ಸಾರಾಂಶ
ಇತ್ತೀಚಿನ ದಿನಗಳಲ್ಲಿ ಯುವ ಜನತೆ ಗಾಂಜಾ ಸೇವನೆ ಸೇರಿದಂತೆ ವಿವಿಧ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ಬಗ್ಗೆ ಪೋಷಕರು, ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲದೇ ಸಮಾಜ ಕೂಡಾ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಜಿಲ್ಲಾ ಮಾದಕ ವಸ್ತುಗಳ ನಿಯಂತ್ರಣ ಅಧಿಕಾರಿ ಎಸ್.ವಿ. ವೀರೇಶ್ ಹೇಳಿದರು.
ಕನ್ನಡಪ್ರಭವಾರ್ತೆ ತೀರ್ಥಹಳ್ಳಿಇತ್ತೀಚಿನ ದಿನಗಳಲ್ಲಿ ಯುವ ಜನತೆ ಗಾಂಜಾ ಸೇವನೆ ಸೇರಿದಂತೆ ವಿವಿಧ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ಬಗ್ಗೆ ಪೋಷಕರು, ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲದೇ ಸಮಾಜ ಕೂಡಾ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಜಿಲ್ಲಾ ಮಾದಕ ವಸ್ತುಗಳ ನಿಯಂತ್ರಣ ಅಧಿಕಾರಿ ಎಸ್.ವಿ. ವೀರೇಶ್ ಹೇಳಿದರು.ತುಂಗಾ ಮಹಾವಿದ್ಯಾಲಯದ ರಜತ ಸಭಾಂಗಣದಲ್ಲಿ ಮಂಗಳವಾರ ಕಾಲೇಜಿನ ಐಕ್ಯೂಎಸಿ, ವುಮೆನ್ ಎಂಪವರ್‍ಮೆಂಟ್ ಸೆಲ್ ವತಿಯಿಂದ ಆಯೋಜಿಸಲಾಗಿದ್ದ ಮಾದಕ ವಸ್ತುಗಳು ಹಾಗೂ ಮಹಿಳಾ ದೌರ್ಜನ್ಯದ ಬಗೆಗಿನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭವಿಷ್ಯದ ಆಶಾಕಿರಣಗಳಾದ ವಿದ್ಯಾರ್ಥಿಗಳು ಋಣಾತ್ಮಕ ವಿಚಾರಗಳಿಗೆ ಆದ್ಯತೆ ನೀಡದೇ, ತಮ್ಮ ಬುದ್ದಿಮತ್ತೆಯನ್ನು ಸಕಾರಾತ್ಮಕ ಚಿಂತನೆಯೊಂದಿಗೆ ಪೋಷಕರ ನಿರೀಕ್ಷೆಯಂತೆ ಸಮಾಜದ ಆಸ್ತಿಯಾಗಿ ರೂಪುಗೊಳ್ಳಬೇಕು ಎಂದ ಅವರು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ದಪರಿಣಾಮ ಮತ್ತು ವೈದ್ಯರ ಸಲಹೆ ಇಲ್ಲದೇ ಔಷಧ ಬಳಕೆಯ ಅಪಾಯದ ಕುರಿತಂತೆ (ಸೆಲ್ಫ್ ಮೆಡಿಕೇಶನ್) ಎಳೆಎಳೆಯಾಗಿ ವಿವರಣೆ ನೀಡಿದರು. ಪರೀಕ್ಷೆ, ಶೈಕ್ಷಣಿಕ ಒತ್ತಡ, ಖುಷಿ ಮತ್ತು ಸಹವಾಸ ದೋಷಕ್ಕೆ ಒಳಗಾಗಿ ಮಾನಸಿಕ ದೌರ್ಬಲ್ಯದ ಕಾರಣಗಳಿಗಾಗಿ ವಿದ್ಯಾರ್ಥಿದೆಸೆಯಲ್ಲಿಯೇ ವಿವಿಧ ಕಾರಣಗಳಿಗೆ ಯುವಕರು ಬಲಿಯಾಗುತ್ತಿರುವುದು ಅಧಿಕವಾಗಿದೆ. ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಗಾಂಜಾ ಮುಂತಾದ ಮಾದಕ ವಸ್ತುಗಳನ್ನು ಮಾರಾಟ ಮಾಡುವ ದಂಧೆಯೂ ವ್ಯಾಪಕವಾಗಿ ನಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ ವಿಫಲರಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಪಕಾಲದ ಖುಷಿಗಾಗಿ ಯುವ ಜನತೆ ವ್ಯಸನಗಳಿಗೆ ಬಲಿಯಾಗದೇ ಸತ್ಪ್ರಜೆಗಳಾಗಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಕ್ಷೇತ್ರ ಆರೋಗ್ಯ ಸಂಪನ್ಮೂಲ ಅಧಿಕಾರಿ ಜಯಶ್ರೀ ಮಾತನಾಡಿ, ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಹೆಣ್ಣು ಮಕ್ಕಳು ಅತ್ಯಂತ ಎಚ್ಚರಿಕೆ ವಹಿಸುವ ಅಗತ್ಯವಿದೆ. ಬಹಳ ಮುಖ್ಯವಾಗಿ ಸಾಮಾಜಿಕ ಜಾಲತಾಣ ಮುಂತಾದ ಮಾಧ್ಯಮಗಳಲ್ಲಿ ಯಾರೊಂದಿಗೂ ಸಲುಗೆಯಿಂದ ವರ್ತಿಸದೇ ಸ್ವಯಂ ನಿಯಂತ್ರಣ ಹಾಕಿಕೊಳ್ಳುವ ಅಗತ್ಯವಿದೆ. ಅನಿವಾರ್ಯವಾಗಿ ಎದುರಾಗಬಹುದಾದ ಆತಂಕವನ್ನು ಧೈರ್ಯದಿಂದ ಎದುರಿಸುವ ಛಲವನ್ನೂ ಹೆಣ್ಣು ಮಕ್ಕಳು ಮೆರೆಯಬೇಕು ಎಂದೂ ಹೇಳಿದರು.ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಡಾನ್. ರಾಮಣ್ಣ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ ಇಂದಿನ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ. ಹುಟ್ಟುಹಬ್ಬ ಮುಂತಾದ ಆಚರಣೆ ಮಾಡಿಕೊಳ್ಳುವ ಮೋಜಿನಲ್ಲಿ ಕುಡಿತ ಗಾಂಜಾ ಸೇವನೆ ವ್ಯಸನದಿಂದಾಗಿ ಹಲವು ಎಳೆಯ ಜೀವಗಳು ನೀರು ಪಾಲಾದ ದುರ್ಘಟನೆಗಳೂ ನಮ್ಮ ಕಣ್ಣ ಮುಂದಿದೆ. ಕೋಟ್ಪಾ ಕಾಯ್ದೆಯಡಿ ಮಾದಕ ವಸ್ತುಗಳ ವ್ಯಾಪಾರವನ್ನು ನಿಯಂತ್ರಿಸಲು ಸಂಬಂಧಿಸಿದ ಇಲಾಖೆಯವರು ಬಿಗಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದು ಹೇಳಿದರು.ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೆಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಗಣೇಶ್ ಭಟ್, ಪ್ರಭಾಕರ ಪೂಜಾರಿ, ಪಿಯು ಪಾಂಶುಪಾಲ ಕೆ.ಎಲ್. ಪ್ರಸನ್ನ, ವುಮೆನ್ ಎಂಪವರ್‍ಮೆಂಟ್ ಸೆಲ್ ಸಂಚಾಲಕಿ ಡಾ. ವಿಮಲಾ, ಬಿ.ಎನ್. ಎನ್‍ಎಸ್‍ಎಸ್ ಘಟಕಾಧಿಕಾರಿ ಬಿ.ಸಿ. ಮೋಹನ್ ಇದ್ದರು.