ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಎನ್‌ ಎಸ್‌ ಎಸ್‌ ಕಾರ್ಯಾಗಾರ

ಸೋಮವಾರಪೇಟೆ: ಅಗ್ನಿ ಅವಘಡಗಳು ಯಾವಾಗ, ಎಲ್ಲಿಗೆ ಸಂಭವಿಸಬಹುದು ಎಂಬುದು ನಿರ್ದಿಷ್ಟವಾಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಮೂಲಭೂತ ಸುರಕ್ಷತಾ ಕ್ರಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ ಎಂದು ಸೋಮವಾರಪೇಟೆಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆಯ ಸಿಬ್ಬಂದಿ ಎನ್. ಲಕ್ಷ್ಮಿಕುಮಾರ್ ಹೇಳಿದರು.ತಾಲೂಕಿನ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಡೆದ ಅಗ್ನಿ ಅವಘಡ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಅಗ್ನಿ ಅವಘಡಗಳ ವಿವಿಧ ಪ್ರಕಾರಗಳನ್ನು ವಿವರಿಸಿದ ಲಕ್ಷ್ಮಿಕುಮಾರ್ ಅವರು, ಅಗ್ನಿ ಅವಘಡಗಳ ಬಗ್ಗೆ ಭಯಪಡಬೇಡಿ ಎಚ್ಚರವಿರಲಿ ಎಂದು ಹೇಳಿದ ಅವರು, ಅಗ್ನಿ ದುರಂತದ ವಿಭಿನ್ನ ಬಗೆಯ ಮಾದರಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಡಿ.ಹರ್ಷ ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜೀವ ರಕ್ಷಣೆ ಕುರಿತು ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾತ್ರವಲ್ಲದೆ, ಸಮಾಜದಲ್ಲಿಯೂ ಈ ಜ್ಞಾನವನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು.ಸೋಮವಾರಪೇಟೆಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣಾಧಿಕಾರಿ ಎಸ್.ಟಿ. ನಾಗೇಶ್, ಸಿಬ್ಬಂದಿ ಪ್ರಶಾಂತ್, ಚೇತನ್, ಪವನ್, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಎಂ ಎಸ್ ಶಿವಮೂರ್ತಿ, ಕನ್ನಡ ಪ್ರಾಧ್ಯಾಪಕರಾದ ಎಚ್. ಹುಚ್ಚೇಗೌಡ, ಸಿಬ್ಬಂದಿ ಜವರಪ್ಪ, ಸಂಧ್ಯಾ ಇದ್ದರು.