- ಎಆರ್‌ಜಿ ಕಲಾ- ವಾಣಿಜ್ಯ ಕಾಲೇಜಿನಲ್ಲಿ ಯುವ ಸೌರಭ-2026 ಕಾರ್ಯಕ್ರಮ ಉದ್ಘಾಟನೆ ।
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಭಾರತ, ಕರ್ನಾಟಕದ ಕಲೆಗಳಾದ ಭರತನಾಟ್ಯ, ಕಂಸಾಳೆ, ಡೊಳ್ಳು ಕುಣಿತದಂತಹ ನಮ್ಮ ನಾಡಿನ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಸಮರ್ಥ ಶಾಮನೂರು ಹೇಳಿದರು.
ನಗರದ ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ ಯುವ ಸೌರಭ-2026 (ಯುವ ಕಲಾವಿದರ ಸಾಂಸ್ಕೃತಿಕ ಸೌರಭ) ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ದೇಶ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಅದು ಬೆಳೆಯಬೇಕು. ಅದು ಬೆಳೆಯಲು ನಮ್ಮ ಕಲೆಗಳು ಉಳಿಯಬೇಕು. ದೇಶದ ಕಲೆ, ಸಂಸ್ಕೃತಿಗಳು ಅಳಿದರೆ ನಾಡಿನ ಇತಿಹಾಸ, ಹೆಮ್ಮೆ ಕಳೆದಂತೆ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಚಿತ್ತಾರ ಕಲೆ ಬಹಳ ಹೆಸರುವಾಸಿ. ಅದೇ ರೀತಿಯಲ್ಲಿ ಸಾಕಷ್ಟು ವಿವಿಧ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕಲೆಗಳು ಇವೆ. ನಾವು ಸಮಯದ ಅಭಾವದಿಂದ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಭಾರತ, ಕರ್ನಾಟಕದ ಇತಿಹಾಸ, ಸಂಸ್ಕಾರ ಬೆಳೆಸುವ ಕಾರ್ಯವನ್ನು ನಮ್ಮ ರಾಜ್ಯ ಸರ್ಕಾರ ಇಂತಹ ಯುವ ಸೌರಭ ಕಾರ್ಯಕ್ರಮಗಳ ಮೂಲಕ ಬೆಳಕಿಗೆ ತರುವಲ್ಲಿ ಮುಂದಾಗಿದೆ. ನಮ್ಮ ನಾಡಿನ ಕಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸರ್ಕಾರದಿಂದ ರಾಜ್ಯಾದ್ಯಂತ ಜಿಲ್ಲೆಯಲ್ಲಿ, ಗ್ರಾಮಗಳಲ್ಲಿ ಇರುವಂತಹ ಪ್ರತಿಭೆಗಳಿಗೆ ವೇದಿಕೆ ಅವಕಾಶ ಕಲ್ಪಿಸಿಕೊಡಬೇಕು ಈ ಮೂಲಕ ಕಲೆಗೆ ಗೌರವ ಸಲ್ಲಿಸಬೇಕು ಎಂದು ಯುವ ಸೌರಭ ಯುವ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಕರ್ನಾಟಕ ಸರ್ಕಾರ ಹಲವಾರು ಕಾರ್ಯಕ್ರಮಗಳ ಜೊತೆಗೆ ಶಾಲಾ ಕಾಲೇಜು ಮಕ್ಕಳಿಗೆ ತಮ್ಮ ಪ್ರತಿಭೆ ಅನಾವರಣಕ್ಕೆ ಯುವ ಸೌರಭದ ಮೂಲಕ ಅವಕಾಶ ಕಲ್ಪಿಸಿದೆ. ಪ್ರತಿಭೆ ಹೊರತರಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಿದೆ. ಸರ್ಕಾರದ ಜೊತೆಗೆ ಮಕ್ಕಳಿಗೆ ಎಸ್.ಎಸ್. ಜನಕಲ್ಯಾಣ ಟ್ರಸ್ಟ್ ಸೇರಿದಂತೆ ಅವರ ಸಮಾಜ, ಸಂಘ ಸಂಸ್ಥೆಗಳು ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿವೆ. ಅವುಗಳ ಸದುಪಯೋಗ ಅಗತ್ಯ ಎಂದರು.
ಬಂಜಾರ ಅಕಾಡೆಮಿ ಮಾಜಿ ಸದಸ್ಯ, ಜಾನಪದ ಕಲಾವಿದ ಸಿ.ಎಚ್.ಉಮೇಶ ನಾಯ್ಕ, ಎಆರ್‌ಜಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಬಿ.ಬೋರಯ್ಯ, ಪಿಯು ಕಾಲೇಜಿನ ಪ್ರಾಚಾರ್ಯ ಕೆ.ಬೊಮ್ಮಣ್ಣ, ವಿವಿಧ ವಿಭಾಗಗಳ ಉಪನ್ಯಾಸಕರು, ಕಲಾವಿದರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಸುಗಮ ಸಂಗೀತ, ವಚನ ಸಂಗೀತ, ಜಾನಪದ ಗೀತೆಗಳು, ಸಮೂಹ ನೃತ್ಯ, ನಾಟಕ, ವೀರಗಾಸೆ, ಡೊಳ್ಳು ಕುಣಿತ ಇತರೆ ಕಾರ್ಯಕ್ರಮಗಳು ನಡೆದವು.- - -
(ಬಾಕ್ಸ್) * ಯುವ ಸೌರಭವೆಂದರೆ ನಮ್ಮ ಸಾಂಸ್ಕೃತಿಕ ಸತ್ವ: ಡಾ.ರಾಮಚಂದ್ರಪ್ಪಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಇಂದಿನ ಬಹಳ ಯುವಕರ ಮುಖದಲ್ಲಿ ಚೈತನ್ಯ ಇಲ್ಲ. ಕಾರಣ ನಮ್ಮ ಬದುಕಿನ ವಿಧಾನ, ಆಹಾರ ಕ್ರಮ, ನಮ್ಮ ಚಿಂತನಾ ವಿಧಾನ. ಇವೆಲ್ಲ ನಮ್ಮನ್ನು ಹಿನ್ನೆಡೆಗೆ ಕರೆದೊಯ್ಯುತ್ತಿವೆ. ಯುವ ಸೌರಭ ಎಂದರೆ ನಮ್ಮ ಸಾಂಸ್ಕೃತಿಕ ಸತ್ವ ಎನ್ನುವುದನ್ನು ತಿಳಿದುಕೊಳ್ಳುವುದು. ನಮಗೆಲ್ಲಾ ಅಜ್ಜಿ ಕಥೆ ಹೇಳಿ ಬೆಳೆಸಿದ್ದರು. ಈಗ ಕಥೆಗಳೇ ಇಲ್ಲ. ನಾವು ಗೆಳೆಯರ ಜೊತೆಗೆ ಆಟ ಆಡುತ್ತಿದ್ದೆವು. ಈಗ ಬರೀ ಫೋನ್‌ನಲ್ಲಿ ಆಟವಾಡುತ್ತಿದ್ದೇವೆ. ಸಿನಿಮಾ ನಟರು ನಮ್ಮ ನಾಯಕರಲ್ಲ. ನಿಜವಾದ ನಾಯಕರು ಮಹಾತ್ಮಾ ಗಾಂಧಿ, ನೆಹರು, ಅಂಬೇಡ್ಕರ್, ಲೋಹಿಯಾ. ಇಂತಹ ವ್ಯಕ್ತಿಗಳ ಚಿಂತನೆಗಳನ್ನು ಓದಬೇಕಾಗಿದೆ. ಓದಿದರೆ ನಾಯಕತ್ವ ಗೊತ್ತಾಗುತ್ತದೆ ಎಂದರು.
- - -(ಟಾಪ್ ಕೋಟ್) ಯುವಜನರಿಗಾಗಿ ಸರ್ಕಾರ ಯುವ ಸೌರಭ ಕಾರ್ಯಕ್ರಮ ಆಯೋಜನೆ ಮಾಡಿದೆ. ಕೋ ಎಜುಕೇಷನ್ ಕಾಲೇಜಿನಲ್ಲಿ ಹುಡುಗರ ಸಂಖ್ಯೆ ಕಡಿಮೆಯಾಗಿದೆ. ಏಕೆ ಹುಡುಗರು ಕಡಿಮೆ ಇದ್ದಾರೆ ಎಂದರೆ ಅವರು ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗಿ ಸೋಷಿಯಲ್ ಮಿಡಿಯಾ ಚೆಲ್ಲುವ ಕಸವನ್ನು ಅದೇ ನಿಜವಾದ ಸತ್ಯ ಎಂದು ಕಳೆದುಹೋಗುತ್ತಿದ್ದಾರೆ. ನಮ್ಮ ಕಾಲದಲ್ಲಿ ಬಾಲ್ಯಾವಸ್ಥೆ, ಪ್ರೌಢಾವಸ್ಥೆ, ಯೌವನಾವಸ್ಥೆ, ವೃದ್ಧಾಪ್ಯ ಇದ್ದವು. ಇವುಗಳಲ್ಲಿ ಈಗ ಯೌವನಾವಸ್ಥೆ ಕಾಣೆಯಾಗಿದೆ.
- ಡಾ. ಎ.ಬಿ. ರಾಮಚಂದ್ರಪ್ಪ, ಸದಸ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ.- - -
-24ಕೆಡಿವಿಜಿ32: ದಾವಣಗೆರೆಯಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮವನ್ನು ಶಾಸಕ ಸಮರ್ಥ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಡಾ. ಎ.ಬಿ.ರಾಮಚಂದ್ರಪ್ಪ, ದಿನೇಶ ಕೆ.ಶೆಟ್ಟಿ, ರವಿಚಂದ್ರ ಇದ್ದರು. -24ಕೆಡಿವಿಜಿ33: ದಾವಣಗೆರೆಯಲ್ಲಿ ಶುಕ್ರವಾರ ನಡೆದ ಯುವ ಸೌರಭ ಕಾರ್ಯಕ್ರಮದಲ್ಲಿ ವೀರೇಶ್ವರ ಪುಣ್ಯಾಶ್ರಮದ ಮಾರುತಿ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. -24ಕೆಡಿವಿಜಿ34: ದಾವಣಗೆರೆಯಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮದಲ್ಲಿ ಬಾತಿಯ ಸಿದ್ದೇಶ ಮತ್ತು ತಂಡದವರು ಡೊಳ್ಳು ಕುಣಿತ ಪ್ರದರ್ಶಿಸಿದರು.