ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಉಚಿತ ವೈದ್ಯಕೀಯ ಕಾಲೇಜು ಆಗಿ ಪರಿವರ್ತನೆ ಆಗಿರುವುದು ಭಾರತೀಯ ವೈದ್ಯಕೀಯ ಶಿಕ್ಷಣದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ವೈದ್ಯಕೀಯ ಶ್ರೇಷ್ಠತೆಯ ಜೊತೆಗೆ ನೈತಿಕತೆ ಮತ್ತು ಕರುಣೆಯ ಮೌಲ್ಯಗಳನ್ನೂ ಹೊಂದಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಶ್ಲಾಘಿಸಿದರು.ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವದ 53ನೇ ದಿನ ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಇಂಥ ಸಂಸ್ಥೆಯನ್ನು ಆರಂಭಿಸಿ ಸೇವೆ ನೀಡುವುದು ಸರ್ಕಾರಕ್ಕೂ ಕಷ್ಟವಾಗುತ್ತದೆ ಎಂದರು.
ಸಂಪುಟದಲ್ಲಿ ಎಲ್ಲರ ಸಹಮತಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬಗ್ಗೆ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಸಲ್ಲಿಸಿದಾಗ ಸಚಿವ ಸಂಪುಟದ ಎಲ್ಲಾ ಸದಸ್ಯರು ಕೊಡಬೇಕು, ತಕ್ಷಣವೇ ಅನುಮತಿ ಕೊಡಬೇಕೆಂದು ಸಹಮತ ವ್ಯಕ್ತಪಡಿಸಿದರು. ಈ ರೀತಿ ಸಚಿವ ಸಂಪುಟದಲ್ಲಿ ಯಾವುದೇ ವೈದ್ಯಕೀಯ ಸಂಸ್ಥೆಗೆ ಬೆಂಬಲ ನೀಡಿದನ್ನು ನಾನು ನನ್ನ ಸಾರ್ವಜನಿಕ ಜೀವನದಲ್ಲಿ ನೋಡಿಯೇ ಇಲ್ಲ ಎಂದು ಸ್ಮರಿಸಿದರು. ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಸತ್ಯ ಸಾಯಿ ಗ್ರಾಮದಲ್ಲಿರುವ ವೈದ್ಯಕೀಯ ಕಾಲೇಜು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಒಂದು ಕೊಡುಗೆಯಾಗಿದೆ. ಜಗತ್ತಿನ ಯಾವುದೇ ಭಾಗದ ಜನರು ಇಲ್ಲಿಗೆ ಬಂದು ಉಚಿತವಾಗಿ ಚಿಕಿತ್ಸೆ ಪಡೆಯಲಿ ಎಂಬುದು ನಮ್ಮ ಆಲೋಚನೆ. ಇಲ್ಲಿ ಓದಿದ ನಮ್ಮ ಮಕ್ಕಳು ಜಗತ್ತಿನ ನಾನಾ ಭಾಗಗಳಿಗೆ ಹೋಗಿ ಸೇವೆ ಸಲ್ಲಿಸುತ್ತಾರೆ. ಇದು ವಸುಧೈವ ಕುಟುಂಬಕಂ ಪರಿಕಲ್ಪನೆಯ ಹೆಜ್ಜೆಗಳು ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನಅಖಿಲ ಭಾರತೀಯ ಒಸ್ವಾಲ್ ಪರಿಷತ್‌ಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕ ಅಧ್ಯಕ್ಷ ರೇ ಚಂದ್ ಖಟರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಫಿಲಿಪೀನ್ಸ್ ದೇಶದಲ್ಲಿ ಸಂಗೀತ ಮತ್ತು ಲಲಿತಕಲೆಗೆ ಕೊಡುಗೆ ನೀಡಿರುವ ಕಲಾವಿದ ಸ್ಟ್ಯಾನ್ಲಿ ಫೆರ್ರಿ ಫೆರ್ನಾಂಡಿಸ್ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.