ಡಿಕೆಶಿ ಸಾಹೇಬ್ರು ಸಿಎಂ ಆಗೋದು ನಿಶ್ಚಿತ: ಚನ್ನಗಿರಿ ಶಾಸಕ

| Published : Jan 13 2025, 12:46 AM IST

ಡಿಕೆಶಿ ಸಾಹೇಬ್ರು ಸಿಎಂ ಆಗೋದು ನಿಶ್ಚಿತ: ಚನ್ನಗಿರಿ ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಾಹೇಬರು ಸಾಕಷ್ಟು ಕಷ್ಟಪಟ್ಟಿದ್ದು, ಅದಕ್ಕೆ ಪ್ರತಿಫಲ ಇದ್ದೇ ಇದೆ. ಇದೇ ಅವಧಿಯಲ್ಲೇ ನಮ್ಮ ಸಾಹೇಬರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಡಿಕೆಶಿ ಆಪ್ತ ಬಳಗದ ಚನ್ನಗಿರಿ ಕ್ಷೇತ್ರ ಶಾಸಕ ಶಿವಗಂಗಾ ವಿ. ಬಸವರಾಜ ದಾವಣಗೆರೆಯಲ್ಲಿ ಮತ್ತೆ ಬ್ಯಾಟ್ ಬೀಸಿದ್ದಾರೆ.

- ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರ್ತೀವಂದ್ರೆ ಬೇಡ ಅನ್ನೋಕಾಗುತ್ತಾ?: ದಾವಣಗೆರೆಯಲ್ಲಿ ಬಸವರಾಜ ಶಿವಗಂಗಾ ಹೇಳಿಕೆ - - - - ಪವರ್ ಶೇರಿಂಗ್ ಯಾವುದೂ ಇಲ್ಲ, ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂಬ ಡಿಕೆಶಿ ಹೇಳಿಕೆ ಸರಿಯಾಗಿದೆ

- ಕೆಲವರು ಮಾತಾಡಿ, ಮಾಡಿಟ್ಟ ಊಟ ಮಾಡ್ತಾರೆ, ಆದರೆ, ಡಿ.ಕೆ.ಶಿವಕುಮಾರ್‌ ಕೆಲಸ ಮಾಡ್ತಾರೆ - ಸಿಎಂ ಕುರ್ಚಿ ಖಾಲಿ ಆಗುತ್ತಿದ್ದಂತೆಯೇ ನಾವು ಅದನ್ನು ಕ್ಲೇಮ್ ಮಾಡ್ತೀವಿ

- ಒಟ್ಟು 11 ಜನ ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರುವವರಿದ್ದಾರೆ

- ಉಪ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳ ಗೆಲ್ಲಿಸಿಕೊಂಡು ಬಂದವರು ಡಿಕೆಶಿ, ಹೈಕಮಾಂಡ್‌ ಗಮನಿಸುತ್ತದೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಾಹೇಬರು ಸಾಕಷ್ಟು ಕಷ್ಟಪಟ್ಟಿದ್ದು, ಅದಕ್ಕೆ ಪ್ರತಿಫಲ ಇದ್ದೇ ಇದೆ. ಇದೇ ಅವಧಿಯಲ್ಲೇ ನಮ್ಮ ಸಾಹೇಬರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಡಿಕೆಶಿ ಆಪ್ತ ಬಳಗದ ಚನ್ನಗಿರಿ ಕ್ಷೇತ್ರ ಶಾಸಕ ಶಿವಗಂಗಾ ವಿ. ಬಸವರಾಜ ಮತ್ತೆ ಬ್ಯಾಟ್ ಬೀಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಶನಿವಾರ ಡಿ.ಕೆ.ಶಿವಕುಮಾರ ಸಾಹೇಬರು ಒಳ್ಳೆಯ ಅರ್ಥದಲ್ಲೇ ಮಾತನಾಡಿದ್ದಾರೆ ಎಂದರು.

ಡಿ.ಕೆ.ಶಿವಕುಮಾರ ಸಾಹೇಬರ ಮಾತು ನೋಡುವವರ ದೃಷ್ಟಿಕೋನದ ಮೇಲೆ ಹೋಗುತ್ತದೆ. ಕೆಟ್ಟದಾಗಿ ನೋಡಿದರೆ ಕೆಟ್ಟದಾಗಿ ಕಾಣುತ್ತದೆ, ತಪ್ಪಾಗಿ ಅರ್ಥೈಸಿಕೊಂಡರೆ ತಪ್ಪಾಗಿ ಅದು ಕೇಳಿಸುತ್ತದೆ. ಹೋರಾಟವನ್ನು ಮಾಡಿ, ಕಷ್ಟಪಟ್ಟು ಎಲ್ಲ ಶಾಸಕರನ್ನು ಗೆಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಶಾಸಕರಿಗೆ ಆರ್ಡರ್ ಮಾಡಿ ಕೇಳಬೇಕು ಎಂದು ಅವರು ತಿಳಿಸಿದರು.

ನಾವೆಲ್ಲಾ ಒಗ್ಗಟ್ಟಾಗಿಯೇ ಇದ್ದೇವೆ. ಏನಾದರೂ ತೀರ್ಮಾನ ಕೈಗೊಳ್ಳಬೇಕಾದರೆ ಅದಕ್ಕೆ ಹೈಕಮಾಂಡ್ ಇದೆ. ಅಧಿಕಾರ ಹಂಚಿಕೆ, ಪವರ್ ಶೇರಿಂಗ್ ಯಾವುದೂ ಇಲ್ಲ. ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂಬುದಾಗಿ ಡಿ.ಕೆ.ಶಿವಕುಮಾರ ಹೇಳಿರುವುದು ಸರಿಯಾಗಿದೆ. ಡಿ.ಕೆ.ಶಿ.ಯವರ ಪರವಾಗಿ ನಾವೆಲ್ಲರೂ ಇದ್ದೇವೆ ಎಂದು ಡಿಸಿಎಂ ಹೇಳಿಕೆಯನ್ನು ಶಾಸಕರು ಸಮರ್ಥಿಸಿಕೊಂಡರು.

ಸಚಿವ ರಾಜಣ್ಣನವರು ಹೇಳಿದ್ದು ಸರಿ ಇದೆ. ಹಿಂದೆಯೂ ನಾನು ಹೇಳಿದ್ದೇನೆ, ಈಗಲೂ ಹೇಳುತ್ತೇನೆ. ಡಿ.ಕೆ.ಶಿವಕುಮಾರ ಸಾಹೇಬರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಐದು ವರ್ಷದ ಕಾಲ ಡಿಕೆಶಿ ಮುಖ್ಯಮಂತ್ರಿ ಆಗಬೇಕಿತ್ತು. ಕೆಲ ಬೆಳವಣಿಗೆಗಳಿಂದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ. ಸಿಎಂ ಕುರ್ಚಿ ಖಾಲಿ ಆಗುತ್ತಿದ್ದಂತೆಯೇ ನಾವು ಅದಕ್ಕೆ ಕ್ಲೇಮ್ ಮಾಡುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷದ ಶಾಸಕರು ತಾವಾಗಿಯೇ ಕಾಂಗ್ರೆಸ್‌ಗೆ ಬರುತ್ತೇವೆಂದರೆ ಸೇರಿಸಿಕೊಳ್ಳದೇ ಇರಲು ಆಗುತ್ತದೆಯಾ? ಒಟ್ಟು 11 ಜನ ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರುವವರಿದ್ದಾರೆ. ಡಿ.ಕೆ.ಶಿ. ಸಾಹೇಬರು ಪಕ್ಷದ ಸಂಘಟನೆಗೆ ಎಲ್ಲರನ್ನೂ ಒಟ್ಟುಗೂಡಿಸುತ್ತಿದ್ದಾರೆ. ಉಳಿದವರು ಯಾರನ್ನು ಕೂಡ ಕರೆ ತರಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಅಧಿಕಾರ ಬೇಕಷ್ಟೇ. ಈ ರೀತಿ ಅನ್ಯ ಪಕ್ಷದವರನ್ನು ಕರೆ ತರಲಿ, ಆಪರೇಷನ್ ಮಾಡಲಿ ನೋಡೋಣ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಶಾಸಕ ಬಸವರಾಜ ಸವಾಲು ಹಾಕಿದರು.

ಕೆಲವರು ಮಾತನಾಡುತ್ತಾರಷ್ಟೇ. ಆದರೆ, ಡಿ.ಕೆ.ಶಿವಕುಮಾರ ಸಾಹೇಬರು ಕೆಲಸವನ್ನು ಮಾಡುತ್ತಾರೆ. ಕೆಲವರು ತಮಗೆ ಮಾಡಿಟ್ಟ ಊಟವನ್ನು ಮಾಡುವುದಕ್ಕೆ ಮಾತ್ರ ಬರುತ್ತಾರೆ. ಕಷ್ಟಪಟ್ಟವರಿಗೆ ಒಳ್ಳೆಯ ದಿನಗಳು ಇದ್ದೇ ಇರುತ್ತವೆ. ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರವನ್ನೂ ಗೆಲ್ಲಿಸಿಕೊಂಡು ಬಂದವರು ಕೆಪಿಸಿಸಿ ರಾಜ್ಯಾಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ ಸಾಹೇಬರು. ಅದನ್ನೆಲ್ಲಾ ಕಾಂಗ್ರೆಸ್ ಹೈಕಮಾಂಡ್ ಸಹ ಗಮನಿಸುತ್ತಿದೆ ಎಂದು ಶಿವಗಂಗಾ ಬಸವರಾಜ ಹೇಳಿದರು.

- - - -12ಕೆಡಿವಿಜಿ1:

ಶಿವಗಂಗಾ ಬಸವರಾಜ