ಸಾರಾಂಶ
ಹಾಲು ಮತದವರಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದರು.
ಗದಗ: ಹಾಲು ಮತದವರಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದರು.
ರಾಜ್ಯ ರಾಜಕಾರಣದಲ್ಲಿನ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಧಿಕಾರದ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದವರು ಹಾಲುಮತ ಹಕ್ಕ-ಬುಕ್ಕರು. ಆ ಸಮಾಜಕ್ಕೆ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಆಗೋದಿಲ್ಲ ಎಂದರು.ಒಳ್ಳೆ ಕೆಲಸ ಮಾಡುವವರಿಗೆ ಕೆಡುಕು ಆಗೋದು ಸಹಜ, ಹಾಗಂತ ಉಳಿದ ಸಮಾಜಗಳು ಒಳ್ಳೆ ಕೆಲಸ ಮಾಡಿಲ್ಲವಂತಲ್ಲ. ಎಲ್ಲಾ ಸಮಾಜಗಳು ಒಳ್ಳೆಯ ಕೆಲಸಗಳನ್ನೇ ಮಾಡುತ್ತಲಿವೆ. ಸದ್ಯ ಹಾಲುಮತದ ಸಮಾಜದ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾರೆ. ಹೀಗಾಗಿ ಅವರಿಂದ ಅಧಿಕಾರ ಕಿತ್ತುಕೊಳ್ಳುವದು ಕಷ್ಟ ಎಂದರು.
ಈ ಹಿಂದೆಯೂ ಸಿಎಂ ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದ್ದಾರೆ. ಯಾರೂ ಅಧಿಕಾರ ಕಿತ್ತುಕೊಳ್ಳಲು ಆಗಿಲ್ಲ. ಇವತ್ತಿನ ರಾಜಕೀಯ ಚಿಂತನೆ ಮಾಡುವುದಾದರೆ, ಈ ಮುಖ್ಯಮಂತ್ರಿಯ ಅಧಿಕಾರ ಕಿತ್ತುಕೊಳ್ಳುವದು ಕೂಡಾ ಕಷ್ಟ ಎಂದರು.ಡಿಸಿಎಂ ಡಿ.ಕೆ. ಶಿವಕುಮಾರ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ನಮಗೂ ಇದೆ. ಬದಲಾವಣೆ ಕುರಿತು, ಯುಗಾದಿ ನಂತರ ಅದರ ಬಗ್ಗೆ ಹೇಳಬಹುದು. ಇನ್ನು ಡಿ.ಕೆ. ಶಿವಕುಮಾರ್ ಒಕ್ಕಲಿಗರು, ಒಕ್ಕಲಿಗರು ಅನ್ನದಾತರು, ಅವರನ್ನು ಇಡೀ ಜಗತ್ತು ಮರೆಯೋದಿಲ್ಲ. ಶಿವಕುಮಾರ್ ಬಗ್ಗೆ ದುರಾಭಿಮಾನ ಇಲ್ಲ, ಅವರ ಬಗ್ಗೆ ಅಭಿಮಾನ ಇದೆ. ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದಾನೆ. ಇದಕ್ಕೆ ಜಾತಿ ಲೇಪನ ಹಚ್ಚುವದು ಬೇಡ ಎಂದು ಶ್ರೀಗಳು ಹೇಳಿದರು.
ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿ ಆಗುತ್ತದೆ, ಶುಭ ಯೋಗ ಇದೆ, ಪ್ರಕೃತಿ ದೋಷ ಬಹಳ ಇದ್ದು, ಭೂಮಿ ಸುನಾಮಿ, ಗಾಳಿ ಸುನಾಮಿ ಕಳೆದ ವರ್ಷಕ್ಕಿಂತ ಹೆಚ್ಚು ಇದೆ. ಬಿಸಿಲು ಧಗೆ, ಹಿಮಪಾತ ಆಗುತ್ತದೆ ಎಂದು ಭವಿಷ್ಯ ನುಡಿದರು.ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಸುನಾಮಿ ಆಗುವ ಲಕ್ಷಣಗಳು ಇವೆ. ಯುಗಾದಿ ನಂತರ ಅದರ ಸುಳಿವು ಸಿಗಲಿದೆ ಎಂದು ಸ್ವಾಮೀಜಿ ಹೇಳಿದರು.