ಸಾರಾಂಶ
ಹಳೆಗನ್ನಡ ಓದುವುದೆ ತ್ರಾಸದಾಯಕ. ಅದರ ಮೇಲೆ ವಿಮರ್ಶೆ ನೀಡುವುದು ಇನ್ನೂ ಕಷ್ಟದ ಕೆಲಸ ಎಂದು ವಿಮರ್ಶಕ ಬಿ. ಮಹೇಶ ಹರವೆ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಹಳೆಗನ್ನಡ ಓದುವುದೆ ತ್ರಾಸದಾಯಕ. ಅದರ ಮೇಲೆ ವಿಮರ್ಶೆ ನೀಡುವುದು ಇನ್ನೂ ಕಷ್ಟದ ಕೆಲಸ ಎಂದು ವಿಮರ್ಶಕ ಬಿ. ಮಹೇಶ ಹರವೆ ಅಭಿಪ್ರಾಯಪಟ್ಟರು.ಜಿಲ್ಲಾ ಲೇಖಕರು ಸಂಘವು ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ದಿಲೀಪ್ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರ ವಿಮರ್ಶಾ ಸಂಕಲನ ಪಚ್ಚೆಯ ಜಗುಲಿ ಕುರಿತು ಅವರು ಮಾತನಾಡಿದರು.ಸಾಹಿತ್ಯ ಕೃತಿಗಳ ವಿಮರ್ಶೆ ಮಾಡುವವರು ಮತ್ತು ವಿಮರ್ಶಾ ಲೇಖನಗಳನ್ನು ಓದುವವರ ಸಂಖ್ಯೆ ದಿನೇದಿನೆ ಕ್ಷೀಣಿಸುತ್ತಿದೆ ಪಂಪ ಕವಿಯ ಸಾಹಿತ್ಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉತ್ಕೃಷ್ಟ ಸ್ಥಾನವನ್ನು ಪಡೆದಿದ್ದು ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕೃತಿಗಳ ಮೂಲ ಪಠ್ಯವನ್ನು ಆಧರಿಸಿದ ೧೩ ವಿಮರ್ಶಾ ಲೇಖನಗಳು ಪಚ್ಚೆಯ ಜಗುಲಿ ಕೃತಿಯಲ್ಲಿವೆ ಎಂದರು.ಪ್ರಸಿದ್ಧ ವಿಮರ್ಶಕ ಜಿ.ಎಚ್. ನಾಯಕ್, ವೆಂಕಟಾಚಲ ಶಾಸ್ತ್ರಿಗಳ ಮಾರ್ಗದರ್ಶನದಿಂದ ಅದನ್ನು ವಿಮರ್ಶೆ ಮಾಡಿದ ಕೀರ್ತಿ ದಿಲೀಪ್ ಅವರಿಗೆ ಸಲ್ಲುತ್ತದೆ. ಲೇಖನಗಳು, ಬಳಸಿದ ಪದಗಳು, ಅರ್ಥೈಸಿಕೊಂಡು ಅನಾವರಣಗೊಳಿಸಿದ ರೀತಿ ಚೆನ್ನಾಗಿದೆ ಆದರೆ ಯಾವುದೇ ವಿಮರ್ಶೆ ಅಸಮಗ್ರ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಪರಿಪೂರ್ಣತೆಗಾಗಿ ಇನ್ನಷ್ಟು ಸೇರ್ಪಡೆ ಅಗತ್ಯವಿದೆ, ಪರಿಷ್ಕತಗೊಳಿಸಿ ಪ್ರಕಟಿಸಿದರೆ ಇನ್ನಷ್ಟು ಮೌಲಿಕ ಕೃತಿಯಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪ್ರಶಸ್ತಿ ಪುರಸ್ಕೃತ ಸಾಹಿತಿ ಸ್ವಾಮಿ ಪೊನ್ನಾಚ್ಚಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸತ್ವಯುತವಾಗಿ ಬರೆಯುವ ಹಲವು ಬರಹಗಾರರಿದ್ದು ಮಾಹಿತಿ ಕೊರತೆಯಿಂದ ಅವರು ಕೃತಿಗಳು ಪ್ರಶಸ್ತಿಗಳಿಂದ ದೂರ ಉಳಿದಿವೆ. ರಾಜಕೀಯವಾಗಿ ಸಂಘರ್ಷ, ಭಿನ್ನತೆಗಳು ಸಹಜ ಆದರೆ ಸಾಹಿತ್ಯ- ಸಾಂಸ್ಕೃತಿಕ ವಲಯದಲ್ಲಿ ಒಳ್ಳೆಯದಲ್ಲ. ಈ ಕಾರಣದಿಂದಾಗಿಯೇ ಹಲವು ಅವಕಾಶಗಳು ಜಿಲ್ಲೆಗೆ ತಪ್ಪಿವೆ. ಚಾಮರಾಜನಗರ ಲೇಖಕರು ಸಂಘವು ಎಲ್ಲರನ್ನು ಒಗ್ಗೂಡಿಸಿಕೊಂಡು ಜಿಲ್ಲೆಯ ಸಾಹಿತ್ಯ ಲೋಕವನ್ನು ವಿಸ್ತರಿಸಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೇಚಂಬಳ್ಳಿ ದುಂಡಮಾದಯ್ಯ ಅವರು ಮಾತನಾಡಿ ಪ್ರಶಸ್ತಿ ಪುರಸ್ಕಾರಗಳಿಂದ ಯಾವುದೇ ಕೃತಿಯ ಮೌಲ್ಯವನ್ನು ಹಿಗ್ಗಿಸುವ ಕುಗ್ಗಿಸುವ ಕೆಲಸ ಸಾಧ್ಯವಾಗದು ಎಂಬುದು ನಿಜ. ಆದರೆ ಅದರಿಂದಾಗುವ ಪ್ರಭಾವ ಮತ್ತು ಕೃತಿ ಪಡೆದುಕೊಳ್ಳುವ ಮಹತ್ವ ಪರಿಣಾಮಕಾರಿ ಎಂದರು.ಪ್ರಶಸ್ತಿ ಪುರಸ್ಕೃತ ವಿಮರ್ಶಕ ಆರ್. ದಿಲೀಪ್ ಕುಮಾರ್ ಅವರನ್ನು ಲೇಖಕರು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕೊಳ್ಳೇಗಾಲದ ಸಾಹಿತ್ಯ ಮಿತ್ರಕೂಟ ಸಂಘಟನೆಯ ನೂತನ ಅಧ್ಯಕ್ಷರಾದ ಬಾಳಗುಣಸೆ ಮಂಜುನಾಥ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಸೋಮಶೇಖರ ಬಿಸಲ್ವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಅಶ್ವಿನಿ ಕಶ್ಯ್ಸಪ, ಎನ್. ಧನಲಕ್ಷ್ಮಿ, ಸಾಹಿತಿ ವೆಂಕಟರಾಜು, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಜನಶಕ್ತಿ ಸುರೇಶ್, ವಿಶ್ರಾಂತ ಪ್ರಾಂಶುಪಾಲ ಬಂಗಾರನಾಯಕ, ಕಲಾವಿದ ರವಿಕುಮಾರ್ ಕೊಮಾರನಪುರ, ಸಿದ್ದಲಿಂಗಸ್ವಾಮಿ, ಡಾ ಪ್ರೇಮ ಉಪಸ್ಥಿತರಿದ್ದರು.