ಸಂಗೊಳ್ಳಿಯಲ್ಲಿ ರಾಯಣ್ಣನ ಜೀವನ ಚರಿತ್ರೆ ನೋಡುವ ಭಾಗ್ಯ

| Published : Jan 17 2024, 01:49 AM IST

ಸಂಗೊಳ್ಳಿಯಲ್ಲಿ ರಾಯಣ್ಣನ ಜೀವನ ಚರಿತ್ರೆ ನೋಡುವ ಭಾಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

100 ಎಕರೆಯಲ್ಲಿ ಸಂಗೊಳ್ಳಿ ರಾಯಣ್ಣ ಅಂತಾರಾಷ್ಟ್ರೀಯ ಶಾಲೆ, 10 ಎಕರೆಯಲ್ಲಿ ರಾಯಣ್ಣ ಬದುಕಿನ ರಾಕ್‌ಗಾರ್ಡನ್‌ ನಿರ್ಮಾಣ ಮಾಡಲಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಉದಯ ಕೊಳೇಕರ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಈಗ ಪ್ರವಾಸಿಗರ ಕಣ್ತುಂಬುವ ಅವಕಾಶ ಒದಗಿಬಂದಿದೆ. ರಾಯಣ್ಣನ ಹೋರಾಟದ ಬದುಕನ್ನು ಕಲೆಗಳಲ್ಲಿ ಹಿಡಿದುವ ಪ್ರಯತ್ನವಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ರಾಕ್‌ ಗಾರ್ಡನ್‌ ನಿರ್ಮಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.17, 18ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2024ದ ಅಂಗವಾಗಿ ಜ.17ರಂದು ಲೋಕಾರ್ಪಣೆ ಮಾಡಲಿದ್ದಾರೆ. ಸಂಗೊಳ್ಳಿ ರಾಯಣ್ಣನ ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ಸವಿನೆನಪಿಗಾಗಿ ಸರ್ಕಾರ ನೂರಾರು ಕೋಟಿ ರು.ವೆಚ್ಚ ಮಾಡಿ ಸಂಗೊಳ್ಳಿಯಲ್ಲಿ ಅಂತಾರಾಷ್ಟ್ರೀಯ ಸೈನಿಕ ಶಾಲೆ, ರಾಯಣ್ಣನ ಜೀವನ ಚರಿತ್ರೆ ಹೋರಾಟ ಬಿಂಬಿಸುವ ರಾಕ್‌ ಗಾರ್ಡನ್ ನಿರ್ಮಿಸಿದ್ದು, ಈಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಏನೇನಿದೆ ರಾಕ್‌ ಗಾರ್ಡನ್‌ನಲ್ಲಿ?:

ಸಂಗೊಳ್ಳಿಯಲ್ಲಿ ರಾಯಣ್ಣನ ಹೋರಾಟದ ಬದುಕಿನ ಚಿತ್ರಣವನ್ನು ಇಲ್ಲಿ ಸೆರೆಹಿಡಿದಲಾಗಿದೆ. ಸಂಗೊಳ್ಳಿ ರಾಯಣ್ಣನ ಅಂತಾರಾಷ್ಟ್ರೀಯ ಸೈನಿಕ ಶಾಲೆ 100 ಎಕರೆಯಲ್ಲಿ ವ್ಯಾಪಿಸಿದೆ. ಈ ಪೈಕಿ 10 ಎಕರೆ ಪ್ರದೇಶದಲ್ಲಿ ರಾಯಣ್ಣನ ಬದುಕಿನ ಚಿತ್ರಣ ಹಿಡಿದಿಡಲಾಗಿದೆ. ಇದಕ್ಕೆ ರಾಕ್‌ ಗಾರ್ಡನ್‌ ಎಂದು ಹೆಸರಿಡಲಾಗಿದೆ. ರಾಯಣ್ಣನ ಹುಟ್ಟಿದ ಮನೆ, ಬ್ರಿಟಿಷರ ವಿರುದ್ಧ ಹೋರಾಡಿರುವುದು, ಆತನ ಸಾಹಸ, ಶೌರ್ಯ, ಪರಾಕ್ರಮ ಸಾರಿರುವ ಚಿತ್ರಗಳು, ರಾಯಣ್ಣ ಬಾಲ್ಯದ ಮನೆ, ವೀರರಾಣಿ ಕಿತ್ತೂರು ಚನ್ನಮ್ಮಾಜಿ ರಾಜ್ಯ ದರ್ಬಾರದಲ್ಲಿ ರಾಯಣ್ಣ ಮತ್ತು ರಾಯಣ್ಣನನ್ನು ಗಲ್ಲಿಗೆ ಏರಿಸುವಾಗಿನ ಚಿತ್ರಗಳು ಸೇರಿದಂತೆ ಒಟ್ಟು 1600 ಚಿತ್ರ ಶಿಲ್ಪಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ.

ಅಂತಾರಾಷ್ಟ್ರೀಯ ಶಾಲೆಗೆ ಒಟ್ಟು ₹217 ಕೋಟಿ ವೆಚ್ಚ ಮಾಡಲಾಗಿದ್ದು, ರಾಕ್‌ ಗಾರ್ಡನ್‌ಗಾಗಿಯೇ ₹15 ಕೋಟಿಯನ್ನು ವೆಚ್ಚ ಮಾಡಲಾಗಿದೆ. ಈ ಎಲ್ಲ ಶಿಲ್ಪಗಳನ್ನು ಸಿಮೆಂಟ್‌ನ ಪಿಒಪಿಯಲ್ಲಿ ರೂಪಿಸಲಾಗಿದ್ದು, ಮುಖ್ಯ ದ್ವಾರವನ್ನು ಚಂದನಹೊಸೂರಿನ ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ.

1997ರಲ್ಲಿ ಸಂಸತ್ತಿನಲ್ಲಿ ಪ್ರಸ್ತಾವ:

ಬೈಲಹೊಂಗಲ ಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ ಅವರ ತಂದೆ ಶಿವಾನಂದ ಕೌಜಲಗಿ ಅವರ ಪ್ರಯತ್ನ ದೊಡ್ಡದು. 1997ರ ನವದೆಹಲಿಯಲ್ಲಿ 50ನೇ ಸ್ವಾತಂತ್ರ್ಯೋತ್ಸವ ಸವಿನೆನಪಿಗಾಗಿ ನಡೆದ ಲೋಕಸಭಾ ವಿಶೇಷ ಅಧಿವೇಶನದಲ್ಲಿ ಅಂದಿನ ಸಂಸದರು, ಮುಖ್ಯಸಚೇತಕರಾಗಿದ್ದ ಶಿವಾನಂದ ಕೌಜಲಗಿ ಅವರು ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣ ಮೂರ್ತಿ ಸ್ಥಾಪಿಸಿ ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದರು. ಇದರಿಂದ ಅಂದಿನ ಕೇಂದ್ರ ಸರ್ಕಾರ ಇದರ ನಿರ್ಮಾಣಕ್ಕೆ ಗಣನೆಗೆ ತೆಗೆದುಕೊಂಡಿತ್ತು.

ಶಾಸಕ ಮಹಾಂತೇಶ ಕೌಜಲಗಿ ಅವರ ಸತತ ಪ್ರಯತ್ನದಿಂದ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರ ಕೋರಿಕೆಯಂತೆ ಸೈನಿಕ ಶಾಲೆಗೆ ₹211 ಕೋಟಿ ರಾಕ್ ಗಾರ್ಡನ್‌ಗೆ ₹15 ಕೋಟಿ ರೂ ಮಂಜೂರಿಸಿದ ಹಿಂದಿನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕಾಮಗಾರಿ ಮುಗಿದಾಗಲು ರಾಯಣ್ಣನ ಸೇವೆಯ ಪುಣ್ಯದಿಂದ ಮುಖ್ಯಮಂತ್ರಿಯಾಗಿ ಉದ್ಘಾಟಣೆಗೆ ಆಗಮಿಸುತ್ತಿರುವದಕ್ಕೆ ಅನುದಾನ ಮಂಜೂರಿಸಲು ಪ್ರಯತ್ನಿಸಿದ ಅಂದಿನ ಸರಕಾರದ ವಿಧಾನ ಪರಿಷತ ಸದಸ್ಯರೇ ಮತ್ತೆ ಅಧಿಕಾರ ಪಡೆದು ಶಾಸಕರಾಗಿ ರಾಯಣ್ಣನ ಹೆಸರಿನ ಅಮೋಘ ಯೋಜನೆಗಳ ಲೋಕಾರ್ಪಣೆಯ ಜವಾಬ್ದಾರಿ ನೆರವೇರಿಸುತ್ತಿರುವದಕ್ಕೆ ಜನತೆ ರಾಯಣ್ಣನ ಸೇವೆ ಮಾಡಿದವರಿಗೆ ಯಾವಾಗಲೂ ಒಳ್ಳೆಯದಾಗುವದು ಎನ್ನುದಕ್ಕೆ ಸಾಕ್ಷೀಯಾಗಿದೆ.

ಶಾಸಕ ಮಹಾಂತೇಶ ಕೌಜಲಗಿ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ರಾಯಣ್ಣ ಉತ್ಸವಕ್ಕೆ ₹1 ಕೋಟಿ ಹಿಂದಿನ ಉತ್ಸವಗಳ ವೆಚ್ಚ ಬರಿಸಲು ₹50 ಲಕ್ಷ ಮಂಜೂರಿಸಿದ್ದರಿಂದ ಉತ್ಸವ ಹಿಂದೆಂದಿಗಿಂತಲೂ ಅದ್ಧೂರಿಗೆ ಸಿದ್ಧವಾಗಿದೆ.

ಶಾಸಕ ಮಹಾಂತೇಶ ಕೌಜಲಗಿ ಅವರ ಸಲಹೆಯಂತೆ ಸಂಗೊಳ್ಳಿ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಸೇರಿ ಉತ್ಸವಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ತಳಿರು, ತೋರಣ, ಮನೆಗಳ ಸಿಂಗಾರದಿಂದ ಹಾಗೂ ರಾಯಣ್ಣ ಗಾರ್ಡನ್ ಮತ್ತು ರಾಯಣ್ಣ ಪ್ರತಿಮೆ ವಿದ್ಯುತ್ತಿನ ದೀಪಾಲಂಕಾರ, ಹೂಮಾಲೆಗಳಿಂದ ಕಂಗೊಳಿಸುತ್ತಿದೆ.