ಚನ್ನಪಟ್ಟಣ: ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯದ ಅಭಿವೃದ್ಧಿ ದೃಷ್ಟಿಯಿಂದ ಸ್ಥಾಪಿಸಲಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಸದ್ಯ ರಾಜ್ಯಾಧ್ಯಕ್ಷರಿಲ್ಲರುವುದು ದುರಂತ ಎಂದು ಜಾನಪದ ವಿದ್ವಾಂಸ ಡಾ.ಚಕ್ಕರೆ ಶಿವಶಂಕರ್ ವಿಷಾದ ವ್ಯಕ್ತಪಡಿಸಿದರು

ಚನ್ನಪಟ್ಟಣ: ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯದ ಅಭಿವೃದ್ಧಿ ದೃಷ್ಟಿಯಿಂದ ಸ್ಥಾಪಿಸಲಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಸದ್ಯ ರಾಜ್ಯಾಧ್ಯಕ್ಷರಿಲ್ಲರುವುದು ದುರಂತ ಎಂದು ಜಾನಪದ ವಿದ್ವಾಂಸ ಡಾ.ಚಕ್ಕರೆ ಶಿವಶಂಕರ್ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಕೇಂಬ್ರಿಡ್ಜ್ ಪಿಯು ಕಾಲೇಜು ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಹಲವು ಗಣ್ಯರ ಕಳಕಳಿಯ ಫಲ ಮತ್ತು ದೂರದೃಷ್ಟಿ ಚಿಂತನೆಯಿಂದ ಕನ್ನಡ ನಾಡಿನ ಜನರನ್ನು ಒಟ್ಟುಗೂಡಿಸಿ, ನಾಡಿನ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪಿಸಲಾಯಿತು. ಆದರೆ, ಅದಕ್ಕೀಗ ರಾಜ್ಯಾಧ್ಯಕ್ಷರಿಲ್ಲದಿರುವುದು ಬೇಸರದ ಸಂಗತಿ ಎಂದು ಹೇಳಿದರು.

ನಮ್ಮನ್ನಾಳುವ ಆಡಳಿತ ಧರ್ಮ ರಾಜಕಾರಣ ಮಾಡುತ್ತಿದ್ದು, ಕನ್ನಡ ಮತ್ತು ಭಾರತ ಎತ್ತ ಸಾಗುತ್ತಿದೆ ಎಂಬುದು ಕಳವಳಕಾರಿಯಾಗಿದೆ. ಮಕ್ಕಳ ಮೇಲೆ ಭಾಷೆ ಹೇರುವ ಕೆಲಸವಾಗುತ್ತಿದೆ. ಕನ್ನಡಿಗರಿಗೆ ಕನ್ನಡ ಮಾತೃ ಭಾಷೆ ಮಕ್ಕಳಿಗೆ ನಿರತರವಾಗಿ ವೃತ್ತಿ, ಉದ್ಯೋಗ, ಅನ್ನ ನೀಡುವ ಕೆಲಸವಾಗಬೇಕು ಎಂದರು.

ಸಾಹಿತಿ ಮತ್ತೀಕೆರೆ ಬಿ.ಚಲುವರಾಜು ಮಾತನಾಡಿ, ಕನ್ನಡಿಗರ ಆಶಯದಂತೆ ಕಸಾಪ ಸಂಸ್ಥೆ ಹುಟ್ಟುಹಾಕಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಟ್ಟುಗೂಡಿಸುವ ಕೆಲಸವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿ, ಹಲವು ಸಾಹಿತ್ಯದ ಕೊಡುಗೆಗಳನ್ನು ನೀಡುವ ಮೂಲಕ ಹೆಮ್ಮರವಾಗಿ ಬೆಳೆದಿದೆ. ಹಿರಿಯರ ಆಶಯದಂತೆ ನೆಲಮೂಲ ಸಂಸ್ಕೃತಿಯಾದ ಕಲೆ, ಸಾಹಿತ್ಯ, ಜಾನಪದದಿಂದ ಕನ್ನಡಿಗರಲ್ಲಿ ಕನ್ನಡತನವನ್ನು ಮೈಗೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಕೇಂಬ್ರಿಡ್ಜ್ ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಮಧುಸೂಸನ್ ಮಾತನಾಡಿ, ಕನ್ನಡ ಭಾಷೆಯ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪ ಕನ್ನಡ ಭಾಷೆಯ ಬೆಳವಣಿಗೆಗೆ ಬಹಳ ಅರ್ಥಪೂರ್ಣವಾಗಿ ಕೆಲಸ ಮಾಡಿದೆ. ನಿರಂತರವಾಗಿ ಸಾಹಿತ್ಯದ ಮೂಲಕ ಎಲ್ಲರನ್ನು ಏಕದೃಷ್ಠಿಯಿಂದ ಒಟ್ಟುಗೂಡಿಸುವ ಕನ್ನಡಿಗರ ಜನಸಾಮಾನ್ಯರತ್ತ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ನಾಡು, ನುಡಿ, ಸಾಹಿತ್ಯ ಬೆಳವಣಿಗೆ ಎನ್ನುವುದ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ತತ್ವವಾಗಿದೆ. ಪ್ರತಿಯೊಬ್ಬ ಕನ್ನಡಿಗರು ಪರಭಾಷಾ ವ್ಯಾಮೋಹವನ್ನು ಬಿಟ್ಟು ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡಬೇಕು. ಕನ್ನಡ ನಾಡು ನುಡಿಗಾಗಿ ಕನ್ನಡಿಗರಲ್ಲಿ ಮತ್ತು ಶಾಲಾ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಭಾಷೆಯ ಬಗ್ಗೆ ಜೀವ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಚನ್ನವೀರೇಗೌಡ, ಚೌಡೇಗೌಡ, ರಂಗಸ್ವಾಮಿ, ನಾರಾಯಣಸ್ವಾಮಿ, ವೆಂಕಟೇಗೌಡ, ಡಾ.ಲೋಕಾನಂದ್, ಕದಂಬಸೇನೆಯ ಜಿಲ್ಲಾಧ್ಯಕ್ಷ ಶಿವಕುಮಾರ್, ನಿವೃತ್ತ ಮುಖ್ಯ ಶಿಕ್ಷಕರಾದ ವಂಸಂತಕುಮಾರ್, ಸಾಹಿತಿ ಕೂರಣಗೆರೆ ಕೃಷ್ಣಪ್ಪ, ಓಂಕಾರಪ್ರಿಯ ನಾಗರಾಜು, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ಉಪನ್ಯಾಸಕ ರಂಜನ್ ಕುಮಾರ್ ಇತರರಿದ್ದರು.

ಪೊಟೋ೭ಸಿಪಿಟಿ೧:

ರಾಮನಗರದ ಕೇಂಬ್ರಿಡ್ಜ್ ಕಾಲೇಜಿನಲ್ಲಿ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆಯನ್ನು ಜಾನಪದ ವಿದ್ವಾಂಸ ಡಾ.ಚಕ್ಕರೆ ಶಿವಶಂಕರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಇತರರಿದ್ದರು.