ಭಾರತೀಯ ಸಂಸ್ಕೃತಿಯಲ್ಲಿ ತಾಯ್ತನವಿಲ್ಲದ ಹೆಣ್ಣನ್ನು ತಾತ್ಸಾರದಿಂದ ನೋಡಿ ಅವಮಾನಿಸಿ, ಅಗೌರವಿಸುವ ಸಂಪ್ರದಾಯವಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಣ್ಣಿಗೆ ಸಾಂತ್ವನ ಹೇಳಿ ಅತ್ಯುತ್ತಮ ಚಿಕಿತ್ಸೆ ನೀಡುವ ಮಹತ್ತರ ಕೆಲಸವನ್ನು ಡಾ. ದಿಲೀಪ್ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ.
ಕನ್ನಡಪ್ರಭ ವಾರ್ತೆ ಮೈಸೂರು
ಮಾನವನ ಆಧುನಿಕ ಜೀವನ ಶೈಲಿಯಿಂದ ಸಹಜ ಸಂತಾನ ಪಡೆಯುವ ಅವಕಾಶದಿಂದ ವಂಚಿತ ವಾಗುತ್ತಿದ್ದು, ಮುಂದುವರಿದ ವೈಜ್ಞಾನಿಕ ಪ್ರಗತಿಯಿಂದಾಗಿ ಇಂದು ಮಕ್ಕಳನ್ನು ಪಡೆಯುವಂತೆ ಮಾಡಿ ಕುಟುಂಬದಲ್ಲಿ ಸಂತಸದ ವಾತಾವರಣ ಮೂಡಿಸುವಲ್ಲಿ ಸೃಷ್ಟಿ ಆಸ್ಪತ್ರೆಯು ಮಹತ್ತರ ಕಾರ್ಯ ನಿರ್ವಹಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ತಿಳಿಸಿದರು.ಕುವೆಂಪುನಗರದ ಸೃಷ್ಟಿ ಫರ್ಟಿಲಿಟಿ ಆಸ್ಪತ್ರೆಯಲ್ಲಿ ಕನ್ನಡ ಸಾಹಿತ್ಯ ಕಲಾಕೂಟ, ಅಮೋಘ ವರ್ಷ ಅಮೃತ ವರ್ಷಿಣಿ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬದುಕಿನಲ್ಲಿ ಸಂತಸ ಕಂಡ ಫರ್ಟಿಲಿಟಿ ಆಸ್ಪತ್ರೆಯ ಫಲಾನುಭವಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ತಾಯ್ತನವಿಲ್ಲದ ಹೆಣ್ಣನ್ನು ತಾತ್ಸಾರದಿಂದ ನೋಡಿ ಅವಮಾನಿಸಿ, ಅಗೌರವಿಸುವ ಸಂಪ್ರದಾಯವಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಣ್ಣಿಗೆ ಸಾಂತ್ವನ ಹೇಳಿ ಅತ್ಯುತ್ತಮ ಚಿಕಿತ್ಸೆ ನೀಡುವ ಮಹತ್ತರ ಕೆಲಸವನ್ನು ಡಾ. ದಿಲೀಪ್ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ರವಿಗೌಡ ಮಾತನಾಡಿ, ವೈದ್ಯಕೀಯ ಕ್ಷೇತ್ರ ಇಂದು ವಿಸ್ತಾರವಾಗಿ ಹರಡಿದ್ದು ಹೊಸ ಆವಿಷ್ಕಾರದಿಂದ ಬಂಜೆತನ ಇಂದು ಶಾಪವಾಗಿಲ್ಲ. ನುರಿತ ತಜ್ಞ ವೈದ್ಯರ ನೆರವಿನಿಂದ ಸೂಕ್ತ ಚಿಕಿತ್ಸೆ ಪಡೆದು ಜೀವನ ಪಾವನಗೊಳಿಸಿಕೊಳ್ಳಬಹುದು. ನನ್ನ ಶಿಷ್ಯ ಡಾ. ದಿಲೀಪ್ ಮೈಸೂರಿನ ಹೃದಯ ಭಾಗದಲ್ಲಿ ಸೃಷ್ಟಿ ಆಸ್ಪತ್ರೆ ತೆರೆಯುವ ಮೂಲಕ ಬಡವ,ಮಧ್ಯಮ ವರ್ಗದ ಮಕ್ಕಳಿಲ್ಲದ ನೊಂದ ಸಾವಿರಾರು ದಂಪತಿಗಳಿಗೆ ಬೆಳಕಾಗಿರುವುದು ನನಗೆ ಸಂತಸ ತಂದಿದೆ ಎಂದರು.ಸಂಸ್ಥೆ ಅಧ್ಯಕ್ಷ ಡಾ. ದಿಲೀಪ್ ಮಾತನಾಡಿ, ಗ್ರಾಮೀಣ ಪರಿಸರದಿಂದ ಬೆಳದು ಬಂದ ನಾನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದಿ ಬೆಳೆದು ಬಂದವನಾಗಿದ್ದೇನೆ. ನಾನು ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಲ್ಲದ ದಂಪತಿಗಳ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಅಂತಹವರ ಸೇವೆ ಮಾಡುವುದಕ್ಕಾಗಿಯೇ ಸೃಷ್ಟಿ ಆಸ್ಪತ್ರೆ ಆರಂಭಿಸಿದ್ದೇನೆ ಎಂದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ವೈದ್ಯರು ಮನುಕುಲದ ಪುನರ್ ನಿರ್ಮಾತೃಗಳಾಗಿದ್ದು. ಪ್ರತೀ ಕುಟುಂಬದ ಮಗು ವಿಶ್ವಮಾನವನಾಗಿದ್ದಾನೆ, ತಾಯ್ತನದ ಬದುಕಿಗೆ ಆಧಾರವಾದ ಸೃಷ್ಟಿ ಆಸ್ಪತ್ರೆಯು ನೊಂದವರಿಗೆ ಆಶಾಕಿರಣವಾಗಿದೆ. ಇಲ್ಲಿನ ಫಲಾನುಭವಿಗಳ ಭಾವನಾತ್ಮಕ ಮಾತುಗಳು ಆಸ್ಪತ್ರೆಯ ಸೇವಾಬದ್ದತೆಯನ್ನು ಎತ್ತಿ ಹಿಡಿದಿದೆ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಅಮೋಘ ವರ್ಷ, ಅಮೃತ ವರ್ಷಿಣಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಗೊರಳ್ಳಿ ಜಗದೀಶ್, ಆಲನಹಳ್ಳಿ ಕೆಂಪರಾಜು, ಕಿತ್ತೂರ್ ಕೃಷ್ಣಪ್ಪ, ಆಸ್ಪತ್ರೆ ಸಿಬ್ಬಂದಿ ಹಾಗೂ ಆಸ್ಪತ್ರೆಯ ಹಿರಿಯ ಫರ್ಟಿಲಿಟಿ ಫಲಾನುಭವಿಗಳು ಇದ್ದರು.