ಹೊಸಕೋಟೆ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಉತ್ತಮ ಆರೋಗ್ಯ ಹೊಂದಿದ್ದರೆ ಮಾತ್ರ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೊಸಕೋಟೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಾ. ರಮೇಶಪ್ಪ ತಿಳಿಸಿದರು

ಹೊಸಕೋಟೆ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಉತ್ತಮ ಆರೋಗ್ಯ ಹೊಂದಿದ್ದರೆ ಮಾತ್ರ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೊಸಕೋಟೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಾ. ರಮೇಶಪ್ಪ ತಿಳಿಸಿದರು.

ನಗರದ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಪತ್ತು ಕಳೆದುಕೊಂಡರೆ ಏನೂ ಕಳೆದುಕೊಂಡಂತೆ ಅಲ್ಲ, ಆರೋಗ್ಯ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ ಎಂಬ ಮಾತು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಆಸ್ಪತ್ರೆಗಳನ್ನು ನಿರ್ಮಿಸುವುದಕ್ಕಿಂತ ಕ್ರೀಡಾಂಗಣಗಳನ್ನು ನಿರ್ಮಿಸುವುದರಿಂದ ಲಕ್ಷಾಂತರ ಜನರ ಆರೋಗ್ಯ ಕಾಪಾಡಬಹುದು ಎಂಬ ಸಂದೇಶ ನೀಡಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಹಾಗೂ ಯುವಜನರು ಹೆಚ್ಚಿನ ಸಮಯವನ್ನು ಮೊಬೈಲ್, ಟ್ಯಾಬ್ಲೆಟ್‌ಗಳಲ್ಲಿ ಕಳೆಯುತ್ತಿದ್ದಾರೆ. ಇದರಿಂದ ಹೊರಬಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದರು.

ಪ್ರಾಂಶುಪಾಲರ ಸಂಘದ ಜಿಲ್ಲಾ ಕಾರ್ಯದರ್ಶಿ ಭೈರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾದ ಪದವಿಪೂರ್ವ ಹಂತದಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಶಿಸ್ತು, ಏಕಾಗ್ರತೆ, ನಾಯಕತ್ವ ಗುಣ ಹಾಗೂ ಉತ್ತಮ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಲು ಸಾಧ್ಯ. ಈ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಸರಿಯಾದ ದಾರಿಯಲ್ಲಿ ಸಾಗಲು ಕ್ರೀಡೆಗಳು ಉತ್ತಮ ವೇದಿಕೆಯಾಗಿವೆ. ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಸುಮಾರು ೩೦ ಕಾಲೇಜುಗಳ ೨,೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಜತೆಗೆ ಉತ್ತಮ ಕ್ರೀಡಾಪಟುಗಳನ್ನು ರೂಪಿಸುವುದು ಕ್ರೀಡಾಕೂಟದ ಉದ್ದೇಶವಾಗಿದೆ ಎಂದರು.

ಮಹದೇವ ಕಾಲೇಜು ಪ್ರಾಂಶುಪಾಲ ರಾಮನಾಥ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದಷ್ಟೇ ಕ್ರೀಡೆಗೂ ಮಹತ್ವವಿದೆ. ಕ್ರೀಡೆಯಲ್ಲಿ ಗೆಲುವು-ಸೋಲು ಸಹಜ. ಸೋಲನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಿ, ಗೆಲುವಿನಿಂದ ಅಹಂಕಾರಪಡದೆ ಮುನ್ನಡೆಯಬೇಕು. ಚೆಸ್‌ನಂತಹ ಕ್ರೀಡೆಗಳು ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಚಿಂತನಾ ಸಾಮರ್ಥ್ಯವನ್ನು ವೃದ್ಧಿಸುತ್ತವೆ. ದೈಹಿಕ ಚಟುವಟಿಕೆಗಳ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿಯೂ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಪಾಠದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಬಾಲಕಿಯರ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ವೀರೇಂದ್ರ ಸಿಂಗ್, ಪ್ರಾಂಶುಪಾಲ ಸತೀಶ್, ತ್ರಿವೇಣಿ, ಸುರೇಶ್, ಮಂಜುನಾಥ್, ಸೀನಪ್ಪ, ಶ್ರೀನಿವಾಸ್, ಮೋಹನ್, ಗಜೇಂದ್ರ, ಬಾಬುರೆಡ್ಡಿ, ತ್ರಿಶೂರ್, ಮಲ್ಲಿಕಾಜುನ ಸದವಾಮಿ, ವೆಂಕಟರಾಜು, ಶಶಿಕಲಾ, ವಿನೋದ್, ಕಿರಣ್, ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.

ಫೋಟೋ: 3 ಹೆಚ್‌ಎಸ್‌ಕೆ 1

ಹೊಸಕೋಟೆ ನಗರದ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಸ್ವೀಕಾರ ಮಾಡುವ ಮೂಲಕ ದೈಹಿಕ ಶಿಕ್ಷಣ ಪರಿವೀಕ್ಷಕ ಡಾ. ರಮೇಶಪ್ಪ ಸೇರಿದಂತೆ ಹಲವಾರು ಗಣ್ಯರು ಉದ್ಘಾಟಿಸಿದರು.