ಮೇಲ್ವಿಚಾರಕಿ ಶಿವಮ್ಮ ಮಾತನಾಡಿ ತಾಲೂಕಿನಾದ್ಯಂತ ತಾಯಿ ಹಾಗೂ ಮಗುವಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೋಷಣ್‌ ಮಾಸಾಚರಣೆ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಗ್ರಾಮೀಣ ಭಾಗದಲ್ಲಿ ಸಮುದಾಯದ ಸಹಕಾರ ಕೂಡಾ ಅವಶ್ಯವಿದೆ ಎಂದು ಯೋಜನೆ ಬಗ್ಗೆ ವಿವರಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಸಿ. ಕುನ್ನಾಲ ವೃತ್ತದ ಕೊಪ್ಪ ಗೇಟ್ ಬಳಿಯ ಅಂಗನವಾಡಿ ಕೇಂದ್ರದಲ್ಲಿ ಪೋಷಣ್‌ ಮಾಸಾಚರಣೆ ಹಾಗೂ ಸೀಮಂತ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಡಾ.ಸುಪ್ರೀತ್ ಆರ್ಯ ಮಾತನಾಡಿ ಗರ್ಭಿಣಿಯರು ಮತ್ತು ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ತಾಯಿ ಆರೋಗ್ಯವಂತರಾಗಿರುತ್ತಾರೆ. ಆಗ ಮಾತ್ರ ಮಗು ಅರೋಗ್ಯವಾಗಿ ಬೆಳೆಯುತ್ತದೆ. ಗರ್ಭಾವಸ್ಥೆಯಲ್ಲಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ನವಜಾತ ಶಿಶುಗಳಿಗೆ ರೋಗನಿರೋಧಕ ಶಕ್ತಿ ನೀಡುವ ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ತಾಯಂದಿರು ಮಕ್ಕಳಿಗೆ ಎದೆಹಾಲು ಉಣಿಸಿ ಎಂದು ಕರೆ ನೀಡಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಜಾತಾ ಮಾತನಾಡಿ ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಪೌಷ್ಟಿಕ ಆಹಾರವನ್ನು ಸದುಪಯೋಗಪಡಿಸಿಕೊಳ್ಳಬೇಕು. ತಾಲೂಕಿನಲ್ಲಿ ಅಪೌಷ್ಟಿಕತೆ ನಿರ್ಮೂಲನೆಗೆ ಇಲಾಖೆ ತೀವ್ರ ನಿಗಾವಹಿಸಿ ಕೆಲಸ ಮಾಡುತ್ತಿದೆ. ಗರ್ಭಿಣಿಯರು ಹಾಗೂ ಬಾಣಂತಿಯರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು. ಮೇಲ್ವಿಚಾರಕಿ ಶಿವಮ್ಮ ಮಾತನಾಡಿ ತಾಲೂಕಿನಾದ್ಯಂತ ತಾಯಿ ಹಾಗೂ ಮಗುವಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೋಷಣ್‌ ಮಾಸಾಚರಣೆ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಗ್ರಾಮೀಣ ಭಾಗದಲ್ಲಿ ಸಮುದಾಯದ ಸಹಕಾರ ಕೂಡಾ ಅವಶ್ಯವಿದೆ ಎಂದು ಯೋಜನೆ ಬಗ್ಗೆ ವಿವರಿಸಿದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗರ್ಭಿಣಿ ಪ್ರೇಮ ಸ್ನೇಕ್ ಸ್ವಾಮಿ ಅವರಿಗೆ ಇಲಾಖೆಯ ವತಿಯಿಂದ ಹೂ ಮುಡಿಸಿ, ಉಡಿ ತುಂಬುವ ಮೂಲಕ ಸಾಂಪ್ರದಾಯಿಕ ಸೀಮಂತ ಕಾರ್ಯವನ್ನು ಸಂಭ್ರಮದಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಎಲ್ಲಾ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.