ಸಾರಾಂಶ
ಚಿಕ್ಕಮಗಳೂರು: ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಗೆ ಆದ್ಯತೆ ಕೊಡುವುದು ಪ್ರತಿಯೊಬ್ಬ ನಾಗರಿಕರ ಮೂಲ ಕರ್ತವ್ಯ. ಸ್ಥಳೀಯವಾಗಿ ಮನೆಯಂಗಳದ ಕಸವನ್ನು ಸ್ವಚ್ಛಗೊಳಿಸುವ ಮುಖಾಂತರ ಸರ್ಕಾರದ ಜತೆಗೆ ಕೈಜೋಡಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಕಲ್ಯಾಣನಗರದ ವೆಲ್‌ಫೇರ್ ಸೊಸೈಟಿ ಆಯೋಜಿಸಿದ್ಧ ಸಂಪೂರ್ಣ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮನುಷ್ಯ ಶಿಕ್ಷಣ, ಆರೋಗ್ಯಕ್ಕೆ ವಹಿಸುವ ಕಾಳಜಿ, ಸ್ವಚ್ಛತೆಗೂ ವಹಿಸಬೇಕು. ಮನೆಗಳ ಅಕ್ಕಪಕ್ಕದ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿದರೆ, ಪರಿಸರ ಉತ್ತಮವಾಗುವ ಜತೆಗೆ ಕುಟುಂಬದ ಆರೋಗ್ಯ ಕಾಪಾಡಬಹುದು ಎಂದ ಅವರು, ಮನೆ ಶೌಚಾಲಯ ಸ್ವಚ್ಛತೆಯಿಂದ ಕೂಡಿದ್ದರೆ ಮನೆಯಲ್ಲವೂ ಸ್ವಚ್ಛವಾಗಲಿದೆ ಎಂಬ ಸತ್ಯ ಅರಿಯಬೇಕು ಎಂದರು.ರಾಷ್ಟ್ರಪಿತ, ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಎಲ್ಲರ ಧ್ಯೇಯೋದ್ದೇಶವೇ ಸ್ವಚ್ಛತೆಗೆ ಮೊದಲ ಆದ್ಯತೆ. ಆ ನಿಟ್ಟಿನಲ್ಲಿ ಕಲ್ಯಾಣನಗರ ಸೇರಿದಂತೆ ಪ್ರತಿ ವಾರ್ಡಿನ ನಿವಾಸಿಗಳು ಕುಟುಂಬ ಹಾಗೂ ಸಮಾ ಜದ ಹಿತದೃಷ್ಟಿಯಿಂದ ಸಾಮಾಜಿಕ ಕಾರ್ಯದಲ್ಲಿ ಮುಂದಾದರೆ ಸುಂದರ ನಗರವನ್ನಾಗಿ ನಿರ್ಮಿಸಲು ಸಾಧ್ಯ ಎಂದು ಹೇಳಿದರು.ಈ ವಾರ್ಡಿನಲ್ಲಿ ಹಿಂದೆ ನಗರಸಭಾ ಸದಸ್ಯನಾಗಿ ಪಾರ್ಕ್ ಅಭಿವೃದ್ಧಿ, ದೇವಾಲಯ ನಿರ್ಮಿಸಲು ಶ್ರಮಿಸಿದ್ದೇನೆ. ಇದೇ ವಾತಾವರಣ ಮುಂದುವರಿಯಲು ಸ್ಥಳೀಯ ನಿವಾಸಿಗಳು ಸ್ವಚ್ಛತೆಗೆ ಮುತುವರ್ಜಿ ವಹಿಸಬೇಕು. ಮುಂದಿನ ದಿನಗಳಲ್ಲಿ ಕಲ್ಯಾಣನಗರ ಅಭಿವೃದ್ಧಿ ದೃಷ್ಟಿಯಿಂದ ಐದಾರು ತಿಂಗಳೊಳಗೆ ಬೆಂಗಳೂರು ಮಾದರಿಯಂತೆ ಅತ್ಯುತ್ತಮ ಪಾರ್ಕ್ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದರು.ಸೊಸೈಟಿ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಹೆಗ್ಡೆ ಮಾತನಾಡಿ, ಬಡಾವಣೆ ಅಥವಾ ಪಕ್ಕದಲ್ಲಿನ ಕಸವನ್ನು ಅವರಿರುವ ಶುಚಿ ಮಾಡುವರೆಂದು ಕಾಯುತ್ತಾ ಕೂರದೇ ನಮ್ಮ ಬಡಾವಣೆ ಹಿತದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಮುಂದಾಗಬೇಕು. ಶುಚಿತ್ವಕ್ಕೆ ನಿರ್ಲಕ್ಷ್ಯತನ ವಹಿಸಿದರೆ ಅನಾರೋಗ್ಯ ಎಂಬುದು ಕುಟುಂಬವನ್ನು ಕಾಡಲಿದೆ ಎಂದು ಎಚ್ಚರಿಸಿದರು.ಸೊಸೈಟಿ ಅಧ್ಯಕ್ಷ ಬಿ.ಎಸ್.ಹರೀಶ್ ಮಾತನಾಡಿ, ಇದೇ ಪ್ರಥಮ ಬಾರಿಗೆ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡಿದ್ದು ಮಂಗಳೂರಿನಿಂದ ಮಕ್ಕಳ ಭಜನಾ ತಂಡ ಕರೆಸಿ ಸಾರ್ವಜನಿಕರಲ್ಲಿ ಸ್ವಚ್ಛತೆ ಅರಿವು ಮೂಡಿಸಲಾಗುತ್ತಿದೆ. ಮೇ. 1ರ ಮುಂಜಾನೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವವರಿಗೆ ಲಕ್ಕಿಡಿಪ್ ಮುಖಾಂತರ ಅತ್ಯಮೂಲ್ಯ ಬಹುಮಾನ ನೀಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಸೊಸೈಟಿ ಉಪಾಧ್ಯಕ್ಷ ಉಮಾ ನಾಗೇಶ್, ಕಾರ್ಯದರ್ಶಿ ಎನ್.ಟಿ. ವೇಣುಗೋಪಾಲ್, ಸಹ ಕಾರ್ಯದರ್ಶಿ ಸುಧೀರ್‌ಕುಮಾರ್, ಖಜಾಂಚಿ ಎ.ಟಿ.ನಿಂಗರಾಜ್ ಉಪಸ್ಥಿತರಿದ್ದರು.