂಕ್ಷ್ಮವಾಗಿ ಗಮನಿಸುತ್ತದೆ. ನಾವು ನೇರವಾಗಿದ್ದರೆ ಭಯಪಡುವ ಅಗತ್ಯವಿಲ್ಲ. ಅತ್ಯಂತ ಸೂಕ್ಷ್ಮ, ಸುಸಂಸ್ಕೃತವಾದ ಇಲ್ಲಿನ ಪ್ರಮುಖ ರಾಜಕೀಯ ಮುಖಂಡರುಗಳು ಬೆಂಬಲ ಸಹಕಾರಿಯಾಗಿದೆ. ಸಮಾಜಮುಖಿಯಾಗಿ ನಿರ್ಭಿಡೆಯಿಂದ ಕಾರ್ಯನಿರ್ವಹಿಸಲು ನಮ್ಮ ನೇರ ನಡೆ ಮುಖ್ಯವಾಗಿದೆ ಎಂದರು.
ತಾ ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಅಪರಾಧ ಸಂಭವಿಸದಂತೆ ತಡೆಯೋದು ಬಹಳ ಮುಖ್ಯ. ಪೋಲಿಸ್ ಅಧಿಕಾರಿಗಳು ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗದೇ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದರೆ ಕಾನೂನು ವ್ಯವಸ್ಥೆ ಕ್ರಮಬದ್ಧವಾಗಿರುತ್ತದೆ. ಸಮಾಜದ ಆರೋಗ್ಯಕ್ಕೆ ಪೋಲಿಸರ ಅಧಿಕಾರ ಬಳಕೆಯಾಗಬೇಕು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ, ಇಲಾಖೆಯನ್ನು ಜನಸ್ನೇಹಿಯಾಗಿ ಶ್ರೀಸಾಮಾನ್ಯರ ನೋವಿಗೆ ಸ್ಪಂದಿಸುವ ಮೂಲಕ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡಿ ಜನರ ಮನಸ್ಸಿನಲ್ಲಿ ಉಳಿಯಬಹುದಾದ ಕೆಲವೇ ಮಂದಿ ಅಧಿಕಾರಿಗಳಲ್ಲಿ ವಾಮನ ಸುತಾರ್ ಒಬ್ಬರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಸುಶೀಲಾ ಶೆಟ್ಟಿ, ಸಂದೇಶ್ ಜವಳಿ, ಶಬನಂ, ರತ್ನಾಕರ ಶೆಟ್ಟಿ, ಜ್ಯೋತಿ ಮೋಹನ್, ಮಂಜುಳಾ ನಾಗೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಮಹಮದ್ ರಫಿ ಮಾತನಾಡಿದರು.