ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ದಲಿತರ ಮೀಸಲು ಹಣವನ್ನೇ ದುರ್ಬಳಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಎನ್ನುವುದಕ್ಕೆ ನಮಗೆ ನಾಚಿಕೆಯಾಗುತ್ತಿದೆ ಎಂದು ಸಂಸದ ರಮೇಶ್ ಜಿಗಜಿಣಿಗಿ ಹೇಳಿದ್ದಾರೆ.ಶುಕ್ರವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಪ.ಜಾ. - ಪ.ಪಂ.ಗಳ ವಿವಿಧ ಯೋಜನೆಗಳಿಗೆ ಮೀಸಲಾದ 29,000 ಕೋಟಿ ರು.ಗಳನ್ನು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದೆ. ದಲಿತರಿಗೆ ಮೋಸ ಮಾಡುತಿದ್ದಾರೆ ಎಂದವರು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಇತರ ದಲಿತ ಮಂತ್ರಿಗಳು, ಶಾಸಕರು ಈ ಬಗ್ಗೆ ಮಾತನಾಡುತ್ತಿಲ್ಲ, ಸ್ವತಃ ದಲಿತರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಮೌನವಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ದಲಿತರಿಗೆ ಅನ್ಯಾಯ ಹೊಸತೇನಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಕಾಲದಿಂದ ದಲಿತರಿಗೆ ಮೋಸ ಮಾಡುತ್ತಿದೆ. ಪ್ರಿಯಾಂಕ ಗಾಂಧಿ ನಾಮಪತ್ರ ಸಲ್ಲಿಸುವಾಗಲೂ ಎಐಸಿಸಿ ಅಧ್ಯಕ್ಷ ಖರ್ಗೆ ಅವರನ್ನೇ ಕಚೇರಿಯಿಂದ ಹೊರಗೆ ಕಳಿಸಿದ್ದರು. ಇದು ಕೇವಲ ಖರ್ಗೆ ಅವರಿಗೆ ಮಾತ್ರವಲ್ಲ, ರಾಜ್ಯದ ಎಲ್ಲಾ ದಲಿತರಿಗಾದ ಮುಖಭಂಗ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ತಾನು ದಲಿತರ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ ಅವರೇ ದಲಿತರಿಗೆ ಅನ್ಯಾಯ ಮಾಡಿದ್ದಾರೆ, ದಲಿತರಿಗಾಗಿಯೇ ಮೀಸಲಿದ್ದ ಅನುದಾನಕ್ಕೆ ಕನ್ನ ಹಾಕಿದ್ದಾರೆ. ತಮ್ಮ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 2,000 ರು. ನೀಡುತ್ತಿದೆ ಎನ್ನುತ್ತಾರೆ. ಈ ರೀತಿ ಹಣ ನೀಡುವುಕ್ಕೆ ದಲಿತ ಮೀಸಲು ಅನುದಾನದಲ್ಲಿ ಅವಕಾಶವೇ ಇಲ್ಲ, ಇದು ದಲಿತರ ಹಣ ದಲಿತರಿಗಾಗಿಯೇ ಬಳಸಬೇಕು ಎಂಬ 7ಡಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಕಾಪು ಶಾಸಕ ಸುರೇಶ್ ಶೆಟ್ಟಿ, ಬಿಜೆಪಿ ಎಸ್ಸಿಎಸ್ಟಿ ಮೋರ್ಚಾ ಉಪಾಧ್ಯಕ್ಷ ಸಾಬು ದೊಡ್ಮನಿ, ಮಾಜಿ ಶಾಸಕ ಹರ್ಷವರ್ಧನ್, ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಓದೋ ಗಂಗಪ್ಪ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಪ್ರಮುಖರಾದ ದಿನಕರ ಬಾಬು, ಸುರೇಶ್ ನಾಯಕ್, ಉದಯಕುಮಾರ್ ಶೆಟ್ಟಿ ಮತ್ತಿತರರಿದ್ದರು...............
ಪಕ್ಷದೊಳಗೆ ಭಿನ್ನಮತ ಸರಿ ಮಾಡುತ್ತೇವೆ: ಜಿಗಜಿಣಗಿರಾಜ್ಯದ ಬಿಜೆಪಿಯಲ್ಲಿ ಭಿನ್ನಮತ ಕಚ್ಚಾಟದ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ, ನಾನು ಪಕ್ಷದ ಪದಾಧಿಕಾರಿಯಲ್ಲ ಪಕ್ಷದೊಳಗೆ ಏನು ನಡೆಯುತ್ತಿದೆಎಂಬ ಮಾಹಿತಿ ಇಲ್ಲ ಎಂದು ಸಂಸದ ರಮೇಶ್ ಜಿಗಜಿಣಿಗಿ ಹೇಳಿದರು.ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಒಳಜಗಳ ಯಾವ ಪಕ್ಷದಲ್ಲಿ ಇಲ್ಲ ಹೇಳಿ, ದೇವೇಗೌಡರ ಪಕ್ಷದಲ್ಲಿ -ಕಾಂಗ್ರೆಸ್ ನಲ್ಲಿ ಜಗಳ ಇಲ್ವಾ? ನಮ್ಮಲ್ಲೂ ಸ್ವಲ್ಪ ಮಟ್ಟಿಗೆ ಜಗಳ ಇದೆ, ಅದನ್ನು ನಾವೇ ಪಕ್ಷದೊಳಗೆ ಸರಿ ಮಾಡಿಕೊಳ‍್ಳುತ್ತೇವೆ ಎಂದರು.