ಕನ್ನಡಪ್ರಭ ವಾರ್ತೆ ಬೆಳಗಾವಿ
ಬಿಜೆಪಿಯಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ಸದನದಲ್ಲಿ ಬಹುಮತ ಇಲ್ಲದಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸ್ವಯಂ ರಾಜೀನಾಮೆ ನೀಡುವುದು ಸೂಕ್ತ. ಅವರು ಹಿರಿಯ ನಾಯಕರಾಗಿರುವುದರಿಂದ ಗೌರವಯುತವಾಗಿ ಸ್ಥಾನ ಬಿಟ್ಟುಕೊಟ್ಟರೆ ಇನ್ನಷ್ಟು ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಭಾಪತಿ ಸ್ಥಾನಕ್ಕೆ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಬಸವರಾಜ್ ಹೊರಟ್ಟಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಸಭಾಪತಿ ಸ್ಥಾನಕ್ಕೆ ಯಾರೂ ಅವಿಶ್ವಾಸ ನಿರ್ಣಯ ಮಂಡಿಸಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಈ ಹಿಂದೆ 2015ರಲ್ಲಿ ಡಿ.ಎಚ್.ಶಂಕರಮೂರ್ತಿ ಅವರ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಆದ್ದರಿಂದ ಇಂತಹ ಘಟನೆ ಇದೇ ಮೊದಲಲ್ಲ ಎಂದರು.ನೈತಿಕತೆಯ ವಿಚಾರ ಬಂದಾಗ ಸದನದಲ್ಲಿ ಬಹುಮತ ಇಲ್ಲದ ಪಕ್ಷ ಅಧಿಕಾರದಲ್ಲಿ ಮುಂದುವರಿಯಬಾರದು. ಸಂವಿಧಾನದ ಆಶಯದ ಬಗ್ಗೆ ಮಾತನಾಡುವ ಬಿಜೆಪಿ ಈ ವಿಷಯದಲ್ಲೂ ಅದನ್ನೇ ಪಾಲಿಸಬೇಕು. ನಮಗೆ ಸದನದಲ್ಲಿ ಬಹುಮತ ಇರುವುದರಿಂದ ಸಭಾಪತಿ ಹಾಗೂ ಉಪಸಭಾಪತಿ ಎರಡೂ ಸ್ಥಾನಗಳು ನಮ್ಮ ಪಕ್ಷಕ್ಕೆ ದೊರೆಯುತ್ತವೆ ಎಂಬ ವಿಶ್ವಾಸವಿದೆ.
ಬಿಜೆಪಿಯಿಂದ ಆಯ್ಕೆಯಾಗಿರುವವರನ್ನು ನಾವು ಒಪ್ಪಲು ಸಾಧ್ಯವಿಲ್ಲ. ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದರೆ ಪಕ್ಷದ ಸೂಚನೆಯಂತೆ ಮುಂದುವರಿಯುತ್ತೇವೆ ಎಂದರು.ನಾನು ಕೂಡ ಸಭಾಪತಿ ಅಥವಾ ಉಪಸಭಾಪತಿ ಹುದ್ದೆ ನೀಡುವಂತೆ ಕೋರಿದ್ದೇನೆ. ಸಚಿವ ಸಂಪುಟದಲ್ಲಿ ಅವಕಾಶ ಸಿಗದಿದ್ದರೆ ಈ ಎರಡು ಹುದ್ದೆಗಳ ಪೈಕಿ ಯಾವುದಾದರೂ ಒಂದನ್ನು ನೀಡುವಂತೆ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಅವರ ಗಮನಕ್ಕೂ ಈಗಾಗಲೇ ತಂದಿದ್ದೇನೆ.- ನಾಗರಾಜ್ ಯಾದವ್,
ವಿಪ ಸದಸ್ಯರು.