ಸಾರಾಂಶ
ಚಿತ್ರದುರ್ಗ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಇತಿಹಾಸ ಸಹಾಯಕ ನಿವೃತ್ತ ಪ್ರಾಂಶುಪಾಲ ರಾಜಪ್ಪ ಮಾತನಾಡಿದರು.
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಚರಿತ್ರೆಗೆ ದಾಖಲೆ ಮುಖ್ಯ. ದಾಖಲೆ ಇಲ್ಲದೆ ಚರಿತ್ರೆ ಬರೆಯುವುದು ಕಷ್ಟ ಎಂದು ಸರ್ಕಾರಿ ಕಲಾ ಕಾಲೇಜು ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ರೇವಣಸಿದ್ದಪ್ಪಅವರು ಹೇಳಿದರು.ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಸರ್ಕಾರಿ ವಸ್ತು ಸಂಗ್ರಹಾಲಯ, ಸರ್ಕಾರಿ ಕಲಾ ಕಾಲೇಜ್ ಸಹಯೋಗದೊಂದಿಗೆ ರಂಗಯ್ಯನಬಾಗಿಲು ಸಮೀಪವಿರುವ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಿಎಚ್‌ಡಿ ಮಾಡುವ ಸಂದರ್ಭದಲ್ಲಿ ಸಂಗ್ರಹಾಲಯ ಸಹಾಯಕವಾಗಲಿದ್ದು, ಶಾಸನ, ತಾಳೆಗರಿ, ಕೈಬರಹ, ಕಡತಗಳು ದೊರೆಯುತ್ತವೆ. ಪುರಾತತ್ವ ಇಲಾಖೆ ಚರಿತ್ರೆಗಾರರಿಗೆ ತವರು ಮನೆ ಇದ್ದಂತೆ ಎಂದ ಅವರು ಜಿಲ್ಲೆಯಲ್ಲಿ ಐತಿಹಾಸಿಕ ನೆಲೆಗಳಿದ್ದು, ಅವುಗಳ ಕುರಿತು ಅಧ್ಯಯನದಲ್ಲಿ ತೊಡಗಿಕೊಳ್ಳಿ ಎಂದು ಇತಿಹಾಸ ವಿಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.ನಿವೃತ್ತ ಪ್ರಾಂಶುಪಾಲ ಕೆ.ಎಸ್.ರಾಜಪ್ಪ ಮಾತನಾಡಿ, ಮ್ಯೂಸಿಯಂನಲ್ಲಿ ಹಲವಾರು ವಿಚಾರಗಳು ದೊರೆಯುತ್ತವೆ. ಆದರೆ ಇಂದಿನ ಯುವ ಜನಾಂಗ ಮೊಬೈಲ್ ಗೀಳಿಗೆ ಹಾಳಾಗತ್ತಿದ್ದಾರೆ. ಅದನ್ನು ಬಿಟ್ಟು ಸಂಗ್ರಾಹಾಲಯಗಳನ್ನು ಸುತ್ತುವ ಮೂಲಕ ಹೆಚ್ಚಿನ ಜ್ಞಾನ ವೃದ್ಧಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ವೇಳೆ ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿದರು. ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಪ್ರಹ್ಲಾದ್ ಇದ್ದರು.