ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ನೇತೃತ್ವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ನೇತೃತ್ವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಲಯನ್ಸ್ ಜಿಲ್ಲೆ 317ಎಫ್‌ನ ಕನ್ನಡ ಮತ್ತು ಸಂಸ್ಕೃತಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ, ಬದಲಾದ ಕಾಲಘಟ್ಟ ಮತ್ತು ಸಂದರ್ಭಕ್ಕೆ ತಕ್ಕಂತೆ ಶೈಕ್ಷಣಿಕ ಚಿಂತನೆಗಳೂ ಬದಲಾಗುತ್ತಿವೆ. ಕೃತಕ ಬುದ್ದಿಮತ್ತೆ ಜಗತ್ತನ್ನು ನಿಯಂತ್ರಿಸುತ್ತಿರುವ ಸಂದರ್ಭದಲ್ಲಿ ಸೃಜನಶೀಲ ಸಂವೇದನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳಿಂದ ನಾವು ದೂರವಾಗುತ್ತಿದ್ದೇವೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸುವ ಜೊತೆಗೆ ಮನುಷ್ಯ ಪ್ರೀತಿಯನ್ನೂ ಬೆಳೆಸುವ ಅನಿವಾರ್ಯತೆ ಇದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷೆ ಎಲ್.ಎನ್.ವಸುಂಧರಾದೇವಿ ಮಾತನಾಡಿ, ಮಕ್ಕಳ ಪ್ರತಿಭಾವಂತಿಕೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆ ಈ ರೀತಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸುತ್ತಿದೆ. ಮತ್ತಷ್ಟು ಸಾಧಿಸಲು ಸ್ಪೂರ್ತಿಯನ್ನು ಒದಗಿಸುವುದರೊಂದಿಗೆ ಇತರರಿಗೂ ಪ್ರೇರಣೆ ಒದಗಿಸುವ ಮಹತ್ವಾಕಾಂಕ್ಷೆ ಹೊಂದಿದೆ ಎಂದರು.
ಲಯನ್ಸ್ ಗ್ರಾಮೀಣ ಶೈಕ್ಷಣಿಕ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಪ್ರಕಾಶ್ ಮಾತನಾಡಿ, ಪಿಯು, ಪದವಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವ ನಮ್ಮ ವಿದ್ಯಾರ್ಥಿಗಳು ಸಿಇಟಿ, ನೀಟ್ ನಂತಹ ಪರೀಕ್ಷೆಗಳಲ್ಲಿ ಗಣನೀಯ ಸಾಧನೆ ಮಾಡಲು ವಿಫಲರಾಗುತ್ತಿರುವುದರ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ವಸ್ತುನಿಷ್ಠ ಮಾದರಿಯ ಅಧ್ಯಯನ ಮತ್ತು ಸಾಧನೆಗೆ ಪ್ರೇರಣೆ ನೀಡಬೇಕು ಎಂದರು.ಲಯನ್ಸ್ ಪ್ರಾಂತೀಯ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ಮೊಬೈಲ್ ದಾಸ್ಯದಿಂದ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುವಂತಾಗಿದೆ. ಯಂತ್ರಗಳೊಂದಿಗೆ ಬದುಕುವ ನಾವು, ಮಾನವೀಯ ಅಂತಃಕರಣದಿಂದ ದೂರವಾಗುತ್ತಿರುವುದು ಆತಂಕಕಾರಿ. ನಮ್ಮ ಮಕ್ಕಳಿಗೆ ಸಂಬಂಧಗಳ ಮಹತ್ವವನ್ನು ತಿಳಿಸುವುದು ಅಗತ್ಯ ಎಂದು ಹೇಳಿದರು.
ಕ್ಲಬ್‌ನ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಸಿ.ಮುನಿರಾಜು, ಲಯನ್ಸ್ ಚಾರಿಟೀಸ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಡಿಸಿಗಳಾದ ಎಂ.ಪಿ.ಸಿ ವೆಂಕಟೇಶ್, ಆರ್.ಎಸ್.ಮಂಜುನಾಥ್, ವಲಯ ಅಧ್ಯಕ್ಷ ನಂಜುಂಡೇಶ್ವರ್ ಬಾಬು, ಸರ್ವೀಸ್ ಕಮಿಟಿ ಮುಖ್ಯಸ್ಥ ಜಗದೀಶ್ ರೆಡ್ಡಿ, ಕ್ಲಬ್‌ನ ಕಾರ್ಯದರ್ಶಿ ರೇಖಾ ವೆಂಕಟೇಶ್, ಖಜಾಂಚಿ ನಿಖಿಲಾ, ಜಂಟಿ ಕಾರ್ಯದರ್ಶಿ ಭಾರತಿ ಮಂಜುನಾಥ್ ಸೇರಿದಂತೆ ವಿವಿಧ ಸಮಿತಿಗಳ ಮುಖ್ಯಸ್ಥರು, ಲಯನ್ಸ್ ಸದಸ್ಯರು ಪಾಲ್ಗೊಂಡಿದ್ದರು.ಫೋಟೋ-
3ಕೆಡಿಬಿಪಿ2- ದೊಡ್ಡಬಳ್ಳಾಪುರದ ಲಯನ್ಸ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.