ಕಾಂಗ್ರೆಸ್ ಮುಖಂಡರ ವ್ಯಕ್ತಿತ್ವದ ಬೆತ್ತಲೆ ಪ್ರದರ್ಶನವಾಗಿದೆ : ಸಂಸದ ಬಿ. ವೈ ರಾಘವೇಂದ್ರ

| Published : May 18 2025, 01:07 AM IST

ಕಾಂಗ್ರೆಸ್ ಮುಖಂಡರ ವ್ಯಕ್ತಿತ್ವದ ಬೆತ್ತಲೆ ಪ್ರದರ್ಶನವಾಗಿದೆ : ಸಂಸದ ಬಿ. ವೈ ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷದ ಮುಖಂಡರು ಈ ದೇಶದ ಪ್ರಜೆ ಎನ್ನುವುದನ್ನು ಮರೆತು ಶತ್ರು ರಾಷ್ಟ್ರ ಪಾಕಿಸ್ತಾನದ ಪರವಾದ ವಕ್ತಾರರ ರೀತಿ ಹೇಳಿಕೆ ನೀಡುತ್ತಿರುವುದು ಅತ್ಯಂತ ಬಾಲಿಷವಾಗಿದ್ದು, ಇದರಿಂದ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಮುಖಂಡರ ವ್ಯಕ್ತಿತ್ವದ ಬೆತ್ತಲೆ ಪ್ರದರ್ಶನವಾಗಿದೆ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕಾಂಗ್ರೆಸ್ ಪಕ್ಷದ ಮುಖಂಡರು ಈ ದೇಶದ ಪ್ರಜೆ ಎನ್ನುವುದನ್ನು ಮರೆತು ಶತ್ರು ರಾಷ್ಟ್ರ ಪಾಕಿಸ್ತಾನದ ಪರವಾದ ವಕ್ತಾರರ ರೀತಿ ಹೇಳಿಕೆ ನೀಡುತ್ತಿರುವುದು ಅತ್ಯಂತ ಬಾಲಿಷವಾಗಿದ್ದು, ಇದರಿಂದ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಮುಖಂಡರ ವ್ಯಕ್ತಿತ್ವದ ಬೆತ್ತಲೆ ಪ್ರದರ್ಶನವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಟೀಕಿಸಿದರು.

ಶನಿವಾರ ಪಟ್ಟಣದ ಮಾಳೇರಕೇರಿಯಲ್ಲಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏ.22 ರಂದು ಸಂಜೆ ಕಾಶ್ಮೀರದ ಪೆಹಲ್ಗಾಮ್‌ನಲ್ಲಿನ ಸುಂದರ ಬೈಸರನ್ ಕಣಿವೆ ಪ್ರದೇಶದಲ್ಲಿ ಹಲವು ಪ್ರವಾಸಿಗರು ಸಂತೋಷ ಸಂಭ್ರಮದಲ್ಲಿ ಮೈಮರೆತಿದ್ದಾಗ ಪಾಕಿಸ್ತಾನಿ ಪ್ರಾಯೋಜಿತ ಉಗ್ರರ ಏಕಾಏಕಿ ಗುಂಡಿನ ದಾಳಿಗೆ 26 ಹಿಂದೂ ಅಮಾಯಕ ಮುಗ್ದರು ಬಲಿಯಾಗಿದ್ದು, ಅತ್ಯಂತ ದುರದೃಷ್ಟಕರ ಘಟನೆ ಎಂದ ಅವರು ಹಿಂದೂ ಧರ್ಮೀಯರು ಎಂಬುದನ್ನು ಖಚಿತಪಡಿಸಿಕೊಂಡು ಹತ್ಯೆಗೈದ ಭಯೋತ್ಪಾದಕರ ಕೃತ್ಯವನ್ನು ಮಾನವೀಯತೆ ಗೌರವಿಸುವ ಜಗತ್ತಿನ ಯಾರೂ ಬೆಂಬಲಿಸಲು ಸಾದ್ಯವಿಲ್ಲ ಇದರೊಂದಿಗೆ ಕೃತ್ಯದ ಬಗ್ಗೆ ಪ್ರದಾನಿ ಮೋದಿಗೆ ತಿಳಿಸಿ ಎಂದು ಬಹಿರಂಗವಾಗಿ ಹತ್ಯೆಯಾದ ಪುರುಷರ ಪತ್ನಿಯರಿಗೆ ಹೇಳುವ ಮೂಲಕ ಭಯೋತ್ಪಾದಕರ ಮನಸ್ಥಿತಿ ಅತ್ಯಂತ ಕ್ರೂರತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಹತ್ಯೆಯ ಭೀಕರ ದುರ್ಘಟನೆಗೆ ಪ್ರತೀಕಾರವಾಗಿ ಭಾರತ ಸರ್ಕಾರ ಕೈಗೊಂಡ ದಿಟ್ಟ ನಿರ್ದಾರದಿಂದ ಭಯೋತ್ಪಾದಕರ 9 ಅಡಗುತಾಣಗಳು ಚಿಂದಿಯಾಗಿ 100 ಕ್ಕೂ ಅಧಿಕ ಭಯೋತ್ಪಾದಕರ ರುಂಡ ಚೆಂಡಾಡಿದ ಸೈನ್ಯ ಇಂತಹ ಕುಕೃತ್ಯವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಿದೆ ಎಂದರು.

ಯೋಧರ ತ್ಯಾಗ ಬಲಿದಾನ ಸಮಸ್ತ ಜನತೆ ಶ್ಲಾಘಿಸುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮಾತ್ರ ಯೋಧರ ಆತ್ಮಸ್ಥೈರ್ಯ ಕುಗ್ಗಿಸುವ ರೀತಿಯಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನ ಪರವಾಗಿ ವಕ್ತಾರರ ರೀತಿ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದರು.

ಈ ಹಿಂದೆ ಪುಲ್ವಾಮ ವಾಯು ದಾಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಸಾಕ್ಷಿ ಕೇಳಿ, ಪುಲ್ವಾಮ ದಾಳಿ ನಕಲಿಯಾಗಿದ್ದು, ಕೇವಲ ಮರಗಿಡಗಳಿಗೆ ಗುಂಡು ಹಾರಿಸಲಾಗಿದೆ ಎಂದು ಉದ್ದಟತನದ ಹೇಳಿಕೆ ನೀಡಿದ್ದರು ಎಂದ ಅವರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪರೇಷನ್‌ ಸಿಂದೂರದಿಂದ ಪಾಕಿಸ್ತಾನದ ಜತೆ ಯುದ್ದ ಬೇಡ ಎಂದು ಹೇಳಿಕೆ ನೀಡಿ ಪಾಕಿಸ್ತಾನದ ಮಾದ್ಯಮದಿಂದ ಮುಕ್ತಕಂಠದಿಂದ ಹೊಗಳಿಸಿಕೊಂಡಿದ್ದಾರೆ. ದೇಶದ ಪ್ರಜೆ ಎಂಬುದನ್ನು ಮರೆತು ಶತ್ರು ರಾಷ್ಟ್ರದ ವಕ್ತಾರರ ರೀತಿ ಪದೇಪದೇ ಬಾಲಿಷ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರ ವ್ಯಕ್ತಿತ್ವದ ಬೆತ್ತಲೆ ಪ್ರದರ್ಶನವಾಗಿದೆ ಎಂದು ಆಪಾದಿಸಿದರು.

ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅಪರೇಷನ್ ಸಿಂದೂರ ಕೇವಲ ಬೂಟಾಟಿಕೆ ಎಂಬ ಹೇಳಿಕೆ ಪಕ್ಷದ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದ್ದು, ದೇಶದ ವೀರ ಸೈನಿಕರ ಸಮರ್ಪಣಾ ಮನೋಭಾವ ತ್ಯಾಗ ಬಲಿದಾನ ಪ್ರಶ್ನಿಸುವ ಪ್ರಯತ್ನವಾಗಿದೆ. ಇದರಿಂದಾಗಿ ಸೈನ್ಯಕ್ಕೆ ಅಗೌರವ ತೋರುವ ಪ್ರಯತ್ನ ತೀವ್ರ ಖಂಡನೀಯ ಹಾಗೂ ಅಕ್ಷ್ಯಮ್ಯ ಅಪರಾಧ ಎಂದ ಅವರು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಪ್ರದಾನಿ ಮೋದಿ ನಾಯಕತ್ವ ಜಗತ್ತು ಒಪ್ಪಿಕೊಂಡಿದ್ದು, ದೇಶ ಹಾಗೂ ದೇಶದ ಜನತೆಯ ರಕ್ಷಣೆಗೆ ಪ್ರದಾನಿ ಕಂಕಣಬದ್ದರಾಗಿದ್ದಾರೆ. ಸೈನ್ಯದ ಮಹಿಳಾ ಅಧಿಕಾರಿ ಜಾತಿ ಬಗ್ಗೆ ಮಾತನಾಡುವುದು ಖಂಡನೀಯ, ಭಾರತ ಮಾತೆಯ ರಕ್ಷಣೆಗೆ ವೀರ ಸೈನಿಕರು ಸಿದ್ದರಾಗಿದ್ದು, ಕಾಂಗ್ರೆಸ್ ಪಕ್ಷದ ಪಾಪದ ಫಲಕ್ಕೆ ಪಾಕಿಸ್ತಾನ ಉದ್ಭವವಾಗಿದೆ ಎಂದರು.

ಗೋಷ್ಠಿಯಲ್ಲಿ ಪುರಸಭಾಧ್ಯಕ್ಷೆ ಸುನಂದಾ ಮಂಜುನಾಥ, ಬಿಜೆಪಿ ತಾ.ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ವಸಂತಗೌಡ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ನಿರ್ದೇಶಕ ಡಿ.ಎಲ್ ಬಸವರಾಜ, ಸುಧೀರ, ಪ್ರವೀಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.