ಸಾರಾಂಶ
ಚಿತ್ರದುರ್ಗ: ದೇಶದಲ್ಲಿ ಎಚ್ಐವಿ ಸೋಂಕಿಗೆ ತುತ್ತಾಗುತ್ತಿರುವವರ ಪೈಕಿ ಹೆಚ್ಚಿನವರು ಯುವಕರಾಗಿರುವುದು ಆತಂತಕಾರಿ ವಿಷಯವಾಗಿದೆ. ಯುವ ಜನತೆ ಎಚ್ಐವಿ ಕುರಿತು ಜಾಗರೂಕರಾಗಿರಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಪಿ.ರವೀಂದ್ರ ಕಿವಿ ಮಾತು ಹೇಳಿದರು.
ನಗರದ ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜಿನ ಶ್ರೀ ಗುರು ವಾಲ್ಮೀಕಿ ಮಹರ್ಷಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.1988ರಿಂದ ಪ್ರತಿ ವರ್ಷ ಡಿ.1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಸರ್ಕಾರದಿಂದ ಈ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಲು ಹಲವಾರು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಎಚ್‌ಐವಿ ಸೋಂಕು 4 ಹಂತಗಳಲ್ಲಿ ಹರಡುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆ, ತಾಯಿಯಿಂದ ಮಗುವಿಗೆ, ಸೋಂಕಿತರ ರಕ್ತದಿಂದ ಹಾಗೂ ಐ.ಡಿ.ಯೂಗಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಯುವಕರು ಮಾದಕ ವ್ಯಸನಕ್ಕೆ ತುತ್ತಾಗುವುದರ ಜೊತೆಗೆ ಎಚ್ಐವಿ ಸೊಂಕಿಗೆ ಬಲಿಯಾಗುತ್ತಿದ್ದಾರೆ. ಸೋಂಕಿಗೆ ಒಳಗಾದವರು ಯಾವುದೇ ಮುಜುಗರಕ್ಕೆ ಒಳಗಾಗದೆ ಭಯ ಭೀತಿ ಇಲ್ಲದೇ ಪರೀಕ್ಷಿಸಿಕೊಂಡು ಎಚ್ಐವಿ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಆರ್‌ಸಿಎಚ್ ಡಾ.ಅಭಿನವ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ಈ ದೇಶದ ಬೆನ್ನೆಲುಬು. ಬದುಕಿನ ಹಾಗೂ ದೇಶದ ಭವಿಷ್ಯ ಯುವಜನತೆ ಕೈಯಲ್ಲಿದೆ. ಆದರೆ ದೇಶದಲ್ಲಿ ಎಚ್ಐವಿ ಯೊಂದಿಗೆ ಬದುಕುತ್ತಿರುವ ಶೇ.40 ರಷ್ಟು ಜನ 15-29 ವಯಸ್ಸಿನ ಯುವಕರು, 15-49 ರ ವಯಸ್ಸಿನವರು ಶೇ.83 ರಷ್ಟು ಮತ್ತು ಶೇ.39 ರಷ್ಟು ಮಹಿಳೆಯರಾಗಿದ್ದು, ಜಿಲ್ಲೆಯು ಶೇ 0.33 ರಷ್ಟು ಎಚ್ಐವಿ ಸೋಂಕಿನೊoದಿಗೆ ರಾಜ್ಯದಲ್ಲಿ 22 ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಎಲ್ಲೆಡೆಯೂ ಆರೋಗ್ಯ ಎಲ್ಲರಿಗೂ ಆರೋಗ್ಯ ಎನ್ನುವ ರಾಷ್ಟ್ರೀಯ ಆರೋಗ್ಯ ಅಭಿಯಾನದ ಘೋಷಣೆಯಂತೆ ಎಚ್ಐವಿ ಸೋಂಕು ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಚರ್ಮರೋಗ ತಜ್ಞ ವೈದ್ಯ ವಿಜಯಕುಮಾರ್, ಐಸಿಟಿಸಿ ಸಿಬ್ಬಂದಿ ಪ್ರಕಾಶ.ಎಂ.ಎಚ್, ರಮೇಶ್.ಪಿ.ಡಿ, ಮರುಳ ಸಿದ್ದಗೌಡ, ಕ್ಷೇತ್ರ ಕಾರ್ಯಕರ್ತೆ ರೋಜಿ ಇಲಿಯಾಸ್, ಸಮುದಾಯ ಆರೋಗ್ಯ ಕಾರ್ಯಕರ್ತ ದೇವರಾಜು, ಸಂಪರ್ಕ ಕಾರ್ಯಕರ್ತೆ ಶಾಂತಮ್ಮ, ವಿಜ್ಞಾನ ಶಿಕ್ಷಕ ನಾಗಭೂಷಣ್.ಟಿ.ಎಸ್. ಅವರನ್ನು ಸನ್ಮಾನಿಸಲಾಯಿತು.
ಮಹಾರಾಜ ಮದಕರಿ ನಾಯಕ ಕಾಲೇಜಿನ ಎನ್‌ಎಸ್‌ಎಸ್ ಸಂಚಾಲಕಿ ಪ್ರೊ.ಎನ್.ಟಿ.ಗಂಗಮ್ಮ, ಪ್ರೊ.ಎನ್.ಶ್ರೀನಿವಾಸ್, ಡಾ.ಧನಂಜಯ್, ಜಿಲ್ಲಾಸ್ಪತ್ರೆ ಎಆರ್‌ಟಿ ಕೇಂದ್ರ ವೈದ್ಯಾಧಿಕಾರಿ ಡಾ.ರೂಪಶ್ರೀ ಮುಂತಾದವರು ಉಪಸ್ಥಿತರಿದ್ದರು.