ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ನೂರು ದೇವಾಲಯ ಕಟ್ಟೋದಕ್ಕಿಂತ ಒಂದು ಶಾಲೆ ಕಟ್ಟೋದು ಸೂಕ್ತ, ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂದರೆ ಅವಮಾನ, ನಿಂದನೆಗಳನ್ನು ಮೆಟ್ಟಿ ನಿಂತಾಗ ಸಾಧಕನಾಗಲು ಸಾಧ್ಯ ಎಂದು ಶಿರಶ್ಯಾಡ ಹಿರೇಮಠದ ಅಭಿನವ ಮುರಘೇಂದ್ರ ಶಿವಾಚಾರ್ಯರು ಹೇಳಿದರು.ತಾಲ್ಲೂಕಿನ ಹಿರೇರೂಗಿ ಗ್ರಾಮದ ಸಿದ್ದೇಶ್ವರ ಹಿರಿಯ ಪ್ರಾ ಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಬಿಳ್ಕೋಡುವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಭವಿಷ್ಯ ನಿರ್ಮಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ನಗರಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಭಾವನೆಯನ್ನು ಪಾಲಕರ ಮನಸ್ಸಿಂದ ತೆಗೆದು ಹಾಕುವ ಕಾರ್ಯ ನಡೆಯಲಿ. ಉತ್ತಮ ಶಿಕ್ಷಣ ನಿಮ್ಮನ್ನು ಇತರರಿಗಿಂತ ಬಲಶಾಲಿಯಾಗಿಸುತ್ತದೆ ಎಂದರು.
ಶಿಕ್ಷಕ ದಶರಥ ಕೋರಿ ಉಪನ್ಯಾಸ ನೀಡಿ, ಇಂದಿನ ಮಕ್ಕಳಿಗೆ ಸ್ವಾವಲಂಬಿಯಾಗಿ ಬದುಕಲು ಹಾಗೂ ಜೀವನದಲ್ಲಿನ ಕಠಿಣ ಸವಾಲುಗಳನ್ನು ಎದುರಿಸಲು ಬೇಕಾದ ಕೌಶಲ್ಯಗಳನ್ನು ಕಲಿಸಬೇಕು. ಪ್ರಸ್ತುತ ದೇಶದ ಜನಸಂಖ್ಯೆ 140 ಕೋಟಿ ಮೀರಿದೆ. ಈ ನಿಟ್ಟಿನಲ್ಲಿ ಭಾರತದ ವರ್ತಮಾನದ ಜನಸಂಖ್ಯೆ ಸ್ಪೋಟದ ಒಂದು ಪರಿಣಾಮ ಇಂದು ಮಕ್ಕಳ ಮೇಲಾಗಿದೆ. ಜನಸಂಖ್ಯೆಯ ವಿಪರೀತ ಹೆಚ್ಚಳದಿಂದ ಮಕ್ಕಳ ಶ್ರೇಯೋಭಿವೃದ್ಧಿಗೆ ಇದು ಕಂಟಕವಾಗಿ ಎಂದು ಹೇಳಿದರು.ಸರ್ಕಾರಿ ಉದ್ಯೋಗಕ್ಕಾಗಿ ರಾಜ್ಯದಲ್ಲಿ ಪದವಿಧರರು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಈಗ ಕಲಿತ,ಕಲಿಯಿತ್ತಿರುವ ಎಲ್ಲಾ ಮಕ್ಕಳಿಗೆ ಸರ್ಕಾರಿ ಸೇವೆ ಮಾಡುವ ಅವಕಾಶ ಸಿಗುವುದು ಬಹು ಕಷ್ಟದ ಮತ್ತು ಜಟಿಲವಾದ ಪ್ರಶ್ನೆ. ಇಂದಿನ ಸ್ಪರ್ಧಾತ್ಮಕ ಸಂಘರ್ಷದ ದಾರಿಯಲ್ಲಿ ಸರ್ಕಾರಿ ನೌಕರಿಯ ಸೌಲಭ್ಯ ಸಿಗುವುದು ಅಪರೂಪ. ಅತ್ಯುನ್ನತ ಶ್ರೇಣಿಯಲ್ಲಿ ಮತ್ತು ರಾಜ್ಯ ಮಟ್ಟದ ಪರೀಕ್ಷಾ ಸ್ಪರ್ಧೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ದೊರಕುವುದು. ವಿದ್ಯಾರ್ಥಿಗಳ ಭದ್ರ ಭವಿಷ್ಯದ ಜೀವನಕ್ಕೆ ಮಾರಕವಾಗಿರುವ ಅಂಶಗಳನ್ನು ತಕ್ಕಮಟ್ಟಿಗೆ ತಗ್ಗಿಸಬೇಕಾದರೆ ಮಕ್ಕಳಿಗೆ ಸವಾಲುಗಳನ್ನು ಎದುರಿಸುವ ಕೌಶಲ್ಯಗಳನ್ನು ಕಲಿಸಬೇಕು ಎಂದು ಹೇಳಿದರು.ಬಿಜೆಪಿ ಮುಖಂಡ ಅನಿಲ ಜಮಾದಾರ, ರಮೇಶ್ ಬೆಲ್ಲದ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ರೂಗಿ, ಕಾಂಗ್ರೆಸ್ ಮುಖಂಡ ಧರ್ಮರಾಜ ವಾಲಿಕಾರ, ರೇವಣ್ಣಸಿದ್ದ ಪೂಜಾರಿ, ಪೈಗಂಬರ ಅಂಗಡಿ, ಸಂಗಮೇಶ ಬಿರಾದಾರ, ಮಾಳಪ್ಪ ನಿಂಬಾಳ, ಮೋದಿನಸಾಬ್ ಬಾಗವಾನ, ಜಟ್ಟಪ್ಪ ಸಾಲೋಟಗಿ, ಜಟ್ಟಪ್ಪ ಮರಡಿ, ಜಟ್ಟಪ್ಪ ಮೂಲಿಮನಿ, ಭೀಮರಾಯ ಜೇವೂರ, ಭೀಮರಾಯ ಉಪ್ಪಾರ, ಲಕ್ಷ್ಮಣ ಡಂಗಿ, ಬಾಬುರಾಯ್ ಮಾವಿನಹಳ್ಳಿ, ಗುರಪ್ಪ ಅಗಸರ, ಇಲಾಯಿ ಬಾಗವಾನ, ನಿಂಗಪ್ಪ ತಳವಾರ, ಸಂಜೀವ ರೂಗಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಶಂಕರಲಿಂಗ ಜಮಾದಾರ ಸ್ವಾಗತಿಸಿದರು, ಶಿಕ್ಷಕ ಆನಂದ ವಾಲಿಕಾರ ನಿರೂಪಿಸಿ, ವಂದಿಸಿದರು.