ಚುನಾವಣೆಯಲ್ಲಿ ಬಿಜೆಪಿ ಕೊಲೆ ಮಾಡದಿದ್ದರೆ ಸಾಕು

| Published : Nov 05 2023, 01:15 AM IST

ಸಾರಾಂಶ

ನಮ್ಮ ಪಕ್ಷದ 136 ಅಭ್ಯರ್ಥಿಗಳನ್ನು ಗೆಲ್ಲಿಸಿ ಐದು ವರ್ಷ ಅಧಿಕಾರ ನಡೆಸಲು ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಯಾರು ಮುಖ್ಯಮಂತ್ರಿ ಆಗುತ್ತಾರೆ? ಎಷ್ಟು ವರ್ಷ ಆಗುತ್ತಾರೆ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ

ಕಾರವಾರ:

ಬಿಜೆಪಿ ಆಡಳಿತದಲ್ಲಿದ್ದಾಗ ಮುಖ್ಯಮಂತ್ರಿಯಿಂದ ಹಿಡಿದು ಕಾರ್ಯಕರ್ತರ ವರೆಗೂ ಒಬ್ಬರು ಒಂದೂ ಸತ್ಯ ಹೇಳಿಲ್ಲ. ಲೋಕಸಭಾ ಚುನಾವಣಾ ಸಮೀಪಿಸುತ್ತಿದೆ. ಯಾರನ್ನಾದರು ಕೊಲೆ ಮಾಡದಿದ್ದರೆ ಸಾಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಟೀಕಿಸಿದರು.

ನಗರಕ್ಕೆ ಶನಿವಾರ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಿದ್ದಾಗ ಶಿರಸಿಗೆ ಆಗಮಿಸಿದ್ದಾಗ ₹ ೧೦೦ ಕೋಟಿ ನೀಡುತ್ತೇನೆ ಎಂದಿದ್ದರು. ಆ ಹಣ ಬಂದಿದೆಯೇ? ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಗುಳ್ಳಾಪುರ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರಾತಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆ ಹಣ ಬಂದಿದೆಯೇ? ಬಿಜೆಪಿಗರು ಹೇಳುವುದಿಲ್ಲ ಸುಳ್ಳು ಎಂದು ಟೀಕಿಸಿದರು.

ಮಾಜಿ ಸಚಿವ ಈಶ್ವರಪ್ಪ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ ಎನ್ನುವ ಹೇಳಿಕೆಗೆ, ಅವರಿಗೆ ಮೊದಲು ವಿಪಕ್ಷದ ನಾಯಕರನ್ನು ಆಯ್ಕೆ ಮಾಡಲು ಹೇಳಿ. ಐದು ತಿಂಗಳು ಕಳೆದರೂ ಅವರ ಯೋಗ್ಯತೆಗೆ ವಿಪಕ್ಷ ನಾಯಕರನ್ನು ಮಾಡಲು ಆಗಿಲ್ಲ. ಈಶ್ವರಪ್ಪ ಅವರ ಹೆಸರು ಹೇಳಿ ಉಡುಪಿಗೆ ಬಂದು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾತನಾಡುವ ನೈತಿಕತೆಯೇ ಇಲ್ಲ. ಹಿಂದಿನ ಐದು ವರ್ಷ ಅವರ ಪಕ್ಷದ ವಿರುದ್ಧವೇ ಮಾತನಾಡಿದವರು. ಎಷ್ಟು ಹೊತ್ತಿಗೆ ಏನು ಮಾತನಾಡುತ್ತಾರೆ ಅವರಿಗೆ ಗೊತ್ತಿರಲ್ಲ ಎಂದು ಕಾಲೆಳೆದರು.

ಐದು ವರ್ಷವೂ ತಾವೇ ಸಿಎಂ ಎಂದ ಸಿದ್ದರಾಮಯ್ಯ ಅವರ ಹೇಳಿಕೆಗೆ, ನಮ್ಮ ಪಕ್ಷದ 136 ಅಭ್ಯರ್ಥಿಗಳನ್ನು ಗೆಲ್ಲಿಸಿ ಐದು ವರ್ಷ ಅಧಿಕಾರ ನಡೆಸಲು ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಯಾರು ಮುಖ್ಯಮಂತ್ರಿ ಆಗುತ್ತಾರೆ? ಎಷ್ಟು ವರ್ಷ ಆಗುತ್ತಾರೆ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಸಿದ್ದರಾಮಯ್ಯ ನಾನೇ ಸಿಎಂ ಎನ್ನುವ ಹೇಳಿಕೆಗೆ ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿ ಅವರಿಗೆ ಕಾಂಗ್ರೆಸ್ ತವರು ಮನೆ. ನಮ್ಮ ಪಕ್ಷದಿಂದಿ ಸಿಎಂ ಆದವರು. ಅವರ ಮೇಲೆ ತಮಗೆ ಗೌರವವಿದೆ. ಅವರ ಅನುಭವದ ಮೇಲೆ ಸಲಹೆ ನೀಡಿದ್ದು, ತವರು ಮನೆಯ ಮೇಲಿನ ಪ್ರೀತಿಯಿಂದ ಹೇಳಿರಬಹುದು ಎಂದರು.