ಚಿತ್ರದುರ್ಗ ಜಿಲ್ಲಾಡಳಿತದಿಂದ ಶುಕ್ರವಾರ ನಡೆದ ಮಹಾತ್ಮ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜನ್ಮ ದಿನಾಚರಣೆಯಲ್ಲಿ ನಿವೃತ್ತ ಪ್ರಾದ್ಯಾಪಕ ಡಾ. ಕರಿಯಪ್ಪ ಮಾಳಿಗೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗಾಂಧೀಜಿಯವರ ಸರಳತೆಯ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಸರಳ ಜೀವನಕ್ಕೆ ಬುದ್ಧ, ಮಹಾವೀರ ಹಾಗೂ ಗಾಂಧೀಜಿ ಅಪರಿಗ್ರಹ ಮಾರ್ಗ ತೋರಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪರಿಗ್ರಹ ಎಂದರೆ ನಮ್ಮ ಆಸೆ ಮತ್ತು ಆಶೋತ್ತರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಾಗಿದೆ. ದೊಡ್ಡ ಮನೆ ಅಥವಾ ದುಬಾರಿ ವಸ್ತುಗಳ ವ್ಯಾಮೋಹಕ್ಕೆ ಬೀಳದೆ ಅಗತ್ಯಕ್ಕೆ ತಕ್ಕಂತೆ ಸರಳ ಜೀವನ ನಡೆಸುವುದು ಅಪರಿಗ್ರಹದ ಭಾಗವಾಗಿದೆ. ಮಹಾತ್ಮ ಗಾಂಧೀಜಿಯವರು ಈ ತತ್ವದ ಉನ್ನತ ಹಂತವನ್ನು ತಲುಪಿದ್ದರು. ಕೇವಲ ಒಂದು ಜೋಡಿ ವಸ್ತ್ರ ಧರಿಸಿ ಇಡೀ ದೇಶಕ್ಕೆ ಮಾರ್ಗದರ್ಶಿಯಾದರು ಎಂದು ಸ್ಮರಿಸಿದರು.ವೈಯಕ್ತಿಕ ಆಸೆ, ಕೋಪ ಹಾಗೂ ಭಾವನೆಗಳಿಗೆ ನಿಯಂತ್ರಣ ಅತ್ಯಗತ್ಯ. ನಮ್ಮ ಮನಸ್ಸೇ ನಮಗೆ ಕನ್ನಡಿ. ನಾವು ಮಾಡುತ್ತಿರುವುದು ಸರಿಯೋ, ತಪ್ಪೋ ಎಂಬುದು ನಮ್ಮ ಅಂತರಂಗಕ್ಕೆ ಸ್ಪಷ್ಟವಾಗಿ ತಿಳಿದಿರುತ್ತದೆ. ಆದ್ದರಿಂದ ಜಂಬ, ದುಂದುವೆಚ್ಚ ಹಾಗೂ ಅನಗತ್ಯ ಕೋಪವನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳುತ್ತಾ, ಆತ್ಮಸಂಯಮ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ಸತ್ಯಾಗ್ರಹ ಮತ್ತು ಸೇವಾ ಮನೋಭಾವದ ತತ್ವಗಳು ಇಂದಿಗೂ ಸಾರ್ವಕಾಲಿಕವಾಗಿದ್ದು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಅವರ ಜೀವನವೇ ದಿಕ್ಸೂಚಿಯಾಗಿವೆ ಎಂದು ತಿಳಿಸಿದರು.ಮಹಾತ್ಮ ಗಾಂಧೀಜಿಯವರ ನನ್ನ ಜೀವನವೇ ನನ್ನ ಸಂದೇಶ ಎಂಬ ಮಾತು ಪ್ರತಿಯೊಬ್ಬರಿಗೂ ಪ್ರೇರಣೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಪುಸ್ತಕ ಓದುವುದನ್ನು ಕಡಿಮೆ ಮಾಡಿ ಮೊಬೈಲ್, ಟಿವಿಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅವರಿಗೆ ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧೀಜಿಯವರ ತತ್ವಗಳನ್ನು ಅರ್ಥೈಸಲು, 1982ರಲ್ಲಿ ರಿಚರ್ಡ್ ಅಟನ್‍ಬರೋ ನಿರ್ದೇಶನದ ಮತ್ತು ಬೆನ್ ಕಿಂಗ್ಸ್‍ಲಿ ಅಭಿನಯದ ಗಾಂಧಿ ಚಲನಚಿತ್ರ ಪ್ರದರ್ಶಿಸಬೇಕು. ದೃಶ್ಯ ಮಾಧ್ಯಮದ ಮೂಲಕ ಮಕ್ಕಳಿಗೆ ಇತಿಹಾಸ ಮತ್ತು ಮೌಲ್ಯಗಳು ಸುಲಭವಾಗಿ ತಲುಪುತ್ತವೆ ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಕಲುಷಿತಗೊಳ್ಳುತ್ತಿರುವ ಪ್ರಸ್ತುತ ಸಮಾಜದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ನೈತಿಕತೆಯನ್ನು ಮರುಕಟ್ಟಲು ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ಮತ್ತೆ ಮನನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.ಜಾಗತಿಕ ಸಂಕಟಗಳಿಗೆ ಗಾಂಧಿ ತತ್ವಗಳೇ ದಾರಿದೀಪ:
ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಕುರಿತು ವೃತ್ತ ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ಉಪನ್ಯಾಸ ನೀಡಿ, ಇಂದಿನ ಜಾಗತಿಕ ಸಂಘರ್ಷ, ಯುದ್ಧದ ಭೀತಿ ಹಾಗೂ ಭಯೋತ್ಪಾದನೆಯಂತಹ ಪ್ರಚಲಿತ ಬಿಕ್ಕಟ್ಟುಗಳಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಶಾಂತಿ ತತ್ವಗಳೇ ಪ್ರಸ್ತುತ ಮತ್ತು ಶಾಶ್ವತ ಪರಿಹಾರವಾಗಿವೆ ಎಂದರು.ಅವರು, ಮಾನವೀಯ ಮೌಲ್ಯಗಳನ್ನು ಮತ್ತು ಗಾಂಧೀಜಿಯವರ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ನಡೆ-ನುಡಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂದಿನ ಜಾಗತಿಕ ಆತಂಕಗಳಿಂದ ಮುಕ್ತಿ ಹೊಂದಲು ಸಾಧ್ಯ. ಪ್ರಸ್ತುತ 21ನೇ ಶತಮಾನದ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಬಿಕ್ಕಟ್ಟುಗಳಿಗೆ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಚಿಂತನೆಗಳಲ್ಲೇ ಸಮಾಧಾನ ಮತ್ತು ಪರಿಹಾರವಿದೆ. ಇಬ್ಬರ ತತ್ವಗಳು ಕೇವಲ ಒಂದು ಕ್ಷಣಕ್ಕಷ್ಟೇ ಅಲ್ಲ, ಇಡೀ ಮಾನವ ಕುಲ ಇರುವವರೆಗೂ ಶಾಶ್ವತವಾಗಿರುತ್ತವೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯ ಹಾಗೂ ಸಹಬಾಳ್ವೆ ಮೂಡಿಸಲು ಪ್ರತಿಯೊಬ್ಬರೂ ತಾಳ್ಮೆ, ಸಹನೆ ಮತ್ತು ಕ್ಷಮಾ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದರು.ಇದೇ ಸಂದರ್ಭದಲ್ಲಿ ಚಿತ್ರದುರ್ಗ ಸಂತ ಜೋಸೆಫ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು. ಮೀನಾಕ್ಷಿ ಭಟ್ ಮತ್ತು ಸಂಗಡಿಗರು ಗಾಂಧೀಜಿಯವರ ಪ್ರಿಯವಾದ ಭಜನೆಗಳನ್ನು ಹಾಡಿದರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಅವರು ನಿರೂಪಿಸಿದರು.ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.