ಸಾರಾಂಶ
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಾಮಾಜಿಕ ಸೇವೆ ಮಾಡುವವರಿಗೆ ಇದೊಂದು ಪ್ರೇರಣೆ. ಮತ್ತಷ್ಟು ಈ ಕ್ಷೇತ್ರದಲ್ಲಿ ಸೇವೆಗೈಯಲು ಸಹಕಾರಿಯಾಗುತ್ತದೆ ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು. ಸಮಾಜ ಸೇವಕ, ಸಾಹಿತ್ಯ ಪೋಷಕ ವೈ. ಎಸ್. ರಮೇಶ್ ಅವರಿಗೆ ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ರಮೇಶ್ ಅವರ ಸಾಧನೆ ಕೇವಲ ಹಾಸನಕ್ಕಷ್ಟೇ ಸೀಮಿತವಾಗಿಲ್ಲ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಾಮಾಜಿಕ ಸೇವೆ ಮಾಡುವವರಿಗೆ ಇದೊಂದು ಪ್ರೇರಣೆ. ಮತ್ತಷ್ಟು ಈ ಕ್ಷೇತ್ರದಲ್ಲಿ ಸೇವೆಗೈಯಲು ಸಹಕಾರಿಯಾಗುತ್ತದೆ ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು.ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು ಕೇಂದ್ರ ಸಮಿತಿಯು ಹಾಸನ ನಗರದ ಪುಷ್ಪಗಿರಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಸಾಹಿತ್ಯ ಪೋಷಕ ವೈ. ಎಸ್. ರಮೇಶ್ ಅವರಿಗೆ ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ರಮೇಶ್ ಅವರ ಸಾಧನೆ ಕೇವಲ ಹಾಸನಕ್ಕಷ್ಟೇ ಸೀಮಿತವಾಗಿಲ್ಲ. ರಾಜ್ಯಮಟ್ಟದಲ್ಲಿಯೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಮತ್ತಷ್ಟು ಮಗದಷ್ಟೂ ಸಮಾಜ ಸೇವೆ ಮಾಡುವ ಶಕ್ತಿ ದೊರೆಯಲಿ ಎಂದು ಹಾರೈಸಿದರು.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ವೈ. ಎಸ್. ರಮೇಶ್ ನಮ್ಮ ವೇದಿಕೆ ಹಾಗೂ ಮಾಣಿಕ್ಯ ಪ್ರಕಾಶನ ಪ್ರಾರಂಭವಾದಾಗಿನಿಂದಲೂ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಸನದಲ್ಲಿ ನಡೆಯುವ ಬಹುತೇಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ರಮೇಶ್ ಅವರ ಪ್ರೇರಣೆಯಿರುತ್ತದೆ. ನಮ್ಮ ವೇದಿಕೆ ಹಿರಿಯ ಸಾಹಿತಿ ಡಾ. ರಂಜಾನ್ ದರ್ಗಾ ಸರ್ವಾಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲೆಯ ಯಡಿಯೂರಿನಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಯುತರನ್ನು ಆಹ್ವಾನ ಮಾಡಲಾಗಿತ್ತು. ಅನಾರೋಗ್ಯ ನಿಮಿತ್ತ ಗೈರಾದ್ದರಿಂದ ಇಂದು ಪುಷ್ಪಗಿರಿ ಶ್ರೀಗಳ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಮೇಶ್ ಅವರ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕಾಳಜಿ ಸ್ತುತ್ಯಾರ್ಹವಾದುದು. ಸ್ವಾರ್ಥತೆಯ ಬೆನ್ನತ್ತಿ ಹೊರಟಿರುವ ಇಂದಿನ ಜಾಯಮಾನದಲ್ಲಿ ನಿಸ್ವಾರ್ಥ ಸಾಮಾಜಿಕ ಸೇವೆ ಎಲ್ಲರಿಗೂ ಸಿದ್ಧಿಸುವುದಿಲ್ಲ, ಆದರೆ ಇದನ್ನೆಲ್ಲಾ ಮೀರಿದ ವ್ಯಕ್ತಿತ್ವ ವೈ.ಎಸ್. ರಮೇಶ್ ಅವರದು ಎಂದರು.ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ, ರಾಜ್ಯ ಕೋಶಾಧ್ಯಕ್ಷ ಎಚ್. ಎಸ್. ಬಸವರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ಸಮಾಜ ಸೇವಕ ಕೆ. ಆರ್. ಪ್ರಕಾಶ್, ಸಾಹಿತಿಗಳಾದ ರೇಖಾ ಪ್ರಕಾಶ್, ಪದ್ಮಾವತಿ ವೆಂಕಟೇಶ್, ಕುಮಾರಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.