ಸಾರಾಂಶ
ಮಾಗಡಿ: ರೈತರು ತಮ್ಮ ಸಮಸ್ಯೆಗಳನ್ನು ಹೊತ್ತುಕೊಂಡು ನೂರಾರು ರುಪಾಯಿ ಖರ್ಚು ಮಾಡಿಕೊಂಡು ಬೆಂಗಳೂರಿಗೆ ಹೋಗಿ ಶಾಸಕ ಬಾಲಕೃಷ್ಣ ಅವರನ್ನು ಕಾಣುವ ಬದಲು ಮಾಗಡಿ ಮನೆಯಲ್ಲಿ ಎರಡು ದಿನ ಸಿಗುವಂತೆ ದಿನಚರಿ ರೂಪಿಸಿಕೊಳ್ಳಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಹೇಳಿದರು.
ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ತಾಲೂಕು ರೈತ ಸಂಘ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ನಿಮ್ಮ ಮನೆಗೆ ಬರುವುದಕ್ಕೆ ಹಾಗೂ ಊಟ ತಿಂಡಿಗೆ ಹೋಟೆಲ್‌ಗಳಿಗೆ ಊಟ-ತಿಂಡಿಗೆ ಹಣ ಕೊಡುವಷ್ಟು ಶಕ್ತಿ ರೈತರಿಗಿಲ್ಲ. ಮುಂದಿನ ಲೋಕಸಭಾ ಚುನಾವಣೆಯೊಳಗೆ ಹೇಮಾವತಿ ನೀರು ತಾಲೂಕಿಗೆ ಹರಿಸಬೇಕು ಜೊತೆಗೆ ಪಟ್ಟಣದಲ್ಲಿ ಶಾಸಕರು ರೈತ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.ಜಡೇದೇವರ ಮಠದ ಪೀಠಾಧ್ಯಕ್ಷ ಶ್ರೀ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ, ನಾಡಿಗೆ ಅನ್ನ ಕೊಡುವ ರೈತರನ್ನು ಗೌರವಿಸಬೇಕು. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಕ್ಕಾಗ ಮಾತ್ರ ರೈತರ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಮಾಗಡಿಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವತ್ತ ಜನಪತ್ರಿನಿಧಿಗಳು ಮುಂದಾಗಬೇಕು ಎಂದರು.
ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಕೆಂಪೇಗೌಡರ ನಾಡಲ್ಲಿ ರೈತರಾಗಿ ಹುಟ್ಟಿರುವುದೇ ನಮ್ಮ ಪುಣ್ಯ. ಕೆಂಪೇಗೌಡರು ದೂರದೃಷ್ಟಿಯ ಕಾಳಜಿಯಿಂದ ಕೆರೆ, ಕಟ್ಟೆ, ಗುಡಿಗೋಪುರವನ್ನು ಕಟ್ಟಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ತಾಲೂಕು ಕೃಷಿ ಪ್ರಧಾನವಾದುದು. ಮಾಗಡಿ ಅವರೆ, ಸೊಪ್ಪು, ಕೆಂಪು ರಾಗಿಯನ್ನು ಹುಡುಕುತ್ತಾರೆ. ರೈತರ ಶ್ರಮಕ್ಕೆ ಗೌರವ ಮತ್ತು ನ್ಯಾಯ ಸಿಗಬೇಕು. ತಾಲೂಕಿನಲ್ಲಿ ಕೃಷಿ ಮಾರುಕಟ್ಟೆ, ನೀರು, ಬಿತ್ತನೆ ಬೀಜ ಕೊಡುವುದರಲ್ಲಿ ಈಗಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಸತತವಾಗಿ 13 ವರ್ಷಗಳಿಂದ ರೈತರ ಪರ ಹೋರಾಟ ಮಾಡುತ್ತಿರುವುದು ಹೆಮ್ಮೆ ವಿಷಯ. ನೀವು ಗಟ್ಟಿಯಾಗಿ ಕೇಳದಿದ್ದರೆ ನಮ್ಮಂತಹ ರಾಜಕಾರಣಿಗಳು ಎಚ್ಚರವಾಗುತ್ತೇವೆ ಎಂದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಯೋಧ ಅಜ್ಜನಹಳ್ಳಿ ಗಂಗಯ್ಯ, ನೇರಳವಾಡಿ ಮಾಸ್ತಿಗೌಡ, ಚಿಟ್ಟನಹಳ್ಳಿ ಧನಂಜಯ, ನಿವೃತ್ತ ಮುಖ್ಯಶಿಕ್ಷಕ ಟಿ.ಎ.ವಾಸುದೇವ್, ಸಂಪತ್ ಕುಮಾರ್, ಪತ್ರಕರ್ತ ತಿರುಮಲೆ ಶ್ರೀನಿವಾಸ್, ರವಿಕಿರಣ್, ಯಜಮಾನ್ ರಂಗಯ್ಯ, ಜಯಂತ್, ರುಚಿತಾ, ರವಿಕುಮಾರ್ ಅವರನ್ನು ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ರಾಜ್ಯ ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ.ಜಯರಾಮ್ ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣಮೂರ್ತಿ, ಕನ್ನಡ ಚಲನಚಿತ್ರ ಕಲಾವಿದ ರಂಗಾಯಣ ರಘು, ಮುಖಂಡರಾದ ಮಾಡಬಾಳ್ ಜಯರಾಂ, ಚನ್ನರಾಯಪ್ಪ, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ. ಧನಂಜಯ, ತಾಪಂ ಮಾಜಿ ಅಧ್ಯಕ್ಷ ಶಿವರಾಜ್, ಶೈಲಜಾ ವೆಂಕಟೇಶ್, ತಮ್ಮಣ್ಣಗೌಡ, ಪುರಸಭಾ ಸದಸ್ಯರಾದ ಕೆ.ಬಿ.ಬಾಲು, ಅನಿಲ್, ಮಂಜುನಾಥ್, ರಾಮಣ್ಣ, ರಂಗಹನುಮಯ್ಯ, ಆಗ್ರೋ ಪುರುಷೋತ್ತಮ, ರೂಪೇಶ್ ಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ತಾಲೂಕು ಯುವ ಘಟಕದ ಅಧ್ಯಕ್ಷ ರವಿಕುಮಾರ್, ಗೌರವಾಧ್ಯಕ್ಷ ಧನಂಜಯ ಸೇರಿದಂತೆ ಇತರರು ಭಾಗವಹಿಸಿದ್ದರು.ಫೋಟೋ 23ಮಾಗಡಿ4 :
ಮಾಗಡಿಯ ಕಲ್ಯಾಗೇಟ್ ವೃತ್ತದಲ್ಲಿ ತಾಲೂಕು ರೈತ ಸಂಘ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.