ಕನ್ನಡಪ್ರಭವಾರ್ತೆ ತಿಪಟೂರು
ಹಿಂದಿನ ಕಾಲದಲ್ಲಿ ಇನ್ನೊಬ್ಬರ ಋಣ ಇಟ್ಟುಕೊಂಡು ಸಾಯಬಾರದು ಎಂಬ ನೈತಿಕ ಮೌಲ್ಯಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರಾದರು. ಇಂದಿನ ಕಾಲದಲ್ಲಿ ಧರ್ಮಪ್ರಜ್ಞೆಯನ್ನು ಮೀರಿಸುವ ರೀತಿಯಲ್ಲಿ ಸ್ವಾರ್ಥದ ಮನೋಭಾವ ಹೆಚ್ಚುತ್ತಿರುವುದು ವಿಷಾದಕರ ಸಂಗತಿ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ನಗರದ ಕೆ.ಆರ್.ಬಡಾವಣೆ, ಗೋವಿನಪುರ ವೃತ್ತದಲ್ಲಿ ನಿರ್ಮಿಸಲಾದ ಶಿವ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಕಲಿಯುಗದಲ್ಲಿ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಆದರೆ ಸ್ವಾರ್ಥಕ್ಕೆ ಒಳಗಾದ ಮನುಷ್ಯ ಯಾವುದಕ್ಕೂ ಹಿಂದೆ ಮುಂದೆ ನೋಡದೆ ನಡೆದುಕೊಳ್ಳುವ ಪರಿಸ್ಥಿತಿ ಸಮಾಜದಲ್ಲಿ ಹೆಚ್ಚು ಕಂಡುಬರುತ್ತಿದೆ. ಹಿಂದೆ ಆಸ್ತಿಗೆ ಒಬ್ಬ ಮಗ, ಆಸರೆಗೆ ಒಬ್ಬ ಮಗಳು ಎಂಬ ಮಾತು ಪ್ರಚಲಿತದಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಹೆಣ್ಣುಮಕ್ಕಳು ತಂದೆಯ ಆಸ್ತಿಗಾಗಿ ನ್ಯಾಯಾಲಯದ ಮೊರೆ ಹೋಗುತ್ತಿರುವುದು ಸಂಬಂಧಗಳ ಮೌಲ್ಯಗಳನ್ನು ಕುಗ್ಗಿಸುವ ಕ್ರೌರ್ಯ ಹಾಗೂ ಅಮಾನವೀಯತೆಯಾಗಿದೆ. ಇಂತಹ ಘಟನೆಗಳಿಂದ ಕುಟುಂಬ ಸಂಬಂಧಗಳಲ್ಲಿ ಬಿರುಕುಗಳು ಮೂಡಿ, ಬಂಧುಗಳು ದೂರವಾಗುತ್ತಿರುವುದು ದುಃಖಕರ ಸಂಗತಿ ಎಂದು ಕಳವಳಿಸಿದರು. ಕಾನೂನುಗಳನ್ನು ಉತ್ತಮ ಉದ್ದೇಶದಿಂದ ರೂಪಿಸಲಾಗಿದ್ದರೂ, ಅವುಗಳನ್ನು ತಪ್ಪಿಸುವ ಮಾರ್ಗಗಳನ್ನು ಹುಡುಕುವ ಮನೋಭಾವ ಕೆಲವರಲ್ಲಿ ಕಾಣಿಸುತ್ತಿರುವುದು ದುಃಖಕರ ಸಂಗತಿಯಾಗಿದೆ. ಕಾನೂನನ್ನು ಗೌರವಿಸಿ, ಅದರ ಪಾಲನೆ ಮಾಡುವ ಮನಸ್ಥಿತಿ ಸಮಾಜದಲ್ಲಿ ಬೆಳೆಯಬೇಕು. ಇನ್ನೂ ಕೆಲವರು ಕಾನೂನು ಪಂಡಿತರನ್ನೇ ಮೀರಿಸುವಂತಹ ಒಳಸುಳಿವುಗಳನ್ನು ಹುಡುಕುವ ಮೂಲಕ ಕಾನೂನನ್ನು ತಪ್ಪಿಸಲು ಯತ್ನಿಸುತ್ತಿರುವುದು ಸಮಾಜದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ನಗರದಲ್ಲಿ ಶಿವ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡ ಆಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಸಂಘದ ಅಧ್ಯಕ್ಷ ಆರ್.ಬಿ.ಆನಂದಮೂರ್ತಿ ಮಾತನಾಡಿ ಸಹಕಾರ ಸಂಘಗಳು ಸಮಾಜದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿವೆ. ಸಾಮಾನ್ಯ ಜನರು ಪರಸ್ಪರ ಸಹಕಾರದ ಮೂಲಕ ತಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ. ಸದಸ್ಯರ ಉಳಿತಾಯವನ್ನು ಉತ್ತೇಜಿಸುವುದರ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸಲು ಸಹಕಾರ ಸಂಘಗಳು ಸಹಾಯಕವಾಗುತ್ತವೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಪಿ.ಬಿ.ನಂಜುಡಪ್ಪ, ಶಿವ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಜಗದೀಶ್, ನಿರ್ದೇಶಕರಾದ ಈಶ್ವರಪ್ಪ ಬೈರನಾಯಕನಹಳ್ಳಿ, ಗಿರೀಶ್ ಮತ್ತಿಹಳ್ಳಿ, ನವೀನ್ ಕುಮಾರ್ ಹಾಲ್ಕುರಿಕೆ, ಈಶ್ವರಪ್ಪ.ಎಮ್.ಸಿ ಮತ್ತಿಹಳ್ಳಿ, ಬಸವರಾಜು ಪಟ್ರೇಹಳ್ಳಿ, ಭವ್ಯ ಸೂರಗೊಂಡನಹಳ್ಳಿ, ಲೋಲಾಕ್ಷಮ್ಮ, ಓಂಕಾರಮೂರ್ತಿ ಕರೀಕೆರೆ, ಕಾರ್ಯದರ್ಶಿ ದಿವಾಕರ್, ಸಿಬ್ಬಂದಿಗಳಾದ ಟಿ.ಆರ್.ರಮೇಶ್, ಪುಟ್ಟೇಗೌಡ, ಮಾಜಿ ಅಧ್ಯಕ್ಷರಾದ ರಾಜಶೇಖರ್, ಸೋಮಶೇಖರ್, ರೇಣುಕಮ್ಮ, ಲಿಂಗರಾಜು, ದಿನೇಶ್, ನಾಗರಾಜು, ಗಂಗಾಧರ್, ನಗರಸಭಾ ಮಾಜಿ ಸದಸ್ಯ ಪ್ರಸನ್ನಕುಮಾರ್, ಯೋಗೀಶ್, ಮನೋಹರ್, ವಿಜಯ್, ಹರೀಶ್, ನಂಜುಡಪ್ಪ, ಬಸವರಾಜು, ಚಂದ್ರಶೇಖರ್ ಸೇರಿದಂತೆ ಸಮಾಜದ ಬಾಂಧವರು ಹಾಗೂ ಸಂಘದ ಷೇರುದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.