ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪ್ರಾರಂಭದಲ್ಲಿಯೇ ವೈದ್ಯರ ಬಳಿ ಹೋಗಿ ಪರೀಕ್ಷೆಗೆ ಒಳಪಡಿಸಿಕೊಂಡು ಅವರ ಸಲಹೆ, ಸೂಚನೆಯನ್ನು ಪಾಲಿಸುವುದರಿಂದ ಹಿಮೋಫಿಲಿಯಾ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ತಿಳಿಸಿದರು.ನಗರದ ಬಿ.ಎಂ. ರಸ್ತೆ, ಗುರು ಚಿತ್ರಮಂದಿರದ ಹಿಂಭಾಗದ ಇರುವ ಭಾರತೀಯ ಶಿಶು ವೈದ್ಯಕೀಯ ಸಂಘದ ಆವರಣದಲ್ಲಿ ತವರು ಚಾರಿಟಬಲ್ ಟ್ರಸ್ಟ್ ಮತ್ತು ಇಂಟಾಸ್ ಫೌಂಡೇಶನ್, ಹಿಮೋಫಿಲಿಯಾ ಸೊಸೈಟಿ, ಭಾರತೀಯ ಶಿಶು ವೈದ್ಯಕೀಯ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹಿಮೋಫಿಲಿಯಾ ದಿನಾಚರಣೆ ಹಾಗೂ ಉಚಿತ ಫ್ಯಾಕ್ಟರ್ ವಿತರಣೆ ಮತ್ತು ರಕ್ತ ಪರೀಕ್ಷೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿಮೋಫಿಲಿಯಾ ರೋಗವು ಸಾಕಷ್ಟು ಹರಡುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು. ಪ್ರತಿಯೊಬ್ಬರು ಕೂಡ ಇಂತಹ ರೋಗದ ಬಗ್ಗೆ ಸಾಕಷ್ಟು ಜಾಗರೂಕತೆ ವಹಿಸಬೇಕು ಮತ್ತು ತಪ್ಪದೇ ತಜ್ಞ ವೈದ್ಯರನ್ನ ಭೇಟಿ ಮಾಡಿ ಪರೀಕ್ಷೆ ನಡೆಸುವ ಮೂಲಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಅಲ್ಲದೇ ಇಂತಹ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಸಾಕಷ್ಟು ಅರಿವು ಮೂಡಿಸಬೇಕು. ಡಾ. ಪಾಲಾಕ್ಷ ಅವರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷರೊಂದಿಗೆ ಒಂದು ಉತ್ತಮವಾದಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಮಕ್ಕಳ ತಜ್ಞ ಹಾಗೂ ಭಾರತೀಯ ಶಿಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಬಿ. ದಿನೇಶ್ ಮಾತನಾಡಿ, ವಿಶ್ವ ಹಿಮೋಫೀಲಿಯ ದಿನಾಚರಣೆ ಅಂಗವಾಗಿ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಹಿಮೋಫಿಲಿಯಾ ಒಂದು ಆನುವಂಶಿಕ ರಕ್ತಸ್ರಾವದ ಕಾಯಿಲೆ, ಅಂದರೆ ಇದು ಜನ್ಮ ಪೋಷಕರಿಂದ ಅವರ ಮಕ್ಕಳಿಗೆ ಹರಡಬಹುದು. ನಿಮಗೆ ಹಿಮೋಫಿಲಿಯಾ ಇದ್ದರೆ, ನಿಮ್ಮ ರಕ್ತ ಸರಿಯಾಗಿ ಹೆಪ್ಪುಗಟ್ಟುವುದಿಲ್ಲ. ಇದು ರಕ್ತಸ್ರಾವಕ್ಕೆ ಕಾರಣವಾಗಬಹುದು, ಇದನ್ನು ನಿಯಂತ್ರಿಸಲು ಕಷ್ಟವಾಗುತ್ತದೆ ಎಂದರು.ಇದೇ ವೇಳೆ ಇಂಟಾಸ್ ಫೌಂಡೇಶನ್ ನಾರಾಯಣಮೂರ್ತಿ, ಆಕಾಂಕ್ಷಾ, ಹಿಮೋಫಿಲಿಯಾ ಸೊಸೈಟಿಯ ಅಧ್ಯಕ್ಷ ಕೆ ಹರೀಶ್ ಕಾರ್ಯದರ್ಶಿ ಡಾ. ಪಾಲಾಕ್ಷ, ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಕೌಶಿಕ್, ವಿದ್ಯಾ, ಕಲ್ಪನಾ, ರೇಣುಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.